ADVERTISEMENT

ಉಡುಪಿ | ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ನ್ಯಾಯಾಧೀಶ ಮನು ಪಟೇಲ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 2:35 IST
Last Updated 9 ಜನವರಿ 2026, 2:35 IST
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಜರುಗಿತು
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಜರುಗಿತು   

ಉಡುಪಿ: ಪ್ರತಿಯೊಬ್ಬ ನಾಗರಿಕರೂ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿದಾಗ ಮಾತ್ರ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್ ಬಿ.ವೈ. ಹೇಳಿದರು.

ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಗುರುವಾರ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ -2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಬಹಳ ಮುಂದುವರಿದೆ. ವಾಹನ ಚಲಾಯಿಸುವ ಎಲ್ಲರಿಗೂ ರಸ್ತೆ ಸುರಕ್ಷತಾ ನಿಯಮಗಳ ಮಾಹಿತಿ ತಿಳಿದಿರುತ್ತದೆ. ಆದರೆ ಅವುಗಳ ಪಾಲನೆ ಕೊರತೆ ಇದೆ ಎಂದರು.

ADVERTISEMENT

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯ್ಕ್ ಮಾತನಾಡಿ, ದೇಶದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರಜ್ಞಾವಂತ ನಾಗರಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಹೇಳಿದರು.

ಎಂ.ಐ.ಟಿ ಉಪನ್ಯಾಸಕ ಬಾಲಕೃಷ್ಣ ಮುದ್ದೋಡಿ ಮಾತನಾಡಿ, ನಾವೆಲ್ಲರೂ ಸಮಯದ ಚೌಕಟ್ಟಿನಲ್ಲಿ ನಮ್ಮ ಮತ್ತು ಇತರರ ಜೀವನವನ್ನು ಪಣಕಿಟ್ಟು ಹೋರಾಟ ಮಾಡುತ್ತಿದ್ದೇವೆ. ಜೀವನದ ಹೋರಾಟದಲ್ಲಿ ಇತರರ ಬಗ್ಗೆ ಯೋಚಿಸಲು ನಮಗೆ ಸಮಯಾವಕಾಶ ಇಲ್ಲ. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ನಮಗೆ ತಿಳಿದಿದ್ದರೂ ನಾವುಗಳೇ ಅದನ್ನು ಪಾಲಿಸದೆ ಉಲ್ಲಂಘಿಸುತ್ತೇವೆ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀನಾರಾಯಣ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಮಂಜುನಾಥ್ ಬಿ. ಇದ್ದರು. ಕಚೇರಿ ಅಧೀಕ್ಷಕ ರಾಮಚಂದ್ರಪ್ಪ ಎಚ್.ಸಿ. ಸ್ವಾಗತಿಸಿದರು. ಮೋಟಾರು ವಾಹನ ನಿರೀಕ್ಷಕ ಶ್ರೇಯಸ್ ಕುಮಾರ್ ನಿರೂಪಿಸಿದರು. ಗಣೇಶ್ ರಾವ್ ವಂದಿಸಿದರು.