ADVERTISEMENT

ಗಾಳಿ, ಮಳೆ: ಮರಗಳು ಧರಾಶಾಹಿ

ಜಿಲ್ಲೆಯಾದ್ಯಂತ ಬಿರುಸಿನ ಮಳೆ: ಹಲವು ಮನೆಗಳಿಗೆ ಭಾಗಶಃ ಹಾನಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:22 IST
Last Updated 26 ಜುಲೈ 2025, 6:22 IST
ಉಡುಪಿಯ ಕುಕ್ಕಿಕಟ್ಟೆಯ ವಿ.ಎ. ಕಚೇರಿಗೆ ಮರ ಬಿದ್ದಿರುವುದು
ಉಡುಪಿಯ ಕುಕ್ಕಿಕಟ್ಟೆಯ ವಿ.ಎ. ಕಚೇರಿಗೆ ಮರ ಬಿದ್ದಿರುವುದು   

ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರ ಗಾಳಿ ಸಹಿತ ಬಿರುಸಿನ ಮಳೆ ಸುರಿದಿದ್ದು, ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ.

ಉಡುಪಿ ನಗರವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಬೀಸಿದ ಭಾರಿ ಗಾಳಿಗೆ ಕುಕ್ಕಿಕಟ್ಟೆಯ ವಿ.ಎ. ಕಚೇರಿಗೆ ಮರವೊಂದು ಉರುಳಿ ಬಿದ್ದಿದೆ.

ಕುಕ್ಕಿಕಟ್ಟೆ ಇಂದಿರಾನಗರದಲ್ಲಿ ತೆಂಗಿನ ಮರವೊಂದು ಮನೆಯ ಮೇಲೆ ಉರುಳಿ ಮನೆಗೆ ಭಾಗಶಃ ಹಾನಿಯಾಗಿದೆ. ಅದೇ ಪ್ರದೇಶದಲ್ಲಿ ರಿಕ್ಷಾವೊಂದರ ಮೇಲೆ ವಿದ್ಯುತ್ ಕಂಬ ಮಗುಚಿ ಬಿದ್ದು ರಿಕ್ಷಾಗೆ ಹಾನಿಯಾಗಿದೆ.

ADVERTISEMENT

ಬಿರುಸಿನ ಮಳೆ ಸುರಿದ ಕಾರಣ ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಅಂಬಲಪಾಡಿ ಬೈಪಾಸ್, ಕರಾವಳಿ ಬೈಪಾಸ್‌ ಮೊದಲಾದೆಡೆ ಸರ್ವಿಸ್‌ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿತ್ತು.

ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕಾರ್ಕಳದಲ್ಲಿ 7 ಸೆಂ.ಮೀ., ಕುಂದಾಪುರದಲ್ಲಿ 10 ಸೆಂ.ಮೀ., ಉಡುಪಿಯಲ್ಲಿ 5 ಸೆಂ.ಮೀ., ಬೈಂದೂರಿನಲ್ಲಿ 13 ಸೆಂ.ಮೀ., ಬ್ರಹ್ಮಾವರ, ಕಾಪುವಿನಲ್ಲಿ 6 ಸೆಂ.ಮೀ., ಹೆಬ್ರಿಯಲ್ಲಿ 8ಸೆಂ.ಮೀ ಮಳೆಯಾಗಿದೆ.

ಬ್ರಹ್ಮಾವರದ ಉಪ್ಪೂರು, ಗಿಳಿಯಾರು, ಚಾಂತಾರು, ಹೆಗ್ಗುಂಜೆ, ಕುಂದಾಪುರ ವ್ಯಾಪ್ತಿಯ ಕಂದಾವರ, ಕುಂಭಾಶಿ, ಕುಂದಾಪುರ ಕಸಬ ಪ್ರದೇಶದಲ್ಲಿ ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ.

ಕಾರ್ಕಳ ವರದಿ: ತಾಲ್ಲೂಕಿನಾದ್ಯಂತ ನಿರಂತರ ಮಳೆಯ‌ ಕಾರಣ ಅಲ್ಲಲ್ಲಿ ಹಾನಿಯಾದ ಘಟನೆಗಳು ನಡೆದಿವೆ. ತಾಲ್ಲೂಕಿನ ಕಲ್ಯಾ ಗ್ರಾಮದ ಪರಾಡಿ ಮನೆ ಎಂಬಲ್ಲಿ ಗುರುವಾರ ಅಚ್ಯುತ ಆಚಾರ್ಯ ಎಂಬುವವರ ಮನೆ ಹಾಗೂ ದನದಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ.

ತಾಲ್ಲೂಕಿನ ನಲ್ಲೂರು ಗ್ರಾಮದ ಚಿರಾಗ್‌ನ‌ ಹಿಂಭಾಗದ ದರ್ಕಾಸು ಮನೆ ಎಂಬಲ್ಲಿನ ನಿವಾಸಿ ರಾಜೀವಿ ಶೆಟ್ಟಿ ಅವರ ವಾಸದ ಮನೆಗೆ ಶುಕ್ರವಾರ ಮಧ್ಯಾಹ್ನ ಬೀಸಿದ ಗಾಳಿ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ.

ತಾಲ್ಲೂಕಿನ ರೆಂಜಾಳ ಗ್ರಾಮದ ಮದ್ರಾಂಪಲ್ ಬಳಿಯ ನಿವಾಸಿ ಸುನಿತಾ ಎಂಬುವವರ  ಮನೆಗೆ ಗಾಳಿ, ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ.

ನೆರೆ ಸೃಷ್ಟಿ

ಬೈಂದೂರು: ಭಾರಿ ಮಳೆಗೆ ತಾಲೂಕಿನ ನದಿಗಳು ತುಂಬಿ ಹರಿಯುತ್ತಿವೆ. ಸೌಪರ್ಣಿಕಾ, ಸುಮನಾವತಿ, ಸಂಕದ ಗುಂಡಿ, ಎಡ ಮಾವಿನ ಹೊಳೆ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ನಾಡ, ನಾವುಂದ, ಮರವಂತೆ, ಬಡಾಕೆರೆ ಚಿಕ್ಕಳ್ಳಿ, ಪಡುಕೋಣೆ, ಆನಗಳ್ಳಿ, ಹಳಗೇರಿಗಳಲ್ಲಿ ನೆರೆ ಉಂಟಾಗಿದೆ.

ಉಡುಪಿಯ ಕುಕ್ಕಿಕಟ್ಟೆಯ ಇಂದಿರಾ ನಗರದಲ್ಲಿ ತೆಂಗಿನ ಮರವೊಂದು ಉರುಳಿ ಬಿದ್ದಿರುವುದು 
ಕಾರ್ಕಳ ತಾಲ್ಲೂಕಿನ ಕಲ್ಯಾ ಗ್ರಾಮದ ಪರಾಡಿ ಮನೆ ಎಂಬಲ್ಲಿ ಗುರುವಾರ ಅಚ್ಯುತ ಆಚಾರ್ಯ ಎಂಬುವವರ ಮನೆ ಹಾಗೂ ದನದಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ
ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ  ಕಡಲ್ಕೊರೆತ ಶುಕ್ರವಾರ ತೀವ್ರಗೊಂಡಿತ್ತು
ಬೈಂದೂರಿನಲ್ಲಿ ನದಿ ಪಾತ್ರದ ಕೆಲವೆಡೆ ನೆರೆ ಉಂಟಾಗಿದೆ

ಬ್ಲೂಫ್ಲ್ಯಾಗ್‌ ಬೀಚ್‌: ತೀವ್ರಗೊಂಡ ಕಡಲ್ಕೊರೆತ

ಪಡುಬಿದ್ರಿ: ಪಡುಬಿದ್ರಿಯ ಬ್ಲೂಫ್ಲ್ಯಾಗ್‌ ಬೀಚ್‌ನಲ್ಲಿ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಕಡಲ್ಕೊರೆತ ಶುಕ್ರವಾರ ತೀವ್ರಗೊಂಡಿತ್ತು. ಬೀಚ್‌ನಲ್ಲಿ 60 ಮೀಟರ್‌ನಷ್ಟು ಅಡಿಪಾಯಕ್ಕೆ ಹಾನಿಯಾಗಿದೆ. ಫುಡ್ ಕೋರ್ಟ್ ಮುಂಭಾಗಲ್ಲೂ ಹಾನಿಯಾಗಿದ್ದು ಪಾತ್ ವೇಗೆ ಅಳವಡಿಸಿದ್ದ ಇಂಟರ್ ಲಾಕ್ ಕೂಡ ಹಾನಿಗೀಡಾಗಿದೆ. ಸಿ.ಸಿ.ಟಿ.ವಿ. ಕ್ಯಾಮೆರಾದ ಕೇಬಲ್‌ಗೂ ಹಾನಿಯಾಗಿದೆ. ಬೀಚ್ ಸಿಬ್ಬಂದಿ ತುರ್ತಾಗಿ ಇಂಟರ್ ಲಾಕ್‌ಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿದ್ದಾರೆ. ಮಳೆ ಹಾನಿ: ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಳ್ಳೆ ಗ್ರಾಮದ ರವಿರಾಜ್ ಆಚಾರ್ಯ ಕುರ್ಕಾಲಿನ ಸದಾನಂದ ಎಲ್ಲೂರು ಗ್ರಾಮದ ಚಕ್ರಪಾಣಿ ಉಡುಪ ಎಂಬುವವರ ಮನೆಗಳಿಗೆ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.