ADVERTISEMENT

ಉಡುಪಿ ಪರ್ಯಾಯ ಉತ್ಸವ: ಸರ್ವಜ್ಞ ಪೀಠಾರೋಹಣ ಮಾಡಿದ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಕೃಷ್ಣಾಪುರ ಮಠದ ಪರ್ಯಾಯ ಆರಂಭ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 3:48 IST
Last Updated 18 ಜನವರಿ 2022, 3:48 IST
ಮಧ್ವಾಚಾರ್ಯ ಕರಾರ್ಚಿತ ಅಕ್ಷಯ ಪಾತ್ರೆ ಹಾಗೂ ಬೆಳ್ಳಿ ಸಟ್ಟುಗವನ್ನು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಂದ ಸ್ವೀಕರಿಸುತ್ತಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು – ಪ್ರಜಾವಾಣಿ ಚಿತ್ರ
ಮಧ್ವಾಚಾರ್ಯ ಕರಾರ್ಚಿತ ಅಕ್ಷಯ ಪಾತ್ರೆ ಹಾಗೂ ಬೆಳ್ಳಿ ಸಟ್ಟುಗವನ್ನು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಂದ ಸ್ವೀಕರಿಸುತ್ತಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು – ಪ್ರಜಾವಾಣಿ ಚಿತ್ರ   

ಉಡುಪಿ: ಕೃಷ್ಣಾಪುರ ‌ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಂಗಳವಾರ ಬೆಳಗಿನ ಜಾವ 5.52ರ ಶುಭ ಮುಹೂರ್ತದಲ್ಲಿ ಕೃಷ್ಣಮಠದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಿದರು. ಈ ಮೂಲಕ ಅದಮಾರು ಮಠದ ದ್ವೈವಾರ್ಷಿಕ ಪರ್ಯಾಯ ಅವಧಿ ಪೂರ್ಣಗೊಂಡು ಅಧಿಕೃತವಾಗಿ ಕೃಷ್ಣಾಪುರ ಮಠದ ಪರ್ಯಾಯ ಆರಂಭವಾಯಿತು.

ಇದಕ್ಕೂ ಮುನ್ನ ಸಂಪ್ರದಾಯದಂತೆ ನಸುಕಿನ 2.15ಕ್ಕೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿದ ವಿದ್ಯಾಸಾಗರ ತೀರ್ಥರು, 2.30ಕ್ಕೆ ಉಡುಪಿಯ ಜೋಡುಕಟ್ಟೆ ಪ್ರವೇಶಿಸಿ, ಪಟ್ಟದ ದೇವರಾದ ದ್ವಿಭುಜ ಕಾಳೀಯ ಮರ್ಧನ ಮೂರ್ತಿಗೆ ಪೂಜೆ ಸಲ್ಲಿಸಿ ಪರ್ಯಾಯ ಮೆರವಣಿಗೆಗೆ ಚಾಲನೆ ನೀಡಿದರು. ಅಷ್ಟಮಠಗಳ ಯತಿಗಳು ಜೇಷ್ಠತೆ ಆಧಾರದಲ್ಲಿ ಮೇನೆಯಲ್ಲಿ (ಪಲ್ಲಕ್ಕಿ) ಕುಳಿತು ಸಾಗಿದರು.

ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪರ್ಯಾಯ ಮೆರವಣಿಗೆ ನಡೆಯಿತು.

ADVERTISEMENT

ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪರ್ಯಾಯ ಮೆರವಣಿಗೆಯನ್ನು ವೀಕ್ಷಿಸಿ ಅಷ್ಟಮಠಗಳ ಯತಿಗಳಿಗೆ ಗೌರವ ಸಲ್ಲಿಸಿದರು.

ಚಂಡೆ, ಭಜನೆ ಸೇರಿದಂತೆ ಸಾಂಪ್ರದಾಯಿಕ ಕಲಾಪ್ರಕಾರಗಳು ಉತ್ಸವದ ಮೆರುಗನ್ನು ಹೆಚ್ಚಿಸಿದ್ದವು.

ಪರ್ಯಾಯ ಮೆರವಣಿಗೆ ರಥಬೀದಿ ಪ್ರವೇಸಿದ ಬಳಿಕ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ, ಚಂದ್ರಮೌಳೀಶ್ವರ, ಅನಂತೇಶ್ವರ ಹಾಗೂ ಮಧ್ವಾಚಾರ್ಯರ ಸನ್ನಿಧಿಯ ದರ್ಶನ ಪಡೆದರು.

ನಂತರ ಕೃಷ್ಣಮಠದ ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆಯಿತು. ಬಳಿಕ ಅದಮಾರು ಮಠದ ಈಶಪ್ರಿಯ ತೀರ್ಥರಿಂದ ಮಧ್ವಾಚಾರ್ಯ ಕರಾರ್ಚಿತ ಅಕ್ಷಯ ಪಾತ್ರೆ, ಬೆಳ್ಳಿಯ ಸಟ್ಟುಗ ಹಾಗೂ ಗರ್ಭಗುಡಿಯ ಕೀಲಿಕೈ ಪಡೆದು ಸುಮುಹೂರ್ತದಲ್ಲಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಿದರು.

ಕೃಷ್ಣಮಠದ 251ನೇ ದ್ವೈವಾರ್ಷಿಕ ಪರ್ಯಾಯ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡ ವಿದ್ಯಾಸಾಗರ ತೀರ್ಥರು ಸಂಪ್ರದಾಯದಂತೆ ಬಡಗುಮಾಳಿಗೆಯ ಅರಳು ಗದ್ದುಗೆಯಲ್ಲಿ ಕುಳಿತು ಅಷ್ಟಮಠಗಳ ಯತಿಗಳಿಗೆ ಗಂಧಾದ್ಯುಪಚಾರ ಮಾಡಿ, ಪಟ್ಟ ಕಾಣಿಕೆ ಸಲ್ಲಿಸಿದರು. ಮಾಲಿಕೆ ಮಂಗಳಾರತಿ ನೆರವೇರಿತು. ನಂತರ ರಾಜಾಂಗಣದಲ್ಲಿ ಎಲ್ಲ ಮಠಾಧೀಶರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪರ್ಯಾಯ ದರ್ಬಾರ್ ನಡೆಯಿತು.

ಬೆಳಿಗ್ಗೆ 10ಕ್ಕೆ ಪರ್ಯಾಯ ಯತಿಗಳು ಕೃಷ್ಣನಿಗೆ ಮಹಾಪೂಜೆ ನೆರವೇರಿಸಲಿದ್ದಾರೆ. ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 7ಗಂಟೆಗೆ ಬ್ರಹ್ಮ ರಥೋತ್ಸವದ ಮೂಲಕ ಪರ್ಯಾಯ ಉತ್ಸವ ಸಂಪನ್ನಗೊಳ್ಳಲಿದೆ.

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಜ.17, 2024ರವರೆಗೂ ಪರ್ಯಾಯ ಪೀಠದಲ್ಲಿರಲಿದ್ದು, ಕೃಷ್ಣನ ಪೂಜೆ ಸಹಿತ ಕೃಷ್ಣ ಮಠದ ಸಂಪೂರ್ಣ ಆಡಳಿತವನ್ನು ನಿಭಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.