
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶೀರೂರು ಪರ್ಯಾಯದ ದರ್ಬಾರ್ ನಡೆಯಿತು
ಉಡುಪಿ: ‘ನಮ್ಮ ಧರ್ಮದ ಮೂಲ ಗ್ರಂಥಗಳು ವೇದಗಳು. ಅವುಗಳ ರಕ್ಷಣೆ ಮತ್ತು ಪೋಷಣೆಯಿಂದ ಭಗವಂತ ಸಂತೃಪ್ತನಾಗುತ್ತಾನೆ. ವೇದ ಪಂಡಿತರ ಪೋಷಣೆಗೆ ಪರ್ಯಾಯದಲ್ಲಿ ಆದ್ಯತೆ ನೀಡಲಾಗುವುದು’ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ಶ್ರೀಪಾದರು ಹೇಳಿದರು.
ಸರ್ವಜ್ಞ ಪೀಠಾರೋಹಣದ ಬಳಿಕ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ದರ್ಬಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ವೇದಗಳು ನಮಗೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಮಹಾಭಾರತ, ರಾಮಾಯಣ, ಭಗವದ್ಗೀತೆ ಮೊದಲಾದ ಗ್ರಂಥಗಳು ಅದರ ಅರ್ಥ ಹೇಳಲು ಬಂದಿವೆ’ ಎಂದರು.
‘ವೇದವನ್ನು ನಾವು ಉಳಿಸಬೇಕು ಆ ಮೂಲಕ ಕೃಷ್ಣನ ಅನುಗ್ರಹಕ್ಕೆ ಪಾತ್ರವಾಗಬೇಕು. ನಮ್ಮ ಪರ್ಯಾಯದ ಎರಡು ವರ್ಷಗಳಲ್ಲಿ ಈ ಕೆಲಸ ನಡೆಯಲಿದೆ’ ಎಂದು ತಿಳಿಸಿದರು.
‘ಕೃಷ್ಣನ ಪೂಜೆ ಮಾಡುವುದು ದೊಡ್ಡ ಯಾಗ ಮಾಡಿದಂತೆ. ಮಧ್ವಾಚಾರ್ಯಾರು ಕೃಷ್ಣನನ್ನು ಬರಿ ಪೂಜೆ ಮಾಡುವುದಕ್ಕಾಗಿ ಪ್ರತಿಷ್ಠಾಪಿಸಿಲ್ಲ, ಪೂಜೆಯ ಜೊತೆಗೆ ಕೃಷ್ಣನ ಸಂದೇಶವೂ ನಮಗೆ ಗೊತ್ತಾಗಬೇಕೆಂಬುದು ಅವರ ಉದ್ದೇಶವಾಗಿತ್ತು’ ಎಂದರು.
‘ಮಧ್ವಾಚಾರ್ಯರು ಜನರ ಸೇವೆ ಮತ್ತು ಜನಾರ್ದನನ ಸೇವೆ ಮಾಡಬೇಕು ಎಂದು ಹೇಳಿದ್ದಾರೆ. ಎಲ್ಲರೊಳಗೂ ಪರಮಾತ್ಮ ಇದ್ದಾನೆ ಎಂಬ ಚಿಂತನೆ ನಮ್ಮಲ್ಲಿ ಮೂಡಲು ಜನರ ಸೇವೆ ಮಾಡಬೇಕು. ಎಲ್ಲಾ ಮನುಷ್ಯರನ್ನೂ, ಪ್ರಾಣಿಗಳನ್ನೂ ಪ್ರೀತಿಸುವ ಮೂಲಕ ಪರಮಾತ್ಮನ ಆರಾಧನೆ ಮಾಡಬೇಕು’ ಎಂದು ಅವರು ತಿಳಿಸಿದರು.
ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘200 ವರ್ಷಗಳಿಂದಲೂ ಮೈಸೂರು ಅರಮನೆ ಮತ್ತು ಉಡುಪಿ ಶ್ರೀಕೃಷ್ಣ ಮಠದ ನಡುವೆ ಉತ್ತಮ ಸಂಬಂಧವಿದೆ’ ಎಂದರು.
‘ಉಡುಪಿಯ 800 ವರ್ಷಗಳ ಇತಿಹಾಸ ಗಮನಿಸಿದರೆ, ಲೋಕ ಕಲ್ಯಾಣ ಮತ್ತು ಧರ್ಮ ರಕ್ಷಣೆಗಾಗಿ ಅಷ್ಟ ಮಠಗಳು ಅನನ್ಯ ಸೇವೆ ಸಲ್ಲಿಸಿರುವುದನ್ನು ಕಾಣಬಹುದಾಗಿದೆ’ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬೆಂಗಳೂರು ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸ್, ಉಪಾಧ್ಯಕ್ಷ ಚಂಚಲಪತಿ ದಾಸ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಮಟ್ಟಾರು ರತ್ನಾಕರ ಹೆಗ್ಡೆ, ಸುಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅರ್ಚಕ ಲಕ್ಷ್ಮೀನಾರಾಯಣ ಭಟ್, ನಿವೃತ್ತ ಉಪನ್ಯಾಸಕ ಎನ್. ಲಕ್ಷ್ಮೀನಾರಾಯಣ ಭಟ್ ಹಾಗೂ ಸಮಾಜ ಸೇವಕ ಶ್ರೀಪತಿ ಭಟ್ ಗುಂಡಿಬೈಲು ಅವರಿಗೆ ಪರ್ಯಾಯ ದರ್ಬಾರ್ ಸನ್ಮಾನ ನೀಡಲಾಯಿತು.
ಇದೇ ವೇಳೆ ತಿರುಪತಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಸಾದವನ್ನು ಯತಿಗಳಿಗೆ ನೀಡಲಾಯಿತು.
ವೇದವರ್ಧನ ಶ್ರೀಪಾದರಿಗೆ ಸಣ್ಣ ಪ್ರಾಯದಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಅವರಿಗೆ ಎಲ್ಲರ ಸಹಕಾರ ಅಗತ್ಯ. ವೇದಾಂತ ಅಧ್ಯಯನದ ಆಸಕ್ತಿಯನ್ನು ಜನರಲ್ಲಿ ಬೆಳೆಸಲು ಪರ್ಯಾಯ ಅವಧಿಯಲ್ಲಿ ಅವರು ಪ್ರಯತ್ನಿಸಬೇಕು. ಪ್ರತಿಯೊಬ್ಬರೂ ಲೋಕಕಲ್ಯಾಣಕ್ಕಿಂತ ಮೊದಲು ನಿಮ್ಮ ಉದ್ಧಾರವನ್ನು ನೀವು ಮಾಡಿಕೊಳ್ಳಬೇಕು.ವಿದ್ಯಾಸಾಗರತೀರ್ಥ ಶ್ರೀಪಾದರು ಕೃಷ್ಣಾಪುರ ಮಠ
ಶ್ರೀಕೃಷ್ಣ ದೇವರು ಗೋವುಗಳ ಹಿತ ಬಯಸಿದವರು. ಅವುಗಳು ಮನುಷ್ಯನಿಗೆ ತುಂಬಾ ಸಹಹಾರಿಯಾಗಿದ್ದು ಗೋವುಗಳಿಗೂ ನ್ಯಾಯ ಸಿಗಬೇಕು. ಗೋವುಗಳ ಮಾಂಸ ತಿನ್ನುವುದು ಅವುಗಳ ಕಾಲು ಕಡಿಯುವಂತಹ ಕೃತ್ಯಗಳು ನಡೆಯಬಾರದು. ದೇಶದಲ್ಲಿ ಅಶಾಂತಿ ಕ್ಷೋಭೆಗಳು ಕಡಿಮೆಯಾಗಿ ಶಾಂತಿ ನೆಲೆಸಲಿ.ವಿದ್ಯಾಧೀಶತೀರ್ಥ ಶ್ರೀಪಾದರು ಪಲಿಮಾರು ಮಠದ ಹಿರಿಯ ಶ್ರೀ
ವೇದವರ್ಧನ ಶ್ರೀಪಾದರ ಪುಟ್ಟ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಬಂದಿದೆ. ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ನಾವೆಲ್ಲರೂ ಅವರೊಂದಿಗೆ ಕೈಜೋಡಿಸಬೇಕಾಗಿದೆ. ಐದು ಪರ್ಯಾಯಗಳನ್ನು ಪೂರೈಸಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ವೇದವರ್ಧನ ಶ್ರೀಪಾದರ ವಯಸ್ಸಿನಲ್ಲಿಯೇ ಮೊದಲ ಪರ್ಯಾಯವನ್ನು ನಡೆಸಿದ್ದರು.ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪೇಜಾವರ ಮಠಾಧೀಶ
ವೇದವರ್ಧನರು ವೇದದ ವರ್ಧನೆ ಮಾಡುವ ಮೂಲಕ ಸಜ್ಜನರಲ್ಲಿ ವೇದಗಳ ಬಗೆಗಿನ ಕಾಳಜಿಯನ್ನು ಹೆಚ್ಚಿಸುವಲ್ಲಿ ಸಫಲರಾಗಲಿ. ಅವರ ಪರ್ಯಾಯ ಕಾಲದಲ್ಲಿ ವೇದ ವೇದಾಂತಗಳ ವಿಶೇಷ ಅಧ್ಯಯನ ನಡೆಯಲಿ. ಉಡುಪಿಯಲ್ಲಿ ಅನ್ನಯಜ್ಞದ ಜೊತೆಗೆ ನಿರಂತರವಾಗಿ ಜ್ಞಾನ ಯಜ್ಞವೂ ನಡೆಯುತ್ತಿದೆ. ನಮ್ಮನ್ನು ತುಂಬಾ ಹೊಗಳುವವರನ್ನು ನಂಬಬೇಡಿ ಯಾರು ಪ್ರೀತಿ ತೋರಿಸುತ್ತಾರೊ ಅವರನ್ನು ನಂಬಿ.ವಿದ್ಯಾವಲ್ಲಭತೀರ್ಥ ಶ್ರೀಪಾದರು ಕಾಣಿಯೂರು ಮಠ
ಅಪ್ರಮಾಣಿಕತ್ವ ಅಧರ್ಮವನ್ನು ದೇವರು ಸಹಿಸುವುದಿಲ್ಲ. ಎಲ್ಲಾ ಅಧರ್ಮ ಇಲ್ಲವಾಗಬೇಕೆಂಬ ಉದ್ದೇಶದಿಂದ ಮಧ್ವಾಚಾರ್ಯರು ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿದ್ದಾರೆ. ಇಂದಿನ ಕಾಲದಲ್ಲಿ ಪ್ರಾಮಾಣಿಕರಿಗಿಂತಲೂ ಅಪ್ರಮಾಣಿಕರ ಮೇಲೆ ಪ್ರೀತಿ ತೋರಿಸುವವರು ಹೆಚ್ಚು ವಿವೇಕಿಯಾದವನು ವಿಘ್ನಗಳನ್ನು ಸೋಪಾನ ಮಾಡಿ ಮುಂದೆ ಬರಬೇಕು.ವಿಶ್ವವಲ್ಲಭತೀರ್ಥ ಶ್ರೀಪಾದರು ಸೋದೆ ಮಠ
ಗುರು ಪರಂಪರೆಯಲ್ಲಿ ಉತ್ತಮ ಸಾಧನೆ ಮಾಡಿರುವ ಯತಿಗಳನ್ನು ಸದಾ ಸ್ಮರಿಸಬೇಕು. ಅವರನ್ನು ನಮ್ಮೊಳಗೆ ಆಹ್ವಾನಿಸಿ ಕೃಷ್ಣ ಪೂಜೆ ಮಾಡಬೇಕು.ಈಶಪ್ರಿಯತೀರ್ಥ ಶ್ರೀಪಾದರು ಅದಮಾರು ಮಠ
ಆಚಾರ್ಯ ಮಧ್ವರು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಟ್ಟವರು ಅದನ್ನು ವಾದಿರಾಜರು ಮತ್ತೆ ವಿಸ್ತರಿಸಿ ಎರಡು ವರ್ಷಕ್ಕೆ ಮಾಡಿದ್ದರು. ವೇದವರ್ಧನರು ವಾಮನ ತೀರ್ಥ ಪರಂಪರೆಯವರಾದರೂ ತ್ರಿವಿಕ್ರಮನಂತೆ ಪರ್ಯಾಯ ಯಶಸ್ವಿಗೊಳಿಸಲಿ.ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಫಲಿಮಾರು ಮಠದ ಕಿರಿಯ ಶ್ರೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.