ADVERTISEMENT

ಉಡುಪಿ: ಹೆಡ್‌ಕಾನ್‌ಸ್ಟೆಬಲ್ ರಾಜೇಶ್ ಕುಂದರ್‌ ಸಾವಿನ ಪ್ರಕರಣಕ್ಕೆ ತಿರುವು

​ಪ್ರಜಾವಾಣಿ ವಾರ್ತೆ
Published 1 ಮೇ 2022, 12:20 IST
Last Updated 1 ಮೇ 2022, 12:20 IST
ಮೃತ ಹೆಡ್‌ಕಾನ್‌ಸ್ಟೆಬಲ್ ರಾಜೇಶ್ ಕುಂದರ್‌
ಮೃತ ಹೆಡ್‌ಕಾನ್‌ಸ್ಟೆಬಲ್ ರಾಜೇಶ್ ಕುಂದರ್‌   

ಉಡುಪಿ: ಸಶಸ್ತ್ರ ಮೀಸಲು ಪಡೆಯ ಹೆಡ್‌ ಕಾನ್‌ಸ್ಟೆಬಲ್‌ ರಾಜೇಶ್ ಕುಂದರ್‌ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್‌ ಪತ್ತೆಯಾಗಿದೆ.

ಡಿಎಆರ್‌ ಎಪಿಸಿಗಳಾದ ಉಮೇಶ್‌ ಹಾಗೂ ಅಶ್ಫಕ್‌, ಗಂಗೊಳ್ಳಿ ಠಾಣೆಯ ಪಿಎಸ್‌ಐ ನಂಜಪ್ಪ ತನ್ನ ಸಾವಿಗೆ ಕಾರಣ ಎಂದು ರಾಜೇಶ್‌ ಕುಂದರ್‌ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳ ವಿರುದ್ಧ 306 ಆರ್‌ಡಬ್ಲ್ಯು, 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್‌ನೋಟ್ ಪತ್ತೆಯಾಗಿದ್ದು ಹೇಗೆ?

ADVERTISEMENT

ಮೃತ ರಾಜೇಶ್‌ ಕುಂದರ್ ಜತೆ ‘ಆದಿ ಉಡುಪಿ ಶಾಲೆ’ಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಉಡುಪಿ ಡಿಎಆರ್‌ ಘಟಕದ ಕಾನ್‌ಸ್ಟೇಬಲ್‌ ಗಣೇಶ್‌ ಶನಿವಾರ ಕರ್ತವ್ಯ ಮುಗಿಸಿಕೊಂಡು ಡಿಎಆರ್‌ ಮುಖ್ಯ ಕಚೇರಿಗೆ ಬಂದು ಕಿಟ್‌ ಬಾಕ್ಸ್‌ ಪರೀಶಿಲಿಸಿದ್ದಾರೆ. ಈ ಸಂದರ್ಭ ಬ್ಯಾಗ್‌ನಲ್ಲಿದ್ದ ಸಮವಸ್ತ್ರ ಹಾಗೂ ಬೆಡ್‌ಶೀಟ್ ಹೊರತೆಗೆದಾಗ ಡೆತ್‌ನೋಟ್‌ ಪತ್ತೆಯಾಗಿದೆ.

ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದ ಗಣೇಶ್‌ ಡೆತ್‌ನೋಟ್‌ ಅನ್ನು ನಗರ ಠಾಣೆಗೆ ಹಾಜರುಪಡಿಸಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

ಇದಕ್ಕೂ ಮುನ್ನ ಕರ್ತವ್ಯ ನಿರತರಾಗಿದ್ದ ಸಂದರ್ಭ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ರಾಜೇಶ್ ಕುಂದರ್ ಮೃತಪಟ್ಟಿದ್ದರು ಎಂದು ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.