
ಉಡುಪಿ : ‘ಉಡುಪಿಗೆ ಬನ್ನಿ’ ತಂಡದ ನೇತೃತ್ವದಲ್ಲಿ ಇಂದ್ರಾಳಿಯಲ್ಲಿ ಈಚೆಗೆ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು.
ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರಾಸಕ್ತರು ಕಾಲ್ನಡಿಗೆಯ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ 27 ಪ್ರಬೇಧಗಳ 185 ಹಕ್ಕಿಗಳನ್ನು ಪಟ್ಟಿ ಮಾಡಿದರು. ಅದರಲ್ಲಿ ಏಶಿಯನ್ ಗ್ರೀನ್ ಬೀ ಈಟರ್ (ಸಣ್ಣ ಕಳ್ಳಿಪೀರ) ಪ್ರಬೇಧದ ಸುಮಾರು 120ಕ್ಕೂ ಹೆಚ್ಚಿನ ಹಕ್ಕಿಗಳನ್ನು ವೀಕ್ಷಣೆ ಮಾಡಲಾಯಿತು.
ವೈಟ್ ಬ್ರೊವ್ಡ್ ವ್ಯಾಗ್ಟೈಲ್ (ಕಪ್ಪು ಬಿಳಿ ಸಿಪಿಲೆ), ಗೋವಕ್ಕಿ, ಚುಕ್ಕೆ ಬೆಳವ, ಚುಕ್ಕ ರಾಟವಾಳ, ಪುಟ್ಟ ನೀರುಕಾಗೆ, ಗದ್ದೆ ಮಿಂಚುಳ್ಳಿ, ಗೊರವಂಕ, ಚಿಕ್ಕ ಬಾನಾಡಿ, ಕೆಂದಲೆ ಗಿಳಿ, ಸಣ್ಣ ಕುಟ್ರ, ಕಂಚುಕುಟಿಗ, ಕೆಮ್ಮೀಸೆ ಪಿಕಳಾರ, ಕೆಂಪು ಚಿಬ್ಬೊಟ್ಟೆಯ ಪಿಕಳಾರ, ಹೊನ್ನಕ್ಕಿ, ಕಾಜಾಣ, ರಾಜಪಕ್ಷಿ, ಮಟಪಕ್ಷಿ, ಬೂದು ಉಲಿಯಕ್ಕಿ, ನೇರಳೆ ಸೂರಕ್ಕಿ, ಗರುಡ ಸೇರಿದಂತೆ 27 ಪ್ರಬೇಧಗಳ ಹಕ್ಕಿಗಳನ್ನು ವೀಕ್ಷಿಸಲಾಯಿತು.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿ.ಎನ್.ಎಚ್.ಎಸ್.) ಇದರ ಪಕ್ಷಿವಿಜ್ಞಾನದ ವಿದ್ಯಾರ್ಥಿನಿ ಮಂಜುಳಾ ಎಚ್. ಹಕ್ಕಿಗಳ ವಲಸೆ ವಿಧಗಳು, ಗೂಡು ರಚನೆಯ ಬಗ್ಗೆ ಉದಾಹರಣೆ ಸಹಿತ ವಿಸ್ತ್ರತ ಮಾಹಿತಿ ನೀಡಿದರು. ಲೇಖಕ ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ ಹಕ್ಕಿಗಳು ಆಹಾರ ಹುಡುಕುವ ಬಗ್ಗೆ, ಗೂಡುಗಳ ರಚನೆಯ ಹಿಂದಿರುವ ಅಂಶಗಳ ಬಗ್ಗೆ ಸಂವಾದ ರೂಪದಲ್ಲಿ ಮಾಹಿತಿ ನೀಡಿದರು.
ಮನೆಯೇ ಗ್ರಂಥಾಲಯ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಲೆಸ್ಲಿ ಫರ್ನಾಂಡಿಸ್, ಗಣಪತಿ ನಾಯಕ್, ಪ್ರಸನ್ನ ಉದ್ಯಾವರ, ಕೆ. ಪ್ರೇರಣಾ ಉಪಾಧ್ಯಾಯ, ಉದಯ ಕುಮಾರ್ ಉಪಸ್ಥಿತರಿದ್ದರು.
ಉಡುಪಿಗೆ ಬನ್ನಿ ತಂಡದ ಸದಸ್ಯ ಗಣೇಶ್ ಪ್ರಸಾದ್ ಜಿ. ನಾಯಕ್ ಕಾರ್ಯಕ್ರಮ ಸಂಯೋಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.