
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಇದೇ 26 ರಿಂದ 28 ರವರೆಗೆ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣದ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕನವರ ವಿಷಯಾಧಾರಿತ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಪುಷ್ಪ ಪ್ರದರ್ಶನದ ಉದ್ಘಾಟನೆಯನ್ನು 26 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೆರವೇರಿಸುವರು ಎಂದು ತಿಳಿಸಿದರು.
ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಫಲಪುಷ್ಪ ಪ್ರದರ್ಶನದ ಅಂಗವಾಗಿ ಸುಮಾರು 26 ಜಾತಿಯ 7000 ದಷ್ಟು ಪೆಟೂನಿಯ, ಸೆಲೋಷಿಯಾ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್, ಬಾಲ್ಸಮ್, ತೊರೇನಿಯ, ಗುಲಾಬಿ, ಟೆಕೋಮಾ ಮೊದಲಾದ ಗಿಡಗಳನ್ನು ಜೋಡಿಸಲಾಗುವುದು ಎಂದರು.
ಸಾಲುಮರದ ತಿಮ್ಮಕ್ಕನವರ ಜೀವನ ಮತ್ತು ಸಾಧನೆಗಳ ಬಗ್ಗೆ ಕಲಾ ಕೃತಿಗಳ ಪ್ರದರ್ಶನ, ಗುಲಾಬಿ, ಸೇವಂತಿಗೆ ಮುಂತಾದ ಹೂವುಗಳನ್ನು ಬಳಸಿ ವಿವಿಧ ಕಲಾಕೃತಿಗಳನ್ನು ತಯಾರಿಸಲಾಗುವುದು. ತೆಂಗಿನ ಗರಿಗಳಿಂದ ಜಾನೂರ್ ಆರ್ಟ್ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.
ಫಲಪುಷ್ಟ ಪ್ರದರ್ಶನದಲ್ಲಿ 26 ರಂದು ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣ ಕುರಿತು, 27 ರಂದು ಉಡುಪಿ ಮಲ್ಲಿಗೆ ಹಾಗೂ ಮಟ್ಟು ಗುಳ್ಳ ಬದನೆ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಕುರಿತು ಹಾಗೂ 28 ರಂದು ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಹಾಗೂ ನಿರ್ವಹಣೆ ವಿಚಾರವಾಗಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬೆಳಿಗ್ಗೆ 10 ರಿಂದ ಸಂಜೆ 8 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆದಿರುವಂತಹ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರು ಬೆಳೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದ್ದು, ಆಸಕ್ತರು 25 ರಂದು ಸಂಜೆ 3 ಗಂಟೆಗೆ ತೋಟಗಾರಿಕೆ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.