ADVERTISEMENT

ಉಡುಪಿ: ಪ್ರತಿಭಟನೆಗೆ ಬೆಂಬಲ ಕೋರಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 7:28 IST
Last Updated 22 ಮಾರ್ಚ್ 2025, 7:28 IST
ಪ್ರತಿಭಟನೆಗೆ ಬೆಂಬಲ ನೀಡುವಂತೆ ಮೀನುಗಾರ ಮುಖಂಡರು ಮಲ್ಪೆಯ ಅಂಗಡಿಯವರಲ್ಲಿ ಶುಕ್ರವಾರ ಮನವಿ ಮಾಡಿದರು
ಪ್ರತಿಭಟನೆಗೆ ಬೆಂಬಲ ನೀಡುವಂತೆ ಮೀನುಗಾರ ಮುಖಂಡರು ಮಲ್ಪೆಯ ಅಂಗಡಿಯವರಲ್ಲಿ ಶುಕ್ರವಾರ ಮನವಿ ಮಾಡಿದರು   

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಮಲ್ಪೆ ಮೀನುಗಾರರ ಸಂಘವು ಶನಿವಾರ ಪ್ರತಿಭಟನೆಗೆ ಕರೆ ನೀಡಿರುವ ಕಾರಣ, ಮೀನುಗಾರ ಮುಖಂಡರು ಶುಕ್ರವಾರ ಮಲ್ಪೆಯ ವ್ಯಾಪಾರ ಸಂಸ್ಥೆಗಳಿಗೆ ತೆರಳಿ ಅದರ ಮಾಲೀಕರಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು.

‘ಈಗಾಗಲೇ ಮತ್ಸಕ್ಷಾಮದಿಂದಾಗಿ ಮೀನುಗಾರರು, ಬೋಟ್‌ ಮಾಲಕರು ಸಂಕಷ್ಟದಲ್ಲಿದ್ದಾರೆ. ಜೊತೆಗೆ ಬೋಟ್‌ಗಳಿಂದ ಸಿಗಡಿ, ಅಂಜಲ್‌ ಮೊದಲಾದ ಬೆಲೆ ಬಾಳುವ ಮೀನುಗಳನ್ನು ಕೆಳಗಿಳಿಸುವಾಗ ಬುಟ್ಟಿ, ಬುಟ್ಟಿ ಮೀನುಗಳು ಕಳ್ಳತನವಾಗುತ್ತಿವೆ. ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕು’ ಎಂದು ಮೀನುಗಾರ ಮುಖಂಡ ಮಂಜು ಕೊಳ ತಿಳಿಸಿದರು.

‘ಮಲ್ಪೆಯ ಮೀನುಗಾರರು ಇತರ ಜಿಲ್ಲೆ ರಾಜ್ಯಗಳ ಕಾರ್ಮಿಕರ ಜೊತೆಗೆ ಸೌಹಾರ್ದದಿಂದಲೇ ಇದ್ದೇವೆ. ಈ ಒಂದು ಕೃತ್ಯದಿಂದ ಅಪಪ್ರಚಾರ ಮಾಡಬಾರದು. 20ಕ್ಕೂ ಹೆಚ್ಚು ಸಂಘಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ’ ಎಂದರು.

ADVERTISEMENT


ಸೌಹಾರ್ದಯುತವಾಗಿ ಬಗೆಹರಿಸಿ: ರಘುಪತಿ ಭಟ್

‘ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಹಲ್ಲೆಯ ಘಟನೆಗೆ ಸಂಬಂಧಿಸಿ ಅಮಾಯಕರ ಮೇಲೆ ಅಟ್ರಾಸಿಟಿ ಮೊಕದ್ದಮೆ ದಾಖಲಿಸಿ ಬಂಧಿಸಿರುವುದು ಖಂಡನೀಯ. ಮಲ್ಪೆಯ ಘಟನೆ ಉದ್ದೇಶಪೂರ್ವಕವಲ್ಲ. ಬೆಳಗ್ಗಿನ ಜಾವ 3 ಗಂಟೆಗೆ ಎದ್ದು ಮೀನುಗಾರರು ಸಮುದ್ರದಲ್ಲಿ ಜೀವದ ಹಂಗು ತೊರೆದು ಮೀನುಗಾರಿಕೆ ನಡೆಸಿ ತಂದ ಮೀನು ಕಳ್ಳತನವಾದಾಗ ಈ ತರಹದ ಆಕ್ರೋಶದ ಪ್ರತಿಕ್ರಿಯೆಗಳು ಸಾಮಾನ್ಯ’ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಅಮಾಯಕರ ಮೇಲೆ ಮೊಕದ್ದಮೆ ದಾಖಲಿಸದೆ ಮಲ್ಪೆ ಮೀನುಗಾರರ ಸಂಘವನ್ನು ಮಧ್ಯಸ್ಥಿಕೆ ಮಾಡಿ ಎರಡೂ ಕಡೆಯವರನ್ನು ಕರೆಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ, ಮೀನುಗಾರರಿಗೆ ರಕ್ಷಣೆ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದಿರುವುದು ತಪ್ಪು. ಅದನ್ನು ಖಂಡಿಸುತ್ತೇನೆ. ಆದರೆ ಅದನ್ನು ವೈಭವೀಕರಿಸುವುದು ಸರಿಯಲ್ಲ. ಮಲ್ಪೆ ಬಂದರಿನಲ್ಲಿ ನಿರಂತರವಾಗಿ ಮೀನು ಕಳ್ಳತನ ನಡೆಯುತ್ತಿದ್ದರಿಂದ ಕಳ್ಳ ಕೈಗೆ ಸಿಕ್ಕಾಗ ಸಾರ್ವಜನಿಕರು ಆಕ್ರೋಶ ಭರಿತರಾಗಿ ಈ ರೀತಿ ಪ್ರತಿಕ್ರಿಯಿಸಿರಬಹುದು. ಯಾವುದೇ ಊರಿನಲ್ಲಿಯೂ ಕಳ್ಳರು ಕೈಗೆ ಸಿಕ್ಕಾಗ ಯಾರೂ ಗೌರವದಿಂದ ಕಾಣುವುದಿಲ್ಲ’ ಎಂದಿದ್ದಾರೆ.

ಈ ಪ್ರಕರಣ ನಡೆದ ಬಳಿಕ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಮೀನುಗಾರ ಮುಖಂಡರ ಸಮಕ್ಷಮದಲ್ಲಿ ರಾಜಿ ಮಾಡಲಾಗಿತ್ತು. ಇಲ್ಲಿ ಎರಡು ಪಾರ್ಟಿಯವರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.  ಠಾಣಾಧಿಕಾರಿ ಎರಡೂ ಕಡೆಯವರಿಂದ ತಪ್ಪೊಪ್ಪಿಗೆ ಹಿಂಬರಹ ಬರೆಸಿಕೊಂಡು ಸೌಹಾರ್ದಯುತವಾಗಿ ಪ್ರಕರಣ ಇತ್ಯರ್ಥಗೊಳಿಸಿದ್ದರು ಎಂದು ಹೇಳಿದ್ದಾರೆ.

ಘಟನೆಯ ವಿಡಿಯೊ ಚಿತ್ರೀಕರಣವನ್ನು ವೈಭವೀಕರಿಸಿದ ನಂತರ ಪೊಲೀಸ್ ಇಲಾಖೆ ಅಮಾಯಕ ಮೀನುಗಾರರನ್ನು ಬಂಧಿಸಿರುವುದು ಸರಿಯಲ್ಲ. ಪ್ರಕರಣದಲ್ಲಿ ಭಾಗಿಯಾಗದವರನ್ನು ಬಂಧಿಸಿರುವುದರಿಂದ ಮೀನುಗಾರರು ಅಭದ್ರತೆಗೆ ಒಳಗಾಗಿದ್ದಾರೆ ಎಂದೂ ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ಮತ್ಸ್ಯಕ್ಷಾಮದಿಂದ ಮೀನುಗಾರಿಕೆ ಕುಂಠಿತಗೊಂಡು ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಮಲ್ಪೆ ಬಂದರಿನಲ್ಲಿ ನಿರಂತರವಾಗಿ ಮೀನು ಕಳ್ಳತನ ಹಾಗೂ ಮೀನುಗಾರಿಕಾ ಸಲಕರಣೆಗಳಾದ ಬೋಟಿನ ಫ್ಯಾನ್, ಬ್ಯಾಟರಿ, ಜಿಪಿಎಸ್, ವೈಯರ್‌ಲೆಸ್, ಫಿಶ್ ಪೈಂಡರ್, ಬಲೆ ಸಾಮಗ್ರಿಗಳು ಕಳ್ಳತನವಾಗುತ್ತಿದ್ದರಿಂದ ಇಲ್ಲಿನ ಜನ ಆಕ್ರೋಶ ಭರಿತರಾಗಿದ್ದರು. ಮಲ್ಪೆ ಬಂದರಿನಲ್ಲಿ ನಡೆಯುತ್ತಿರುವ ಕಳ್ಳತನಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಮೀನುಗಾರಿಕಾ ಇಲಾಖೆ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

‘ಕೃತ್ಯ ಒಪ್ಪಿಕೊಳ್ಳುವಂತಹದ್ದಲ್ಲ’

ಮಲ್ಪೆ ಬಂದರಿನಲ್ಲಿ ಮಹಿಳೆಗೆ ಹಲ್ಲೆ ನಡೆಸಿದ ಕೃತ್ಯವು ಒಪ್ಪಿಕೊಳ್ಳುವಂತಹದ್ದಲ್ಲ. ಮೀನು ಕಳವು ಮಾಡಿದ್ದರೆ ನೇರವಾಗಿ ಹಿಡಿದು ಪೋಲಿಸರಿಗೆ ಕೊಡಬಹುದಿತ್ತು. ಪ್ರತಿಭಟನೆ ಮಾಡಿದರೂ ಪ್ರಕರಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಸುದ್ದಿಗಾರರ ಜೊತೆಗೆ ಶುಕ್ರವಾರ ಮಾತನಾಡಿದ ಅವರು ಪ್ರಕರಣ ಒಮ್ಮೆ ದಾಖಲಾದರೆ ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕು. ಮುಂದಿನ ದಿನಗಳಲ್ಲಿ ಇಂತಹ ಅಮಾನುಷ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು. ಮಲ್ಪೆ ಬಂದರಿನಲ್ಲಿ ಕಳ್ಳತನ ಪ್ರಕರಣ ಹೆಚ್ಚು ನಡೆಯುತ್ತಿದೆ ಎಂಬ ಆರೋಪವಿದೆ. ಬಂದರು ನಿರ್ವಹಣೆಯನ್ನುಸಂಬಂಧಿಸಿದ ಇಲಾಖೆಗಳು ಸಮರ್ಪಕವಾಗಿ ಮಾಡಬೇಕು. ಸಿಸಿಟಿವಿ ಅಳವಡಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.