ADVERTISEMENT

ಉಡುಪಿ: ಮೌಢ್ಯ, ಅನಿಷ್ಠ ಸಂಪ್ರದಾಯಗಳಿಗೆ ಶ್ರೀತಾಳೆ ಮರಕ್ಕೆ ಕೊಡಲಿ

ಹಸಿವು, ಹಸಿರು, ಅಕ್ಷರ ಸಂಪತ್ತು ಕಾಪಾಡಿದ ಮರದ ರಕ್ಷಣೆಗೆ ಧಾವಿಸುವಂತೆ ಪ್ರೊ.ಎಸ್‌.ಎ.ಕೃಷ್ಣಯ್ಯ ಮನವಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 21:15 IST
Last Updated 20 ನವೆಂಬರ್ 2021, 21:15 IST
ಉಡುಪಿಯ ಪರೀಕದಲ್ಲಿರುವ ಕಾಡು ಶ್ರೀತಾಳೆ
ಉಡುಪಿಯ ಪರೀಕದಲ್ಲಿರುವ ಕಾಡು ಶ್ರೀತಾಳೆ   

ಉಡುಪಿ: ವಿಶ್ವದಲ್ಲಿ ಕೆಂಪುಪಟ್ಟಿಗೆ ಸೇರಿರುವ ಅಳಿವಿನಂಚಿನಲ್ಲಿರುವ ಶ್ರೀತಾಳೆ (ಸೀತಾಳೆ) ಮರಗಳು ಮನುಷ್ಯನ ಮೌಢ್ಯ ಹಾಗೂ ಅನಿಷ್ಠ ಸಂಪ್ರದಾಯಗಳಿಂದ ನಾಶವಾಗುತ್ತಿದ್ದು, ರಕ್ಷಣೆ ಮಾಡಬೇಕಾದ ತುರ್ತು ಅಗತ್ಯವಿದೆ ಎಂದು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕರಾದ ಪ್ರೊ.ಎಸ್‌.ಎ.ಕೃಷ್ಣಯ್ಯ ಮನವಿ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳಿಂದ ಹಸಿರು, ಹಸಿವು ಹಾಗೂ ಅಕ್ಷರ ಸಂಪತ್ತನ್ನು ಕಾಪಾಡಿಕೊಂಡು ಬಂದಿರುವ ಶ್ರೀತಾಳೆ ಮರಗಳು ಅವನತ್ತಿಯತ್ತ ಸಾಗುತ್ತಿವೆ. ಶ್ರೀತಾಳೆ ಹೂಬಿಟ್ಟರೆ ಊರಿಗೆ ಬರ ಆವರಿಸುತ್ತದೆ, ಕೇಡು ಸಂಭವಿಸುತ್ತದೆ ಎಂಬ ಮೌಢ್ಯ ಜನರಲ್ಲಿದ್ದು, ಮರಗಳನ್ನು ಕಡಿದು ಹಾಕಲಾಗುಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

66 ವರ್ಷಗಳಿಗೊಮ್ಮೆ ಶ್ರೀತಾಳೆ ಮರ ಹೂ ಬಿಟ್ಟು, 2 ಲಕ್ಷಕ್ಕೂ ಹೆಚ್ಚು ಬೀಜಗಳನ್ನು ಬಿಡುತ್ತದೆ. ನಂತರ ಮರ ತಾನಾಗೇ ಸಾಯುತ್ತದೆ. ಮರ ಬೀಜ ಕಟ್ಟುವ ಮೊದಲೇ ಮರಗಳನ್ನು ಕಡಿದು ಹಾಕಲಾಗುತ್ತಿರುವುದರಿಂದ ಶ್ರೀತಾಳೆ ಪ್ರಬೇಧ ಅವನತಿಯತ್ತ ಸಾಗಿದೆ ಎಂದರು.

ADVERTISEMENT

ಶ್ರೀತಾಳೆ ಮರದಲ್ಲಿರುವ ತಿರುಳು ಬರಗಾಲದಲ್ಲಿ ಆಹಾರವಾಗಿ ಬಳಕೆಯಾಗುತ್ತಿತ್ತು. 200 ರಿಂದ 250 ಕೆ.ಜಿ.ಯಷ್ಟು ಸಬ್ಬಕ್ಕಿಯಂತ ಹಿಟ್ಟು ತಿರುಳಿನಿಂದ ಲಭ್ಯವಾಗುತ್ತಿತ್ತು. ಕಂಪನ ರೋಗಕ್ಕೆ ಶ್ರೀತಾಳೆ ರಾಮಬಾಣ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಮರದ ತಿರುಳಿನಲ್ಲಿ ಅತಿ ಹೆಚ್ಚು ಪ್ರೊಟಿನ್ ಅಂಶವಿದ್ದು, ಔಷಧೀಯ ಗುಣಗಳನ್ನು ಒಳಗೊಂಡಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಪ್ರೊ.ಎಸ್‌.ಎ.ಕೃಷ್ಣಯ್ಯ ಒತ್ತಾಯಿಸಿದರು.

ಇತಿಹಾಸ, ಪುರಾಣ, ಪ್ರಾಚೀನ ಕಾವ್ಯಗಳನ್ನು ಅಕ್ಷರ ರೂಪಕ್ಕಿಳಿಸಲು ಶ್ರೀತಾಳೆ ಮರಗಳ ಗರಿಗಳನ್ನು ತಾಡೋಲೆ ಗ್ರಂಥಗಳಾಗಿ ಬಳಕೆ ಮಾಡಲಾಗುತ್ತಿತ್ತು. ಇಂದಿಗೂ ಮರದ ಗರಿಗಳನ್ನು ತಾಡೋಲೆಯಾಗಿ ಬಳಸುವ ಪ್ರತೀತಿ ಕೆಲವು ದೇವಸ್ಥಾನಗಳಲ್ಲಿ ರೂಢಿಯಲ್ಲಿದೆ. ಬೆಟ್ಟ ಜರಿಯುವುದನ್ನು ತಪ್ಪಿಸಲು, ಮಣ್ಣಿನ ಸವಕಳಿ ತಡೆಗೆ ಶ್ರೀತಾಳೆ ಮರಗಳು ಬಹಳ ಉಪಯುಕ್ತವಾಗಿದ್ದು, ಕಾಡಿನೊಳಗೆ ಹೆಚ್ಚು ಗಿಡಗಳನ್ನು ನೆಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ಭಟ್‌, ಶೃತೇಶ್ ಆಚಾರ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.