
ಉಡುಪಿ: ಉತ್ಸವದ ಋತು ಆರಂಭವಾಗುತ್ತಿದ್ದಂತೆ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಿಡಿಮದ್ದು ಪ್ರದರ್ಶನವೂ ರಂಗೇರುತ್ತದೆ. ಇಂತಹ ಸಿಡಿಮದ್ದುಗಳನ್ನು ಸಂಗ್ರಹಿಸಿಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ದುರಂತಕ್ಕೆ ಕಾರಣವಾಗುತ್ತವೆ.
ತಿಂಗಳ ಹಿಂದೆ ಕುಂದಾಪುರ ನಗರದ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿದ್ದವು. ಅಲ್ಲಿನ ಅಂಗಡಿಯೊಂದರಲ್ಲಿ ಪಟಾಕಿಗಳ ಸಂಗ್ರಹವಿದ್ದುದರಿಂದ ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ವಿಸ್ತರಿಸಿತ್ತು.
ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಅಕ್ರಮವಾಗಿ ಪಟಾಕಿ ಸಂಗ್ರಹಿಸಿದ್ದ ಹಲವಾರು ಅಂಗಡಿ, ಮನೆಗಳಿಗೆ ದಾಳಿ ನಡೆಸಿ ಪಟಾಕಿಗಳನ್ನು ವಶಕ್ಕೆ ಪಡೆದಿದ್ದರು. ಪಟಾಕಿಗಳನ್ನು ಸಂಗ್ರಹಿಸಿಡುವಾಗ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸದ ಕಾರಣ ಪಟಾಕಿ ಸಂಗ್ರಹಿಸಿಟ್ಟವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು.
ಹೆಚ್ಚಿನ ಕಟ್ಟಡಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಅಗ್ನಿ ಅನಾಹುತ ಸಂಭವಿಸುತ್ತದೆ. ಆದರೆ ಪಟಾಕಿ ಮೊದಲಾದ ಅಗ್ನಿಕಾರಕಗಳ ದಾಸ್ತಾನು ಇದ್ದರೆ ಅಗ್ನಿಯ ತೀವ್ರತೆ ಹೆಚ್ಚುತ್ತದೆ ಎನ್ನುತ್ತವೆ ಅಗ್ನಿಶಾಮಕದಳದ ಮೂಲಗಳು.
ಕೆಲ ದಿನಗಳ ಹಿಂದೆ ಕುಂದಾಪುರ ತಾಲ್ಲೂಕಿನ ಸಿದ್ದಾಪುರದ ಜನ್ಸಾಲೆ ಎಂಬಲ್ಲಿನ ಆಯಿಲ್ ಮಿಲ್‌ನಲ್ಲೂ ಭಾರಿ ಬೆಂಕಿ ಅನಾಹುತ ಸಂಭವಿಸಿತ್ತು. ಅಲ್ಲಿನ ಬೆಂಕಿಯನ್ನು ನಂದಿಸಲೂ ಅಗ್ನಿಶಾಮಕ ದಳದವರು ಹರಸಾಹಸ ಪಡಬೇಕಾಯಿತು.
ಬೇಸಿಗೆ ಹತ್ತಿರವಾಗುತ್ತಿದ್ದಂತೆ ಅಲ್ಲಲ್ಲಿ ಕುರುಚಲು ಗುಡ್ಡಗಳಿಗೆ ಬೆಂಕಿ ಬೀಳುವುದು ಸಾಮಾನ್ಯವಾಗಿದೆ, ಸಣ್ಣ ಪ್ರಮಾಣದಲ್ಲಿ ಕಾಳ್ಗಿಚ್ಚುಗಳೂ ಕಾಣಿಸಿಕೊಳ್ಳುತ್ತವೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಕಾಳ್ಗಿಚ್ಚಿನ ಅಪಾಯಗಳು ಸದಾ ಇದ್ದೇ ಇರುತ್ತವೆ.
ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಹಾಗೂ ಬಂದರು ಇರುವುದರಿಂದ ಅಗ್ನಿಶಾಮಕ ದಳವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯ ಇದೆ ಎನ್ನುತ್ತಾರೆ ಜನರು. ಮಲ್ಪೆಯ ಸರ್ವಋತು ಬಂದರಿನಲ್ಲಿ ಸಾವಿರಾರು ಬೋಟ್‌ಗಳು ನಿಲುಗಡೆಯಾಗುತ್ತಿದ್ದು, ಇಲ್ಲಿ ಅಗ್ನಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಬೇಡಿಕೆಗಳು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ.
ಪಟಾಕಿ ಅಂಗಡಿಗಳು ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಿಸಬೇಕು. ತಾತ್ಕಾಲಿಕವಾಗಿ ಪಟಾಕಿ ಸಂಗ್ರಹಿಸಿಡುವುದಾದರೆ ಎಂಟು ಅಥವಾ 10 ದಿವಸಗಳ ಪರವಾನಗಿ ಪಡೆಯಬೇಕು. ಮನೆ ಗೋದಾಮು ಮೊದಲಾದೆಡೆ ದಾಸ್ತಾನು ಇರಿಸುವಂತಿಲ್ಲಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಅಗ್ನಿಶಾಮಕ ದಳದ ಠಾಣೆಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ತುರ್ತು ಸಂದರ್ಭಗಳಲ್ಲಿ ಬೇರೆ ಜಿಲ್ಲೆಗಳ ಅಗ್ನಿಶಾಮಕ ದಳದವರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಬರುತ್ತದೆನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ
ಅಗ್ನಿಶಾಮಕ ದಳಕ್ಕೆ ಬೇಕಿದೆ ಬಲ
ಉಡುಪಿ ಮಲ್ಪೆ ಬೈಂದೂರು ಕುಂದಾಪುರ ಮತ್ತು ಕಾರ್ಕಳದಲ್ಲಿ ಅಗ್ನಿಶಾಮಕದಳದ ಠಾಣೆಗಳಿದ್ದು ಬ್ರಹ್ಮಾವರ ಮಣಿಪಾಲ ಹೆಬ್ರಿ ಮೊದಲೆಡೆಯೂ ಠಾಣೆಗಳನ್ನು ಆರಂಭಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಅಗ್ನಿಶಾಮಕ ದಳದ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಜಲವಾಹನಗಳ ಕೊರತೆ ಇದ್ದು ಈ ಸಮಸ್ಯೆಯನ್ನು ಆದ್ಯತೆಯ ಮೇಲೆ ಪರಿಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ. ಜಿಲ್ಲೆಯ ವಿವಿಧ ಅಗ್ನಿಶಾಮಕ ದಳದ ಠಾಣೆಗಳಲ್ಲಿ ಒಟ್ಟು ಐದು ಅಗ್ನಿಶಾಮಕ ವಾಹನಗಳಿದ್ದು ತುರ್ತು ಸಂದರ್ಭಗಳಲ್ಲಿ ಬೇರೆ ಕಡೆಗಳಿಂದ ಅಗ್ನಿಶಾಮಕ ವಾಹನಗಳನ್ನು ಕರೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 15 ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ರಸ್ತೆಗೆ ಇಳಿಸಬಾರದು ಎಂಬ ಕೇಂದ್ರ ಸರ್ಕಾರದ ಮಾರ್ಗಸೂಚಿ ಜಾರಿಗೆ ಬಂದ ಬಳಿಕ ಹಳೆಯ ಜಲವಾಹನಗಳು ನಿಷ್ಪ್ರಯೋಜಕವಾಗಿ ಜಲವಾಹನಗಳ ಕೊರತೆ ಕಾಡುತ್ತಿದೆ. ಪ್ರತಿಯೊಂದು ಠಾಣೆಗೂ ಎರಡು ಜಲವಾಹನಗಳು ಬೇಕೆಂಬ ಬೇಡಿಕೆಗಳೂ ಕೇಳಿ ಬಂದಿವೆ.
ಟೆಂಡರ್ ಪ್ರಕ್ರಿಯೆಯಲ್ಲಿದೆ
‘ಪಡುಬಿದ್ರಿಯಲ್ಲಿ ಹೊಸ ಅಗ್ನಿಶಾಮಕ ಠಾಣೆಯ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಬ್ರಹ್ಮಾವರದಲ್ಲಿ ಹೊಸ ಠಾಣೆಗೆ ಜಾಗ ಮಂಜೂರಾಗಿ ಟೆಂಡರ್ ಹಂತದಲ್ಲಿದೆ. ಹೆಬ್ರಿ ಮತ್ತು ಮಣಿಪಾಲದಲ್ಲೂ ಜಾಗ ಮಂಜೂರಾಗಿದ್ದು ಠಾಣೆ ನಿರ್ಮಾಣ ಕಾರ್ಯ ಟೆಂಡರ್ ಹಂತದಲ್ಲಿದೆ. ಶಿರ್ವ ಮತ್ತು ಸಿದ್ದಾಪುರದಲ್ಲೂ ಹೊಸ ಠಾಣೆಗೆ ಬೇಡಿಕೆ ಇದೆ’ ಎಂದು ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟ್ಕರ್ ತಿಳಿಸಿದ್ದಾರೆ. ‘ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ಮಂಗಳೂರಿನಿಂದಲೂ ಜಲವಾಹನ ಮತ್ತು ಸಿಬ್ಬಂದಿ ಬರುತ್ತಾರೆ. 15 ವರ್ಷಗಳಿಗಿಂತ ಹಳೆಯದಾದ ಜಲ ವಾಹನಗಳ ಬಳಕೆಯನ್ನು ಮೂರು ವರ್ಷಗಳಿಗೆ ಸರ್ಕಾರ ವಿಸ್ತರಿಸಿದೆ. ಆದರೆ ನಮ್ಮಲ್ಲಿನ ಹಳೆಯ ವಾಹನಗಳು 25 ವರ್ಷಗಳಿಗಿಂತಲೂ ಹಳೆಯವು. ಅವುಗಳನ್ನು ಬಳಕೆ ಮಾಡುವುದು ಕಷ್ಟ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.