ಉಡುಪಿ: ಮೇ ತಿಂಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಮಳೆ ಬಿಸಿಲಿನ ವಾತಾವರಣದಿಂದಾಗಿ ಜಿಲ್ಲೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಗೆ ರಸ್ಟ್ ಫಂಗಸ್ (ತುಕ್ಕು ಶಿಲೀಂಧ್ರ) ರೋಗ ತಗುಲಿ ಬೆಳೆಗಾರರಿಗೆ ಬರೆ ಎಳೆದಿದೆ.
ಜಿಲ್ಲೆಯ ಕಾರ್ಕಳ, ಕುಂದಾಪುರ ತಾಲ್ಲೂಕುಗಳಲ್ಲಿ ಹೆಚ್ಚು ಡ್ರಾಗನ್ ಬೆಳೆಗಾರರಿದ್ದಾರೆ. ಡ್ರ್ಯಾಗನ್ ಬೆಳೆಯು ಕರಾವಳಿಯ ಹವಾಮಾನಕ್ಕೆ ಸೂಕ್ತವಾದ ಬೆಳೆಯಲ್ಲ ಎಂಬ ಅಭಿಪ್ರಾಯದ ನಡುವೆಯೂ ಹೆಚ್ಚಿನ ಬೆಳೆಗಾರರು ಡ್ರ್ಯಾಗನ್ ಫ್ರೂಟ್ ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದರು.
ರಸ್ಟ್ ಫಂಗಸ್ ರೋಗ ಆರಂಭದಿಂದಲೇ ಈ ಬೆಳೆಗೆ ಕಾಡಿದ್ದರೂ ಈಗ ಮಿತಿ ಮೀರಿದೆ ಎನ್ನುತ್ತಾರೆ ಹಲವು ರೈತರು. ಸಾಮಾಜಿಕ ಮಾಧ್ಯಮಗಳಲ್ಲಿ ಡ್ರ್ಯಾಗನ್ ಬೆಳೆಯ ಬಗೆಗಿನ ವಿಡಿಯೊಗಳನ್ನು ನೋಡಿ ಈ ಕೃಷಿಯತ್ತ ಚಿತ್ತ ಹರಿಸಿದವರೂ ಹಲವರಿದ್ದಾರೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಇಂತಹ ರೈತರ ಸಂಖ್ಯೆ ಹೆಚ್ಚಾಗಿದೆ. ಅವರಲ್ಲಿ ಹೆಚ್ಚಿನವರು ಉತ್ತಮ ಇಳುವರಿ ಪಡೆದರೂ ಗಿಡಗಳಿಗೆ ಬಾಧಿಸುವ ಶಿಲೀಂಧ್ರ ರೋಗ ಅವರನ್ನು ದೃತಿಗೆಡಿಸಿದೆ.
ಡ್ರ್ಯಾಗನ್ ಫ್ರೂಟ್‌ನ ಗಿಡಗಳ ಕೆಲವು ಭಾಗಗಳು ಹಳದಿ ಬಣ್ಣಕ್ಕೆ ತಿರುಗಿ ಅಲ್ಲಿ ಚುಕ್ಕಿಗಳು ಕಾಣಿಸುತ್ತವೆ ಅದರ ಮೇಲೆ ಮಳೆ ನೀರು ನಿಂತರೆ ಕೊಳೆತು ಹೋದಂತಾಗುತ್ತದೆ. ಇಂತಹ ಗಿಡದಲ್ಲಿ ಬೆಳೆಯುವ ಹಣ್ಣುಗಳು ಕೂಡ ಬಣ್ಣ ಕಳೆದುಕೊಳ್ಳುತ್ತವೆ ಮತ್ತು ಅದು ಮಾರಾಟಕ್ಕೆ ಯೋಗ್ಯವಾಗಿರುವುದಿಲ್ಲ ಎನ್ನುತ್ತಾರೆ ಬೆಳೆಗಾರರು.
ಶಿಲೀಂಧ್ರ ರೋಗದ ಕಾರಣದಿಂದಾಗಿ ಈ ಬಾರಿ ಇಳುವರಿ ಕುಸಿದಿದೆ ಎನ್ನುತ್ತಾರೆ ಬಹುತೇಕ ರೈತರು . ಈ ರೋಗವು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತದೆ ಎಂದೂ ಹೇಳುತ್ತಾರೆ.
ಈ ರೋಗಕ್ಕೆ ಯಾವ ಔಷಧಿ ಸಿಂಪಡಿಸಬೇಕೆಂದು ತೋಚುತ್ತಿಲ್ಲ. ಸುಣ್ಣದ ನೀರನ್ನು ಸಿಂಪಡಿಸುತ್ತೇವೆ. ಅದರಿಂದ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ತೋಟಗಾರಿಕಾ ಇಲಾಖೆ ಕೂಡ ಸೂಕ್ತವಾದ ಮಾರ್ಗದರ್ಶನ ನೀಡುತ್ತಿಲ್ಲ ಎನ್ನುತ್ತಾರೆ ಡ್ರ್ಯಾಗನ್ ಫ್ರೂಟ್ ಬೆಳೆಗಾರರು.
ಡ್ರ್ಯಾಗನ್ ಫ್ರೂಟ್ ಏಪ್ರಿಲ್‌ನಿಂದ ನವೆಂಬರ್ ತಿಂಗಳವರೆಗೆ ಕೊಯ್ಲಿಗೆ ಬರುತ್ತದೆ ಈ ಅವಧಿಯಲ್ಲಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಕೆ.ಜಿ.ಗೆ ₹200 ರಿಂದ ₹250 ದರದಲ್ಲಿ ಮಾರಾಟವಾಗುತ್ತದೆ. ಬೆಳೆಗಾರರು ಬೆಳೆದ ಹಣ್ಣುಗಳನ್ನು ಗ್ರಾಹಕರು ತೋಟಗಳಿಂದಲೇ ಖರೀದಿಸುವುದರಿಂದ ಮಾರುಕಟ್ಟೆ ಸಮಸ್ಯೆಯೂ ತಲೆದೋರುವುದಿಲ್ಲ.
ಡ್ರ್ಯಾಗನ್ ಫ್ರೂಟ್ ಗಿಡಗಳಿಗೆ ಮಳೆ ನೀರು ಬೀಳದಂತೆ ಪ್ಲಾಸ್ಟಿಕ್ ಅಳವಡಿಸಿದರೆ ಶಿಲೀಂಧ್ರ ರೋಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಆದರೆ ಎಲ್ಲರಿಗೂ ಈ ರೀತಿ ಮಾಡಲು ಸಾಧ್ಯವಾಗದು ಎನ್ನುತ್ತಾರೆ ಕಾರ್ಕಳದ ಸಾಣೂರಿನ ಡ್ರ್ಯಾಗನ್ ಫ್ರೂಟ್ ಬೆಳೆಗಾರ ಆಂಟನಿ.
ಬೆಳೆ ಪ್ರಯೋಗಕ್ಕಿಳಿದ ರೈತರಿಗೆ ಸಂಕಷ್ಟ ಉಲ್ಬಣಿಸಿದ ರೋಗ: ಸಿಗದ ಪರಿಹಾರ ಅಧಿಕ ಬೇಡಿಕೆ ಇದ್ದರೂ ಪೂರೈಕೆಯಾಗದ ಹಣ್ಣುಗಳು
ಅತಿಯಾದ ಮಳೆ ವಾತಾವರಣದಲ್ಲಿ ತೇವಾಂಶ ಅಧಿಕವಾದರೆ. ಡ್ರ್ಯಾಗನ್ ಫ್ರೂಟ್ ಗಿಡಗಳಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಳ್ಳುತ್ತದೆ. ಲೀಟರ್ ನೀರಿಗೆ 2 ಗ್ರಾಂನಷ್ಟು ಕಾಪರ್ ಆಕ್ಸಿಕ್ಲೋರೈಡ್ ಅನ್ನು ಮಿಶ್ರಣ ಮಾಡಿ ಸಿಂಪಡಿಸಬೇಕುದಯಾನಂದ ಹಿರಿಯ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ
ಡ್ರ್ಯಾಗನ್ ಫ್ರೂಟ್‌ಗೆ ಜಿಲ್ಲೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಈ ಕೃಷಿಯಲ್ಲಿ ಉತ್ತಮ ಆದಾಯ ಪಡೆಯಬಹುದು. ಆದರೆ ಶಿಲೀಂಧ್ರ ರೋಗ ಬೆಳೆಗಾರರನ್ನು ನಿರುತ್ಸಾಹಗೊಳಿಸಿದೆವಾಸು ಜೆ.ಕೆ. ಡ್ರ್ಯಾಗನ್ ಫ್ರೂಟ್ ಬೆಳೆಗಾರ ಜಡ್ಕಲ್
‘ಮುಂಗಾರು ಪೂರ್ವ ಮಳೆಯ ಹೊಡೆತ’ ಡ್ರ್ಯಾಗನ್ ಫ್ರೂಟ್ ಗಿಡಗಳಿಗೆ ಬಾಧಿಸಿದ್ದ ಶಿಲೀಂಧ್ರ ರೋಗವು ಈ ಬಾರಿ ಮುಂಗಾರು ಪೂರ್ವ ಮಳೆಯು ಮೇ ತಿಂಗಳಲ್ಲಿ ನಿರಂತರವಾಗಿ ಸುರಿದ ಕಾರಣ ಇನ್ನಷ್ಟು ಉಲ್ಬಣಗೊಂಡು ಇಳುವರಿ ಕುಸಿದಿದೆ ಎನ್ನುತ್ತಾರೆ ಡ್ರ್ಯಾಗನ್ ಫ್ರೂಟ್ ಬೆಳೆಗಾರ ಇಗ್ನೇಷಿಯಸ್ ಡಿಸೋಜ. ಗಿಡದ ಕೆಲವು ಭಾಗಗಳು ಹಳದಿಯಾಗಿ ತುಕ್ಕು ಹಿಡಿದ ಹಾಗೆ ಕಾಣಿಸುತ್ತದೆ. ಆ ಭಾಗವನ್ನು ನಾವು ಕತ್ತರಿಸಿ ಬಿಸಾಡುತ್ತೇವೆ. ಜೊತೆಗೆ ಇಂತಹ ಗಿಡಗಳಲ್ಲಿ ಹಣ್ಣುಗಳು ಒಡೆದು ಹೋಗುವುದರಿಂದ ನಷ್ಟ ಸಂಭವಿಸಿದೆ. ಹತ್ತು ಬುಟ್ಟಿ ಹಣ್ಣು ಸಿಕ್ಕಿದರೆ ಅದರಲ್ಲಿ ಎರಡು ಬುಟ್ಟಿಗಳಷ್ಟು ಬಿರುಕು ಬಿಟ್ಟ ಹಣ್ಣುಗಳು ಸಿಗುತ್ತವೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.