ಉಡುಪಿ: ಬಿರುಸಿನ ಮಳೆ ಸುರಿದು ಹೊಳೆ, ಗದ್ದೆಗಳು ತುಂಬಿ ತುಳುಕುತ್ತಿದ್ದು, ಜಿಲ್ಲೆಯಾದ್ಯಂತ ಭತ್ತದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಈ ಬಾರಿ ಅವಧಿ ಪೂರ್ವದಲ್ಲೇ ಮಳೆ ಆರಂಭವಾಗಿದ್ದು, ಅನಂತರ ಮಳೆ, ಬಿಸಿಲಿನ ವಾತಾವರಣದ ನಡುವೆ ಅಲ್ಪ ತಡವಾಗಿ ಉಳುಮೆ, ನೇಜಿ ನೆಡುವ ಕಾಯಕ ಆರಂಭವಾಗಿದೆ.
ಜೂನ್ ತಿಂಗಳಲ್ಲೇ ಕೆಲವು ರೈತರು ಚಾಪೆ ನೇಜಿ ಸಿದ್ಧಪಡಿಸಿದ್ದರು, ಬೆಟ್ಟು ಗದ್ದೆಗಳಲ್ಲಿ ಬಿತ್ತನೆ ಮಾಡುವವರು ಅಲ್ಪ ಕಾದು ಜುಲೈ ತಿಂಗಳ ಆರಂಭದಿಂದ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಯಂತ್ರೋಪಕರಣಗಳನ್ನು ಬಳಸದೆ ಸಾಂಪ್ರದಾಯಿಕ ಶೈಲಿಯಲ್ಲಿ ಕೃಷಿ ಮಾಡುವವರು ಪ್ರತಿ ವರ್ಷವೂ ಅಲ್ಪ ತಡವಾಗಿಯೇ ಕೃಷಿ ಕೆಲಸ ಆರಂಭಿಸುತ್ತಾರೆ.
ಈ ಬಾರಿ ಬಿಟ್ಟು ಬಿಟ್ಟು ಬಿರುಸಿನ ಮಳೆ ಸುರಿಯುತ್ತಿರುವುದು ಭತ್ತದ ಕೃಷಿಗೆ ಅನುಕೂಲವಾಗಿದೆ. ಒಂದೇ ಸಮನೆ ಮಳೆ ಸುರಿದರೆ ನೆರೆ ಬರುವ ಸಂಭವವಿರುತ್ತದೆ. ಆದರೆ ಈ ಬಾರಿ ಇದುವರೆಗೆ ಹೆಚ್ಚಿನ ಕಡೆ ನೆರೆ ಬಂದಿಲ್ಲ ಎನ್ನುತ್ತಾರೆ ಭತ್ತದ ಕೃಷಿಕರು.
ಹಲವು ದಿನಗಳ ಕಾಲ ಬಿಸಿಲಿನ ವಾತಾವರಣ ಬಂದರೆ ಭತ್ತದ ಕೃಷಿಗೆ ನೀರು ಹಾಯಿಸಬೇಕಾದ ಅನಿವಾರ್ಯತೆಯೂ ಎದುರಾಗಬಹುದೆಂಬ ಭೀತಿಯೂ ಹಲವು ರೈತರನ್ನು ಕಾಡುತ್ತಿದೆ.
ಕಳೆದ ವರ್ಷ ಕೃಷಿ ಚಟುವಟಿಕೆ ಆರಂಭದಲ್ಲೇ ಎಂಒ4 ತಳಿಯ ಭತ್ತದ ಬಿತ್ತನೆ ಬೀಜ ಸಿಗದೆ ರೈತರು ಸಂಕಷ್ಟ ಅನುಭವಿಸಿದ್ದರು. ನೇಜಿ ನೆಟ್ಟ ಬಳಿಕ ಪದೇ ಪದೇ ನೆರೆ ಹಾವಳಿಯಿಂದ ಬೆಳೆ ನಷ್ಟವಾಗಿತ್ತು. ಹಲವು ರೈತರು ಮರು ನಾಟಿ ಮಾಡಿದ್ದರು. ಬ್ರಹ್ಮಾವರ, ಬೈಂದೂರು ವ್ಯಾಪ್ತಿಯಲ್ಲಿ ಹೆಚ್ಚು ಬೆಳೆನಾಶವಾಗಿತ್ತು. ಈ ಬಾರಿ ಎಚ್ಚರಿಕೆಯ ನಡೆ ಅನುಸರಿಸಿರುವ ಹೆಚ್ಚಿನ ಭತ್ತ ಬೆಳೆಗಾರರು ಹವಾಮಾನ ವೈಪರೀತ್ಯವನ್ನು ಗಮನಿಸಿ ಜೂನ್ ತಿಂಗಳ ಅಂತ್ಯದಿಂದ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ಚಾಪೆ ನೇಜಿ ನೆಡಲು ಯಂತ್ರಗಳನ್ನು ಬಳಸಲಾಗುತ್ತಿದ್ದು, ಇವುಗಳ ಬಾಡಿಗೆ ದುಬಾರಿಯಾಗಿದೆ ಎನ್ನುತ್ತಾರೆ ಕೆಲವು ರೈತರು. ಕೆಲವರು ದೊಡ್ಡ ಯಂತ್ರಕ್ಕೆ ಗಂಟೆಗೆ ₹2.5 ಸಾವಿರ ಬಾಡಿಗೆ ಪಡೆಯುತ್ತಾರೆ. ಮಳೆ ಜೋರಾಗುವ ಮೊದಲೇ ನಾಟಿ ಕಾರ್ಯ ಮುಗಿಸಬೇಕಾದ ಧಾವಂತ ರೈತರಲ್ಲಿರುವುದರಿಂದ ಇಂತಹ ಯಂತ್ರಗಳಿಗೆ ಅಧಿಕ ಬೇಡಿಕೆ ಇರುತ್ತದೆ. ಆಗ ಬಾಡಿಗೆ ದರವನ್ನೂ ಹೆಚ್ಚು ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಪೂರಕ ಮಾಹಿತಿ: ಶೇಷಗಿರಿ ಭಟ್, ಹಮೀದ್ ಪಡುಬಿದ್ರಿ, ವಿಶ್ವನಾಥ ಆಚಾರ್ಯ, ವಾಸುದೇವ ಭಟ್
ಈ ಬಾರಿ ಬಿಸಿಲು ಮಳೆಯ ವಾತಾವರಣವಿರುವುದು ಭತ್ತದ ಕೃಷಿಗೆ ಅಷ್ಟು ಒಳ್ಳೆಯದಲ್ಲ. ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆರವೀಂದ್ರ ಗುಜ್ಜರಬೆಟ್ಟು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ
ಅವಧಿಗಿಂತ ಮೊದಲೇ ಮಳೆ ಆರಂಭವಾಗಿರುವುದರಿಂದ ಈ ಸಲ ಬಯಲು ಗದ್ದೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಚಾಪೆ ನೇಜಿ ನೆಡಲು ಸಾಧ್ಯವಾಗದೆ ಒಡಿಶಾದ ಕಾರ್ಮಿಕರನ್ನು ಬಳಸಿ ಕೈನಾಟಿ ಮಾಡಿಸಿದ್ದೇವೆಶ್ರೀನಿವಾಸ ಆಚಾರ್ಯ ಕೊರಂಗ್ರಪಾಡಿ ರೈತ
ಪಡುಬಿದ್ರಿ: ಕಾಪು ತಾಲ್ಲೂಕು ವ್ಯಾಪ್ತಿಯಲ್ಲಿ ಈ ಹಂಗಾಮಿನಲ್ಲಿ 2800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೇಸಾಯವಾಗುವ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿದೆ. ತಾಲ್ಲೂಕಿನಲ್ಲಿ ಈ ಬಾರಿಯೂ ಎಂಒ4 ತಳಿಯ ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದು ಮೇ ತಿಂಗಳಿನಲ್ಲಿ 130 ಕ್ವಿಂಟಲ್ ಹಾಗೂ ಜೂನ್ ತಿಂಗಳಿನಲ್ಲಿ 110 ಕ್ವಿಂಟಲ್ ಬೀಜ ಮಾರಾಟವಾಗಿದೆ. ಐದು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 3147 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೇಸಾಯವಾಗುತ್ತಿತ್ತು. ಪ್ರಸ್ತುತ ಅದು 2800 ಹೆಕ್ಟೇರ್ ಪ್ರದೇಶಕ್ಕೆ ಇಳಿಕೆಯಾಗಿದೆ. ಕೋವಿಡ್ 19 ಸಂದರ್ಭದಲ್ಲಿ ಹಡಿಲು ಭೂಮಿ ಬೇಸಾಯ ಹೆಚ್ಚಳವಾಗಿದ್ದರೂ ಇದೀಗ ಮತ್ತೆ ಹಡಿಲು ಭೂಮಿಯಲ್ಲಿ ಕೃಷಿ ಮಾಡಲು ಜನರು ನಿರುತ್ಸಾಹ ತೋರುತ್ತಿದ್ದಾರೆ. ಯಂತ್ರೋಪಕರಣಗಳ ದುಬಾರಿ ಬಾಡಿಗೆ ಕೂಲಿಕಾರರ ಕೊರತೆಯಿಂದ ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ‘ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಎಂಒ4 ತಳಿಯ ಭತ್ತದ ಬೀಜ ಹಾಗೂ ಜ್ಯೋತಿ ಬೀಜ ಲಭ್ಯವಿದೆ. 290 ಕ್ವಿಂಟಲ್ ಬೀಜ ದಾಸ್ತಾನಿರಿಸಲಾಗಿದ್ದು ಈಗಾಗಲೇ 203 ಕ್ವಿಂಟಲ್ ಬೀಜ ಮಾರಾಟವಾಗಿದೆ ಎಂದು ಕಾಪುವಿನ ಕೃಷಿ ಅಧಿಕಾರಿ ಪುಷ್ಪಲತಾ ತಿಳಿಸಿದರು.
ಬ್ರಹ್ಮಾವರ: ಈ ಬಾರಿ ಮುಂಗಾರು ಬೇಗನೇ ಆರಂಭವಾದರೂ ಕೃಷಿ ಚಟುವಟಿಕೆ ಈ ಬಾರಿ ಒಮ್ಮೆ ಹಿನ್ನಡೆ ಕಂಡಿದ್ದರೂ ಇದೀಗ ಚುರುಕುಗೊಂಡಿದೆ. ತಾಲ್ಲೂಕಿನ ಕೋಟ ಹೋಬಳಿಯಲ್ಲಿ ಈ ಬಾರಿ 5400 ಹೆಕ್ಟೇರ್ ಪ್ರದೇಶ ಬ್ರಹ್ಮಾವರದಲ್ಲಿ 4600 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿಗೆ ಗುರಿ ಇರಿಸಲಾಗಿದೆ. ಕೋಟದಲ್ಲಿ 450 ಕ್ವಿಂಟಲ್ ಬ್ರಹ್ಮಾವರದಲ್ಲಿ 375 ಕ್ವಿಂಟಲ್ ಭತ್ತದ ಬೀಜಕ್ಕೆ ಬೇಡಿಕೆ ಇದ್ದು ಬಹುತೇಕ ಬೇಡಿಕೆ ಪೂರೈಸಲಾಗಿದೆ. ಪ್ರಮುಖವಾಗಿ ಎಂ.ಒ. 4 ತಳಿಯನ್ನು ಇಲ್ಲಿನ ರೈತರು ನಾಟಿ ಬಳಸುತ್ತಿದ್ದು ಹೊಸ ತಳಿ ಸಹ್ಯಾದ್ರಿ ಕೆಂಪು ಮುಕ್ತಿ ಮತ್ತು ಅಲ್ಪಾವಧಿ ತಳಿ ಜ್ಯೋತಿಯನ್ನೂ ಕೆಲವೊಂದು ಕಡೆ ರೈತರು ನಾಟಿ ಮಾಡಿದ್ದಾರೆ. ಪ್ರಸ್ತುತ ಕೃಷಿ ಚಟುವಟಿಕೆಗೆ ವಾತಾವರಣ ಅನುಕೂಲವಾಗಿದ್ದು ಕೃಷಿ ಕಾರ್ಯ ಚುರುಕಾಗಿ ನಡೆಯುತ್ತಿದೆ. ನೇರ ಬಿತ್ತನೆ ಯಾಂತ್ರಿಕೃತ ವಿಧಾನಕ್ಕೆ ಹೆಚ್ಚು ಬೇಡಿಕೆ ಇದೆ. ಚಾಪೆ ನೇಜಿಗೆ ಬೇಡಿಕೆ: ಇತ್ತೀಚಿನ ದಿನಗಳಲ್ಲಿ ಮ್ಯಾಟ್‌ನಿಂದ ತಯಾರಿಸಿದ ಭತ್ತದ ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಸಾಂಪ್ರದಾಯಿಕ ಕೃಷಿ ಕೆಲವೇ ಕೆಲವು ರೈತರು ಮಾಡುತ್ತಿದ್ದಾರೆ. ಯಾಂತ್ರೀಕೃತ ಬೇಸಾಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಬೇಗನೇ ನಾಟಿ ಕಾರ್ಯವೂ ಆಗುತ್ತಿದೆ ಎಂದು ಇಲ್ಲಿಯ ರೈತರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.