ಉಡುಪಿ: ಲಾಕ್‌ಡೌನ್ ಸಡಿಲವಾದ ನಂತರ ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ಸಾರ್ವಜನಿಕರು ಸ್ವಂತ ಊರುಗಳಿಗೆ ಬರಲು ಅನುಮತಿ ಸಿಕ್ಕಿದ್ದು, ಜಿಲ್ಲೆಗೆ ಸಾವಿರಾರು ಮಂದಿ ಬಂದಿದ್ದು ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ ಕೆಲವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಅಡ್ಡಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲೆಯಲ್ಲಿ ಪ್ರತ್ಯೇಕ ಫ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್‌ಗಳು ಹಿಂದೆ ಚುನಾವಣಾ ಅಕ್ರಮ, ನೀತಿ ಸಂಹಿತೆ ತಡೆಗೆ ಕಾರ್ಯ ನಿರ್ವಹಿಸುತ್ತಿದ್ದ ಮಾದರಿಯಲ್ಲಿಯೇ ಕ್ವಾರಂಟೈನ್ ಉಲ್ಲಂಘನೆ ವಿರುದ್ಧವೂ ಕಾರ್ಯಾಚರಣೆ ಮಾಡಲಿದ್ದಾರೆ. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ದೂರು ಬಂದ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಿದ್ದಾರೆ.
ಜತೆಗೆ ಅವರನ್ನು ಮತ್ತೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವ ಕಾರ್ಯ ಮಾಡಲಿದ್ದಾರೆ. ಪ್ರತಿದಿನ ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಮನೆಯಲ್ಲಿದ್ದಾರೆಯೇ ಇಲ್ಲವೇ ಎಂಬ ಪರಿಶೀಲನೆ ನಡೆಸಲಿದ್ದು, ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೂ ಭೇಟಿನೀಡಿ ಪರಿಶೀಲನೆ ಮಾಡಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದ್ದು, ಉಡುಪಿ ನಗರಸಭೆ, ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ಕಾಪು, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು, ಕುಂದಾಪುರ, ವಂಡ್ಸೆ ವ್ಯಾಪ್ತಿಗೆ ಅಧಿಕಾರಿಗಳು ಮಾತ್ತು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪಿಡಿಒ, ಗ್ರಾಮ ಕರಣಿಕರು ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆಗೆ ಪ್ರತಿದಿನ ಭೇಟಿನೀಡಿ, ಮೊಬೈಲ್‌ನಲ್ಲಿ ಫೊಟೊ ತೆಗೆದು ಅಪ್‌ಲೋಡ್ ಮಾಡಬೇಕಿದೆ. ಈ ಕಾರ್ಯವು ವ್ಯವಸ್ಥಿತವಾಗಿ ನಡೆಯುತ್ತಿರುವ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಪರಿಶೀಲಿಸಲಿದ್ದಾರೆ ಎಂದುಮಾಹಿತಿ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.