ADVERTISEMENT

ಬೆಳೆಗಾರರಿಗೆ ಆಸರೆಯಾದ ‘ಉಡುಪಿ ಮಲ್ಲಿಗೆ ಕಟ್ಟೆ’

ಮಧ್ಯವರ್ತಿ ವ್ಯವಸ್ಥೆಗೆ ಸೆಡ್ಡುಹೊಡೆದ ಮಂದಾರ್ತಿ ಹೂ ಬೆಳೆಗಾರರು

ಬಾಲಚಂದ್ರ ಎಚ್.
Published 22 ನವೆಂಬರ್ 2020, 19:30 IST
Last Updated 22 ನವೆಂಬರ್ 2020, 19:30 IST
ಶಂಕರಪುರ ಮಲ್ಲಿಗೆ
ಶಂಕರಪುರ ಮಲ್ಲಿಗೆ   

ಉಡುಪಿ: ಉಡುಪಿ ಮಲ್ಲಿಗೆಗೆ ಮಾರುಕಟ್ಟೆಯಲ್ಲಿ ಗರಿಷ್ಠ ದರವಿದ್ದರೂ ಮಲ್ಲಿಗೆ ಬೆಳೆಗಾರರಿಗೆ ಸಿಗುವ ಲಾಭ ಬಹಳ ಕಡಿಮೆ. ಹಲವು ಗ್ರಾಮಗಳಲ್ಲಿ ಇಂದಿಗೂ ಮಧ್ಯವರ್ತಿಗಳು ನಿಗದಿಪಡಿಸುವ ದರವೇ ಅಂತಿಮ. ಹಳ್ಳಿಗಳಿಂದ ಮಾರುಕಟ್ಟೆಗೆ ಹೂ ಸಾಗಾಟ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣ.

ಈ ದಲ್ಲಾಳಿ ಆಧಾರಿತ ಮಾರುಕಟ್ಟೆ ವ್ಯವಸ್ಥೆಗೆ ಸೆಡ್ಡು ಹೊಡೆದು ಯಶಸ್ಸು ಸಾಧಿಸಿದ್ದಾರೆ ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿಯ ಮಲ್ಲಿಗೆ ಬೆಳೆಗಾರರು. ತಾವು ಬೆಳೆದ ಹೂವನ್ನು ಸ್ಥಳೀಯ ಮಧ್ಯವರ್ತಿಗಳಿಗೆ ಮಾರಾಟ ಮಾಡದೆ ನೇರವಾಗಿ ಉಡುಪಿಯ ಪ್ರಧಾನ ಶಂಕರಪುರ ಮಲ್ಲಿಗೆಯ ಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಗರಿಷ್ಠ ದರ ಹಾಗೂ ಲಾಭವೂ ಸಿಗುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು, ಮಲ್ಲಿಗೆ ಬೆಳೆಗಾರರ ಸಂಘಟನೆಯಿಂದ ಹಾಗೂ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ನೆರವಿನಿಂದ.

ಕಾರ್ಯರೂಪಕ್ಕೆ ಬಂದಿದ್ದು ಹೇಗೆ:

ADVERTISEMENT

ವರ್ಷದ ಹಿಂದೆ ಮಂದಾರ್ತಿ, ಕೊಕ್ಕರ್ಣೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆಯುತ್ತಿದ್ದ ಉಡುಪಿ ಮಲ್ಲಿಗೆಗೆ ಸ್ಥಳೀಯವಾಗಿ ಕಡಿಮೆ ದರ ಸಿಗುತ್ತಿತ್ತು. ಶಂಕರಪುರ ಮಲ್ಲಿಗೆ ಕಟ್ಟೆಯಲ್ಲಿ ಅಟ್ಟೆ ಮಲ್ಲಿಗೆಗೆ ₹1,250 ಗರಿಷ್ಠ ದರ ಇದ್ದರೂ, ಈ ಭಾಗದ ಹೂ ಬೆಳೆಗಾರರಿಗೆ ಮಧ್ಯವರ್ತಿಗಳು ನೀಡುತ್ತಿದ್ದ ದರ ಅರ್ಧಕ್ಕಿಂತಲೂ ಕಡಿಮೆ.

ಈ ವ್ಯವಸ್ಥೆಯಿಂದ ಬೇಸತ್ತಿದ್ದ ಹೂ ಬೆಳೆಗಾರರು ಬ್ರಹ್ಮಾವರದ ಕೆವಿಕೆ ವಿಜ್ಞಾನಿಗಳಾದ ಧನಂಜಯ್‌, ಚೈತನ್ಯ ಹಾಗೂ ಪ್ರಗತಿಪರ ರೈತ ರಾಮಕೃಷ್ಣ ಶರ್ಮ ಬಂಟಕಲ್ಲು ಅವರ ಸಲಹೆಯಂತೆ ಸ್ಥಳೀಯ ‘ಉಡುಪಿ ಮಲ್ಲಿಗೆ ಕಟ್ಟೆ’ಯನ್ನು ಸ್ಥಾಪಿಸಿಕೊಂಡರು. ಸುತ್ತಮತ್ತಲಿನ ಗ್ರಾಮಗಳಲ್ಲಿ ಮಲ್ಲಿಗೆ ಬೆಳೆಯುತ್ತಿದ್ದ 25ಕ್ಕೂ ಹೆಚ್ಚು ಬೆಳೆಗಾರರನ್ನು ಸಂಘಟಿಸಲಾಯಿತು. ಬೆಳೆಗಾರರು ಮಲ್ಲಿಗೆಯನ್ನು ಸ್ಥಳೀಯ ವರ್ತಕರಿಗೆ ಮಾರಾಟ ಮಾಡದೆ ‘ಕಟ್ಟೆ’ಗೆ ತಂದು ಹಾಕಬೇಕು ಎಂಬ ನಿಯಮ ಮಾಡಿಕೊಳ್ಳಲಾಯಿತು.‌

ಸ್ಥಳೀಯ ಕಟ್ಟೆಯಿಂದ ಪ್ರತಿದಿನ ಬೆಳಿಗ್ಗೆ ಮಲ್ಲಿಗೆಯನ್ನು ಉಡುಪಿಯ ಮಾರುಕಟ್ಟೆಗೆ ಸಾಗಿಸುವ ವ್ಯವಸ್ಥೆ ಜಾರಿಗೆ ಬಂತು. ಮಾರುಕಟ್ಟೆಗೆ ಹೂ ಕೊಂಡೊಯ್ಯಲು ಖಾಯಂ ಆಗಿ ಒಬ್ಬ ಬೆಳೆಗಾರನನ್ನು ನಿಯೋಜಿಸಲಾಯಿತು. ಪ್ರತಿದಿನ ಹೂ ಕೊಂಡೊಯ್ಯುವ ವ್ಯಕ್ತಿ ಮಾರುಕಟ್ಟೆಯ ದರಕ್ಕೆ ಹೂ ಮಾರಾಟ ಮಾಡಿ ವಾರಕ್ಕೊಮ್ಮೆ ಬೆಳೆಗಾರರಿಗೆ ಹಣ ಬಟವಾಡೆ ಮಾಡುತ್ತಾರೆ. ಇದರಿಂದ ಬೆಳೆಗಾರರಿಗೆ ಗರಿಷ್ಠ ಲಾಭ ಸಿಗುತ್ತಿದೆ ಎನ್ನುತ್ತಾರೆ ಯೋಜನೆಯ ರೂವಾರಿಗಳಾದ ಸುಜಾತಾ ರಂಜಿತ್ ಶೆಟ್ಟಿ ಹಾಗೂ ಜೀವನ್‌ ಬೈದೆಬೆಟ್ಟು.

ಕಳೆದ ವರ್ಷ ಅ.20ರಂದು ಆರಂಭವಾದ ‘ಉಡುಪಿ ಮಲ್ಲಿಗೆ ಕಟ್ಟೆ’ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಧ್ಯ 23 ಬೆಳೆಗಾರರು ಕಟ್ಟೆಗೆ ಹೂ ಪೂರೈಕೆ ಮಾಡುತ್ತಿದ್ದಾರೆ ಎಂದರು ಜೀವನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.