ಉಡುಪಿ: ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ಗಾಗಿ ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ಮುಂಡ್ಕಿನಜಡ್ಡುವಿನ ದೀಕ್ಷಾ ವಿ. ಅವರು ಆ. 21 ರಿಂದ ಆರಂಭಿಸಿರುವ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನವು ಗುರುವಾರ ಸಂಜೆ 5.30ಕ್ಕೆ 170 ಗಂಟೆಗಳನ್ನು ದಾಟಿತು.
ಈ ಮೂಲಕ ಅವರು ಮಂಗಳೂರಿನ ರೆಮೊನಾ ಇವೆಟ್ ಪಿರೇರಾ ಅವರ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಉಡುಪಿಯ ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ದೀಕ್ಷಾ ಅವರು 170 ಗಂಟೆಗಳ ಭರತನಾಟ್ಯ ಪ್ರದರ್ಶನ ಪೂರೈಸಿದಾಗ ನೆರೆದಿದ್ದವರು ಹೂಮಳೆ ಸುರಿಸುವ ಮೂಲಕ ಅವರನ್ನು ಅಭಿನಂದಿಸಿದರು.
ಈ ದಾಖಲೆಗೆ ಸಾಕ್ಷಿಯಾಗಿದ್ದ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಸಂಸ್ಥೆಯ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಷ್ಣೋಯಿ ಮತನಾಡಿ, ಸಣ್ಣ ಹಳ್ಳಿಯೊಂದರ ಸಾಮಾನ್ಯ ಕುಟುಂಬದ ಹುಡುಗಿ ದೀಕ್ಷಾ ಅವರು ದೊಡ್ಡ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ್ದ ರೆಮೊನಾ ಅವರ ದಾಖಲೆಯನ್ನು ದೀಕ್ಷಾ ಅವರು ಮುರಿದಿದ್ದಾರೆ ಎಂಬುದನ್ನು ಅಧಿಕೃತವಾಗಿ ಹೇಳುತ್ತೇನೆ. ದೀಕ್ಷಾ ಅವರು 216 ಗಂಟೆಗಳ ಗುರಿ ಹೊಂದಿದ್ದು, ನೃತ್ಯ ಮುಂದುವರಿಸಿದ್ದಾರೆ. ಎಷ್ಟು ಗಂಟೆಗಳ ವರೆಗೆ ಅವರು ನೃತ್ಯ ಮುಂದುವರಿಸುತ್ತಾರೆ ಎಂಬುದನ್ನು ಕಾದು ನೋಡುವ ಎಂದು ಹೇಳಿದರು.
ಮಣಿಪಾಲದ ರತ್ನ ಸಂಜೀವ ಕಲಾಮಂಡಲವು ದೀಕ್ಷಾ ಅವರಿಗೆ ಬೆನ್ನೆಲುಬಾಗಿ ನಿಂತಿದೆ. ದೀಕ್ಷಾ ಅವರ ನೃತ್ಯ ಗುರು ವಿದ್ವಾನ್ ಶ್ರೀಧರ ರಾವ್, ತಂದೆ ವಿಠಲ್ ಪೂಜಾರಿ, ತಾಯಿ ಶುಭ, ಪತಿ ರಾಹುಲ್, ಮಾಜಿ ಶಾಸಕ ರಘುಪತಿ ಭಟ್, ಉದ್ಯಮಿ ಜಿ. ಶಂಕರ್, ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.