ಉಡುಪಿ: ಜಿಲ್ಲೆಯಲ್ಲಿ ತೆಂಗಿನ ಮರಗಳಿಗೂ ಕೊಳೆ ರೋಗ ತೀವ್ರವಾಗಿ ಬಾಧಿಸಿದ್ದು, ಈಗಾಗಲೇ ಅಡಿಕೆ ಕೊಳೆರೋಗದಿಂದ ಬೇಸತ್ತಿರುವ ರೈತರಿಗೆ ಬರೆ ಎಳೆದಂತಾಗಿದೆ.
ಈ ಬಾರಿ ಮೇ ತಿಂಗಳಿನಿಂದಲೇ ವಿಪರೀತ ಮಳೆ ಆರಂಭವಾಗಿದ್ದು, ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ನಿರಂತರ ಮಳೆಯ ಪರಿಣಾಮವಾಗಿ ತೆಂಗಿನ ಮರಗಳಲ್ಲೂ ಕೊಳೆ ರೋಗ ಕಾಣಿಸಿಕೊಂಡಿದೆ.
ತೆಂಗಿನಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ದಾರಣೆ ಇದ್ದು, ಈ ಸಂದರ್ಭದಲ್ಲೇ ಕೊಳೆ ರೋಗ ಕಾಣಿಸಿಕೊಂಡು ಕಾಯಿ ಉದುರಿ ಬುಡಕ್ಕೆ ಬೀಳುತ್ತಿದ್ದು, ರೈತರಲ್ಲಿ ಆತಂಕ ಉಂಟು ಮಾಡಿದೆ.
ಅಡಿಕೆ ತೋಟಗಳಲ್ಲಿ ಕೊಳೆ ರೋಗ ಉಲ್ಬಣಗೊಂಡ ಪರಿಣಾಮವಾಗಿ ಈ ಸಲ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ತೆಂಗಿಗೂ ಕೊಳೆ ರೋಗ ಬಾಧಿಸಿರುವುದರಿಂದ ಅದರ ಇಳುವರಿಯೂ ಕುಸಿತವಾಗುವ ಭೀತಿ ರೈತರನ್ನು ಕಾಡುತ್ತಿದೆ.
ತೆಂಗಿನ ಮರಗಳು ಎತ್ತರವಾಗಿ ಬೆಳೆಯುವುದರಿಂದ ಅವುಗಳ ಗೊನೆಗಳಿಗೆ ಬೋರ್ಡೊ ದ್ರಾವಣ ಮತ್ತು ಇತರ ಔಷಧಗಳನ್ನು ಸಿಂಪಡಿಸುವುದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಕೊಳೆ ರೋಗವು ಉಲ್ಬಣಗೊಳ್ಳುತ್ತಿದೆ ಎನ್ನುತ್ತಾರೆ ಕೃಷಿಕರು.
ಮಳೆಗಾಲದ ಅವಧಿಯಲ್ಲಿ ಅಡಿಕೆ ತೋಟಕ್ಕೆ ಬೋರ್ಡೊ ದ್ರಾವಣ ಸಿಂಪಡಿಸಲು ಕಾರ್ಮಿಕರು ಸಿಗುತ್ತಿಲ್ಲ. ಅದರ ಜೊತೆ ತೆಂಗಿನ ಮರಗಳಿಗೂ ಬೋರ್ಡೊ ದ್ರಾವಣ ಸಿಂಪಡಿಸುವುದು ನಡೆಯದ ಕೆಲಸ ಎನ್ನುತ್ತಾರೆ ರೈತರು
ತೇವಾಂಶ ಹೆಚ್ಚಾಗುವುದರಿಂದ ಬೆಳೆಗಳಿಗೆ ಕೊಳೆ ರೋಗ ಬಾಧಿಸುತ್ತದೆ. ತೆಂಗಿನತೋಟಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಕೊಳೆರೋಗ ಹೆಚ್ಚಾಗಿ ಬಾಧಿಸುವುದಿಲ್ಲ. ಕೊಳೆ ರೋಗವು ತೆಂಗಿನ ಬೇರುಗಳಿಗೂ ಬಾಧಿಸುವುದರಿಂದ ಅನಂತರ ಕಾಯಿ ಉದುರಲು ಆರಂಭವಾಗುತ್ತದೆ. ಗರಿಗಳು ಕೂಡ ಕೊಳೆಯುತ್ತವೆ ಎನ್ನುತ್ತವೆ ತೋಟಗಾರಿಕಾ ಇಲಾಖೆಯ ಮೂಲಗಳು.
‘ಸುಮಾರು ವರ್ಷಗಳ ಬಳಿಕ ಈ ಬಾರಿ ತೆಂಗಿನ ಬೆಳೆಗೆ ಕೊಳೆ ರೋಗ ಬಾಧಿಸಿದೆ. ಇದರಿಂದ ಸಿಯಾಳ ಕಪ್ಪಾಗಿ ಉದುರಿ ಬೀಳುತ್ತಿದೆ. ಒಂದು ಸಿಯಾಳ ಕಪ್ಪಾದರೆ ಆ ಗೊನೆಯಲ್ಲಿರುವ ಎಲ್ಲಾ ಸಿಯಾಳಗಳು ಕಪ್ಪಾಗಿ ಉದುರಿ ಬೀಳುತ್ತಿವೆ’ ಎನ್ನುತ್ತಾರೆ ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್.
‘ಕೆಂಪು ಮೂತಿ ಹುಳು ಬಾಧೆಯು ಸಣ್ಣ ತೆಂಗಿನ ಮರಗಳ ಕಾಂಡಗಳಿಗೆ ಬಾಧಿಸಿದರೆ ದೊಡ್ಡ ತೆಂಗಿನ ಮರಗಳ ತುದಿಯ ಸುಳಿಗೆ ಬಾಧಿಸಿ ಸುಳಿ ತುಂಡಾಗಿ ಬೀಳುತ್ತಿದೆ’ ಎಂದೂ ಅವರು ತಿಳಿಸಿದರು.
Highlights - ಅತಿಯಾದ ಮಳೆಯಿಂದ ರೈತರಿಗೆ ಸಂಕಷ್ಟ ತೋಟಗಾರಿಕೆ ಬೆಳೆಗಳಿಗೂ ರೋಗ ಬಾಧೆ
ಜಿಲ್ಲೆಯ ವಿವಿಧೆಡೆ ಅಡಿಕೆಯ ಜೊತೆಗೆ ತೆಂಗಿನ ಬೆಳೆಗೂ ಕೊಳೆರೋಗ ಬಾಧಿಸಿದೆ. ಈ ಬಾರಿ ಅತಿಯಾದ ಮಳೆಯಿಂದಾಗಿ ತೋಟಗರಿಕಾ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆಕುದಿ ಶ್ರೀನಿವಾಸ ಭಟ್ ಪ್ರಧಾನ ಕಾರ್ಯದರ್ಶಿ ಉಡುಪಿ ಜಿಲ್ಲಾ ಕೃಷಿಕ ಸಂಘ
‘ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’
ಈ ಬಾರಿ ಮಳೆ ಜಾಸ್ತಿ ಸುರಿದಿರುವ ಪರಿಣಾಮವಾಗಿ ತೆಂಗಿನ ತೋಟಗಳಲ್ಲೂ ಕೊಳೆ ರೋಗ ಕಾಣಿಸಿಕೊಂಡಿದೆ. ಈ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್. ಜಿಲ್ಲೆಯಲ್ಲಿ ಶೇ 10 ರಿಂದ ಶೇ 20ರಷ್ಟು ತೆಂಗಿನ ಬೆಳೆಗೆ ಕೊಳೆ ರೋಗ ಬಾಧಿಸಿದೆ. ಕೊಳೆರೋಗ ಕಾಣಿಸಿಕೊಂಡಿರುವ ತೆಂಗಿನ ಮರಗಳ ಗೊನೆಗಳಿಗೆ ಶಿಲೀಂದ್ರ ನಾಶಕ ದ್ರಾವಣ ಅಥವಾ ಬೋರ್ಡೊ ದ್ರಾವಣವನ್ನು ಸಿಂಪಡಿಸಬಹುದಾಗಿದೆ ಎನ್ನುತ್ತಾರೆ ಅವರು.
ಕೊಳೆ ರೋಗ ತೇವಾಂಶ ಹೆಚ್ಚಾದಾಗ ಬರುವ ಕಾರಣದಿಂದಾಗಿ ತೆಂಗಿನ ಮರಗಳ ಬುಡಕ್ಕೆ ಎರೆಹುಳ ಗೊಬ್ಬರ ಮತ್ತು ಬೇವಿನ ಹಿಂಡಿ ಹಾಕಬಹುದು. 20 ವರ್ಷಕ್ಕಿಂತ ಮೇಲ್ಪಟ್ಟ ತೆಂಗಿನ ಮರಗಳಿಗೆ ಮೂರರಿಂದ ಐದು ಕೆ.ಜಿ.ಯಷ್ಟು ಬೇವಿನ ಹಿಂಡಿ ಹಾಕಬಹುದು. 20 ವರ್ಷಕ್ಕಿಂತ ಕೆಳಗಿನ ತೆಂಗಿನ ಮರಗಳಿಗೆ ಎರಡರಿಂದ ಮೂರು ಕೆ.ಜಿ.ಯಷ್ಟು ಬೇವಿನ ಹಿಂಡಿ ಹಾಕಬಹುದು. ಬೇವಿನ ಹಿಂಡಿಯು ತೇವಾಂಶ ನಿಯಂತ್ರಿಸಲು ಸಹಕಾರಿಯಾಗಿದ್ದು ಇದರಿಂದ ರೋಗವು ನಿಯಂತ್ರಣಕ್ಕೆ ಬರಬಹುದು ಎಂದು ತಿಳಿಸಿದರು.
ಕಾಡುತ್ತಿದೆ ಕೆಂಪು ಮೂತಿ ಹುಳ
ಈ ಬಾರಿ ತೆಂಗಿನ ಮರಗಳಿಗೆ ಕೊಳೆ ರೋಗದ ಜೊತೆ ಕೆಂಪುಮೂತಿ ಹುಳುವಿನ ಕಾಟ ಕೂಡ ಆರಂಭವಾಗಿದ್ದು ಕೃಷಿಕರನ್ನು ಕಂಗೆಡಿಸಿದೆ. ಕೆಂಪು ಮೂತಿ ಹುಳು ಕಾಂಡಗಳನ್ನು ಕೊರೆಯುವುದರಿಂದ ತೆಂಗಿನ ಕೃಷಿಗೆ ಮಾರಕವಾಗಿದೆ. ಇದರ ಕಾಟದಿಂದ ಪಾರಾಗಲು ತೆಂಗಿನ ಮರದ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಕಾಂಡದಲ್ಲಿ ಸಣ್ಣ ರಂಧ್ರಗಳು ಕಂಡು ಬಂದರೆ ಲೀಟರ್ ನೀರಿಗೆ 10 ಎಂ.ಎಲ್. ಇಮಿಡಾಕ್ಲೋಪ್ರಿಡ್ 10 ಎಂ.ಎಲ್. ಕ್ಲೋರ್‌ಪೈರಿಪಾಸ್ ಸೇರಿಸಿ ದ್ರಾವಣ ತಯಾರಿಸಿ ಸಿರಿಂಜ್ ಮೂಲಕ ರಂಧ್ರಗಳಿಗೆ ಸಿಂಪಡಿಸಬೇಕು ಎಂದು ತೋಟಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.