ಉಡುಪಿ: ಶಕ್ತಿಯ ಆರಾಧನೆಯ ನವರಾತ್ರಿ ಹಬ್ಬ ಮತ್ತೆ ಬಂದಿದೆ. ಎಲ್ಲೆಲ್ಲೂ ಸಡಗರ, ಸಂಭ್ರಮ ಮನೆ ಮಾಡಿದ್ದು, ದೇವಿ ದೇವಾಲಯಗಳಲ್ಲಿ ಆರಾಧನೆಯ ಪರ್ವ ಆರಂಭವಾಗಿದೆ.
ಶರನ್ನವರಾತ್ರಿ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ದೇವಿ ದೇವಾಲಯಗಳಲ್ಲಿ ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಾಲಯ, ಕಡಿಯಾಳಿಯ ಮಹಿಷಮರ್ದಿನಿ ದೇಗುಲ, ಕನ್ನೆರ್ಪಾಡಿ ಜಯ ದುರ್ಗಾಪರಮೇಶ್ವರಿ ದೇವಾಲಯ, ಅಂಬಾಗಿಲು ದುರ್ಗಾಪರಮೇಶ್ವರಿ, ದೊಡ್ಡಣಗುಡ್ಡೆಯ ಆದಿಶಕ್ತಿ ಕ್ಷೇತ್ರ, ಬೈಲೂರಿನ ಮಹಿಷಮರ್ದಿನ ದೇವಸ್ಥಾನಗಳಲ್ಲಿ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.
ಜಿಲ್ಲೆಯಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ದೆವಾಲಯಗಳಿದ್ದು, ಈ ದೇವಾಲಯಗಳಲ್ಲಿ ಜಗನ್ಮಾತೆಯನ್ನು ಶಕ್ತಿಯ ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಅಂಗವಾಗಿ ಈಗಾಗಲೇ ದೇವಾಲಯಗಳನ್ನು ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಶ್ರೀಕೃಷ್ಣ ಮಠದ ಸುತ್ತ ಇರುವ ನಾಲ್ಕು ದುರ್ಗಾಲಯಗಳಲ್ಲಿ ಒಂದಾಗಿರುವ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ. 22ರಿಂದ ಅಕ್ಟೋಬರ್ 2ರವರೆಗೆ ಶರನ್ನವರಾತ್ರಿ ಮಹೋತ್ಸವ ನೆರವೇರಲಿದೆ. ಕಡಿಯಾಳಿಯ ಮಹಿಷಮರ್ದಿನಿ ದೇವಸ್ಥಾನದಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ನವರಾತ್ರಿಯ ಅಂಗವಾಗಿ ದೇವಾಲಯಗಳಲ್ಲಿ ಚಂಡಿಕಾ ಯಾಗ, ಸಹಸ್ರನಾಮಾರ್ಚನೆ, ದುರ್ಗಾ ನಮಸ್ಕಾರ ಪೂಜೆಗಳು ನಡೆಯಲಿವೆ. ಒಂಬತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೂಪಗಳಲ್ಲಿ ಅಲಂಕರಿಸಿ ಪೂಜಿಸಲಾಗುತ್ತಿದೆ. ಕೆಲವು ದೇವಾಲಯಗಳಲ್ಲಿ ಪ್ರತಿದಿನ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆಯಲಿವೆ.
ಪೂರಕ ಮಾಹಿತಿ: ರಾಜೇಶ್ ಕೆ.ಸಿ., ಶೇಷಗಿರಿ ಭಟ್, ವಿಶ್ವನಾಥ ಆಚಾರ್ಯ, ಹಮೀದ್ ಪಡುಬಿದ್ರಿ, ವಾಸುದೇವ ಭಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.