ADVERTISEMENT

ಉಡುಪಿ ರೈಲ್ವೆ ಯಾತ್ರಿ ಸಂಘ ಒತ್ತಾಯ l ದುಬಾರಿ ಟಿಕೆಟ್‌: ಆರೋಪ

ಉಡುಪಿ ರೈಲ್ವೆ ಯಾತ್ರಿ ಸಂಘ ಒತ್ತಾಯ l ದುಬಾರಿ ಟಿಕೆಟ್‌: ಆರೋಪ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:10 IST
Last Updated 1 ಫೆಬ್ರುವರಿ 2023, 5:10 IST
ವಂದೇ ಭಾರತ್ ರೈಲು
ವಂದೇ ಭಾರತ್ ರೈಲು   

ಉಡುಪಿ: ‘ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿರುವ ಹಾಗೂ ಅನಾನುಕೂಲಗಳೇ ಹೆಚ್ಚಾಗಿರುವ ವಂದೇ ಭಾರತ್ ರೈಲುಗಳು ಕೊಂಕಣ ರೈಲು ಮಾರ್ಗದಲ್ಲಿ ಓಡಿಸುವ ಅಗತ್ಯವಿಲ್ಲ’ ಎಂದು ಉಡುಪಿ ರೈಲ್ವೆ ಯಾತ್ರಿ ಸಂಘ ಹೇಳಿದೆ.

ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ 3 ಹೊಸ ವಂದೇ ಭಾರತ್ ರೈಲುಗಳನ್ನು ಆರಂಭಿಸಲಾಗುತ್ತಿದ್ದು, ಈಗಾಗಲೇ ಓಡುತ್ತಿರುವ ರೈಲುಗಳಿಗೆ ಪ್ರಯಾಣಿಕರ ಸ್ಪಂದನ ಉತ್ತಮವಾಗಿಲ್ಲ. ಹಾಗಾಗಿ ಹೊಸದಾಗಿ ವಂದೇ ಭಾರತ್ ರೈಲುಗಳನ್ನು ಓಡಿಸಲು ಹೊರಟಿ ರುವುದು ಸರಿಯಲ್ಲ.

ವಂದೇ ಭಾರತ್ ರೈಲುಗಳಲ್ಲಿ ಏರ್ ಕಂಡಿಷನ್ ಚೇರ್ ಕಾರ್ ವ್ಯವಸ್ಥೆ ಮಾತ್ರ ಇರುವುದರಿಂದ ದೂರದ ಊರುಗಳಿಗೆ ಪ್ರಯಾಣಿಸಬೇಕಾರೆ ಬಸ್ಸಿನಂತೆ ಕುಳಿತೇ ಪ್ರಯಾಣಿಸಬೇಕಾಗಿದೆ. ಮುಂಬೈ–ಮಂಗಳೂರು ಮಧ್ಯೆ 17 ಗಂಟೆ ಪ್ರಯಾಣವನ್ನು ಕುಳಿತು ಪ್ರಯಾಣಿಸುವುದು ಕಷ್ಟ. ವೃದ್ಧರು, ಗರ್ಭಿಣಿಯರು, ರೋಗಿಗಳಿಗೆ ಹೆಚ್ಚು ತೊಂದರೆಯಾಗುತ್ತದೆ. ಪ್ರಸ್ತುತ ಮಂಗಳೂರು–ಮುಂಬೈ ಮಧ್ಯೆ ಓಡುತ್ತಿ ರುವ ರೈಲಿನಲ್ಲಿ ಕುಳಿತು ಪ್ರಯಾಣಿಸಲು ₹290, ಸ್ಲೀಪರ್‌ನಲ್ಲಿ ₹520 ಹಾಗೂ ಎಸಿ ಸ್ಲೀಪರ್‌ಗೆ ₹1,040 ದರವಿದೆ.

ADVERTISEMENT

ವಂದೇ ಭಾರತ್ ರೈಲಿನಲ್ಲಿ ಕುಳಿತು ಪ್ರಯಾಣಿಸಲು ₹2,000ಕ್ಕಿಂತ ಹೆಚ್ಚಿನ ಹಣ ನೀಡಬೇಕಾಗಿರುವುದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ರೈಲು ಪ್ರಯಾಣಿಕರಿಗೆ ದುಬಾರಿಯಾಗಿದೆ ಎಂದು ಸಂಘದ ಅಧ್ಯಕ್ಷ ಶೇಖರ್ ಕೋಟ್ಯಾನ್ ಹೇಳಿದ್ದಾರೆ.

ಮುಂಬೈಗೆ ಹೋಗುವ ಹೆಚ್ಚಿನವರು ಊರಿನಿಂದ ತೆಂಗಿನಕಾಯಿ, ಕುಚ್ಚಲಕ್ಕಿ ಮುಂತಾದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ವಂದೇ ಭಾರತ್ ರೈಲಿನಲ್ಲಿ ಹೆಚ್ಚಿನ ಲಗೇಜ್ ಕೊಂಡೊಯ್ದರೆ ದಂಡ ವಿಧಿಸಲಾಗುತ್ತದೆ. ಪ್ರಸ್ತುತ ಮಂಗಳೂರು ಎಕ್ಸ್‌ಪ್ರೆಸ್‌ ಮುಂಬೈನಿಂದ ಮಂಗಳೂರು ತಲುಪಲು 14 ಗಂಟೆ ತಗಲುತ್ತದೆ. ವಂದೇ ಭಾರತ್ ರೈಲು ಕೂಡ ಇಷ್ಟೆ ಅವಧಿ ತೆಗೆದುಕೊಳ್ಳುತ್ತದೆ. ಸಾವಿರಾರು ರೂಪಾಯಿ ದರ ನೀಡಿದರೂ ಪ್ರಯಾಣದ ಅವಧಿಯಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ ಎಂದರು.

ಸರಣಿ ಅವಘಡಗಳು:

ಡೀಸೆಲ್ ಹಾಗೂ ವಿದ್ಯುತ್ ಎಂಜಿನ್‌ಗಳಂತೆ ವಂದೇ ಭಾರತ್ ರೈಲು ಮುಂಭಾಗ ಗಟ್ಟಿಮುಟ್ಟಾಗಿಲ್ಲ. ಹಲವು ಬಾರಿ ಇದು ಅವಘಡಕ್ಕೆ ತುತ್ತಾಗಿ ಪ್ರಯಾಣಿಕರು ಗಂಟೆ ಗಟ್ಟೆಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಂದೇ ಭಾರತ್ ರೈಲುಗಳಲ್ಲಿ ನಿಲುಗಡೆ ಕಡಿಮೆ ಇರುವುದರಿಂದ ಹೆಚ್ಚಿನ ಪ್ರಯಾಣಿಕರಿಗೆ ಸಂಚಾರಕ್ಕೆ ಅವಕಾಶ ಸಿಗುವುದಿಲ್ಲ.

ಸಂಚಾರದಿಂದ ಮುಕ್ತ ವಾಗಿರಿಸಿರುವ ರೈಲುಗಳಲ್ಲಿರುವ 24 ಬೋಗಿಗಳ ಎರಡು ಎಲ್‌ಎಚ್‌ಬಿ ರೇಕುಗಳನ್ನು- ಬಾಂದ್ರಾ-ಮಂಗಳೂರು ಹಾಗೂ ಬಾಂದ್ರಾ-ತಿರುವನಂತಪುರಕ್ಕೆ ವಸಾಯ್– ಪೆನ್ವೇಲ್ ಮಾರ್ಗವಾಗಿ ಪ್ರತಿದಿನ ಎಕ್ಸ್‌ಪ್ರೆಸ್‌ ರೈಲು ಓಡಿಸಬೇಕು ಎಂದು ಉಡುಪಿ ರೈಲು ಯಾತ್ರಿ ಸಂಘದ ಅಧ್ಯಕ್ಷ ಶೇಖರ್ ಕೋಟ್ಯಾನ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.