ADVERTISEMENT

ಉಡುಪಿ: ಜೀವಕ್ಕೆ ಆಪತ್ತು ತರುತ್ತಿದೆ ಸರ್ವಿಸ್‌ ರಸ್ತೆ

ಬೃಹತ್‌ ಹೊಂಡಗಳಿಂದ ವಾಹನಗಳ ಸಂಚಾರಕ್ಕೆ ತೊಡಕು: ವಾಹನ ಸವಾರರಿಗೆ ನಿತ್ಯ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 3:56 IST
Last Updated 3 ಸೆಪ್ಟೆಂಬರ್ 2025, 3:56 IST
ಮಳೆ ಬಂದಾಗ ಅಂಬಲಪಾಡಿ ಸರ್ವಿಸ್‌ ರಸ್ತೆಯ ದುಸ್ಥಿತಿ
ಮಳೆ ಬಂದಾಗ ಅಂಬಲಪಾಡಿ ಸರ್ವಿಸ್‌ ರಸ್ತೆಯ ದುಸ್ಥಿತಿ   

ಉಡುಪಿ: ನಗರದ ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಕರಾವಳಿ ಬೈಪಾಸ್‌ವರೆಗಿನ ಹಾಗೂ ಕರಾವಳಿ ಬೈಪಾಸ್‌ನಿಂದ ಕಿನ್ನಿಮುಲ್ಕಿ ವರೆಗಿನ ಸರ್ವಿಸ್‌ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತರುತ್ತಿದೆ.

ಅಂಬಲಪಾಡಿ ಬೈಪಾಸ್‌ ಬಳಿ ಸೋಮವಾರ ನಡೆದ ಅಪಘಾತದಲ್ಲಿ ಬೈಕ್‌ ಸವಾರರೊಬ್ಬರು ಮೃತಪಟ್ಟಿದ್ದರು. ರಸ್ತೆಯ ಹೊಂಡದಿಂದಾಗಿ ಬೈಕ್‌ ಮಗುಚಿ ರಸ್ತೆಗೆ ಬಿದ್ದ ಅವರ ತಲೆಯ ಮೇಲೆ 14 ಚಕ್ರಗಳ ಬೃಹತ್‌ ಟ್ರಕ್‌ ಹರಿದಿತ್ತು.

ಸರ್ವಿಸ್‌ ರಸ್ತೆಯ ಹೊಂಡದ ಪರಿಣಾಮವಾಗಿಯೇ ಈ ಅಪಘಾತ ಸಂಭವಿಸಿದೆ. ರಸ್ತೆ ತೀರಾ ಹದಗೆಟ್ಟರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಸುವ ಸಂಸ್ಥೆಯವರು ತೀರಾ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ADVERTISEMENT

ಬಿಸಿಲಿನ ವಾತಾವರಣ ಇದ್ದಾಗಲೂ ರಸ್ತೆಯ ಹೊಂಡ ಮುಚ್ಚುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗಿಲ್ಲ. ರಸ್ತೆ ಹೊಂಡಗಳಿಗೆ ಕೆಲವೊಮ್ಮೆ ಜಲ್ಲಿ ಕಲ್ಲುಗಳನ್ನು ಸುರಿಯುತ್ತಿದ್ದು, ಇದರಿಂದ ಸಮಸ್ಯೆ ಇನ್ನಷ್ಟು ಹದಗೆಟ್ಟಿದೆ. ಜಲ್ಲಿಕಲ್ಲುಗಳ ಮೇಲೆ ಸಂಚರಿಸುವಾಗ ಆಯತಪ್ಪಿ ಹಲವು ಮಂದಿ ದ್ವಿಚಕ್ರ ವಾಹನ ಸವಾರರು ರಸ್ತೆಗೆ ಬಿದ್ದಿದ್ದಾರೆ ಎಂದೂ ತಿಳಿಸಿದ್ದಾರೆ.

ಜಿಲ್ಲಾಡಳಿ ಹಾಗೂ ಜನಪ್ರತಿನಿಧಿಗಳು ರಸ್ತೆ ಹೊಂಡ ಮುಚ್ಚುವಂತೆ ಸೂಚನೆ ನೀಡಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕ್ಯಾರೇ ಅನ್ನುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೇ ತಿಂಗಳಲ್ಲಿ ಮಳೆ ಆರಂಭವಾದಾಗಲೇ ರಸ್ತೆ ಹದಗೆಟ್ಟಿತ್ತು. ಅನಂತರ ಹಲವು ದಿನಗಳ ಕಾಲ ಬಿಸಿಲಿನ ವಾತಾವರಣವಿದ್ದರೂ ಸಂಬಂಧಪಟ್ಟವರು ಸರ್ವಿಸ್ ರಸ್ತೆಯ ದುರಸ್ತಿ ನಡೆಸದೆ ತೀವ್ರ ನಿರ್ಲಕ್ಷ್ಯ ವಹಿಸಿದ್ದರು ಎಂದೂ ಹೇಳಿದ್ದಾರೆ.

ಅಂಬಲಪಾಡಿಯಲ್ಲಿ ಮೇಲ್ಸೆತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಸರ್ವಿಸ್‌ ರಸ್ತೆಯಲ್ಲೇ ಸಂಚರಿಸುತ್ತಿವೆ. ಅಗಲ ಕಿರಿದಾದ ಈ ಸರ್ವಿಸ್‌ ರಸ್ತೆಯುದ್ದಕ್ಕೂ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿದೆ.

ಸರ್ವಿಸ್‌ ರಸ್ತೆಯ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದರೆ ರಸ್ತೆಯಲ್ಲೇ ನೀರು ಹರಿಯುತ್ತದೆ. ಸರ್ವಿಸ್‌ ರಸ್ತೆಗಳನ್ನು ವಿಸ್ತರಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೆದ್ದಾರಿಯಿಂದ ವಾಹನಗಳು ಸರ್ವಿಸ್‌ ರಸ್ತೆಗೆ ಪ್ರವೇಶಿಸುವಲ್ಲಿಯೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಜೊತೆಗೆ ಹೊಂಡಗಳಿಗೆ ಸುರಿದ ಜಲ್ಲಿಕಲ್ಲುಗಳು ಚದುರಿನಿಂತು ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿದೆ.

ಮಳೆಗಾಲಕ್ಕೂ ಮುನ್ನವೇ ಅಂಬಲಪಾಡಿಯಿಂದ ಬ್ರಹ್ಮಗಿರಿಗೆ ನೇರ ಸಂಪರ್ಕ ರಸ್ತೆಯನ್ನು ತೆರೆಯಲಾಗುವುದು ಎಂದು ಸಂಬಂಧಪಟ್ಟವರು ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಜನರು ಹೇಳಿದ್ದಾರೆ.

ರಾಂಗ್‌ಸೈಡ್‌ ಸಂಚಾರ: ಮೇಲ್ಸೆತುವೆ ಕಾಮಗಾರಿ ಆರಂಭವಾದ ಬಳಿಕ ಅಂಬಲಪಾಡಿ ಹೆದ್ದಾರಿ ಬದಿಯ ಸರ್ವಿಸ್‌ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಜಿಲ್ಲಾಡಳಿತ ಆದೇಶಿಸಿತ್ತು. ಆದರೆ ಇದು ಪಾಲನೆಯಾಗುತ್ತಿಲ್ಲ. ಹದಗೆಟ್ಟಿರುವ ಸರ್ವಿಸ್‌ ರಸ್ತೆಗಳಲ್ಲಿ ಬೈಕ್‌, ಆಟೊ, ಕಾರಿನವರು ರಾಂಗ್‌ ಸೈಡ್‌ನಿಂದ ಬರುವುದರಿಂದ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗಿದೆ.

ಮೇಲ್ಸೇತುವೆ ಕಾಮಗಾರಿ ಆರಂಭವಾಗುವ ಮೊದಲು ಅಂಬಲಪಾಡಿ ಬೈಪಾಸ್‌ನಲ್ಲಿ ಪೊಲೀಸರು ನಿಲ್ಲುತ್ತಿದ್ದರು. ಈಗ ನಿಲ್ಲುತ್ತಿಲ್ಲ ಇದರಿಂದ ರಾಂಗ್‌ಸೈಡ್‌ ಸಂಚಾರ ಮಾಡುವವರಿಗೆ ಯಾವುದೇ ಭಯವಿಲ್ಲದಂತಾಗಿದೆ. ಕರಾವಳಿ ಬೈಪಾಸ್‌ನಲ್ಲೂ ಪೊಲೀಸರ ಮುಂದೆಯೇ ವಾಹನ ಸವಾರರು ರಾಂಗ್‌ಸೈಡ್‌ ಸಂಚಾರ ಮಾಡುತ್ತಾರೆ ಎಂದು ಜನರು ತಿಳಿಸಿದ್ದಾರೆ.

ಅಂಬಲಪಾಡಿ ಬೈಪಾಸ್‌ನಿಂದ ಬ್ರಹ್ಮಗಿರಿಗೆ ತಿರುಗುವಲ್ಲಿ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿರುವುದರಿಂದ ವಾಹನಗಳು ತೆವಳಿಕೊಂಡು ತಿರುವು ತೆಗೆದುಕೊಳ್ಳಬೇಕಾದ ಸ್ಥಿತಿ ಇದೆ. ಈ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಅಪಾಯವೂ ಇದೆ. ಸಂಬಂಧಪಟ್ಟವರು ಸರ್ವಿಸ್‌ ರಸ್ತೆಯನ್ನು ತುರ್ತಾಗಿ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿತ್ಯ ವಾಹನ ದಟ್ಟಣೆ ಸಮಸ್ಯೆ ಮಳೆ ಬಂದರೆ ತೋಡಿನಂತಾಗುವ ಸರ್ವಿಸ್‌ ರಸ್ತೆ

‘ಅಧಿಕಾರಿಗಳು ಜನಪ್ರತಿನಿಧಿಗಳೇ ಹೊಣೆ’

‘ಅಂಬಲಪಾಡಿ ಬೈಪಾಸ್‌ ಬಳಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುತ್ತಿಗೆದಾರರ ಮತ್ತು ಜನಪ್ರತಿನಿಧಿಗಳೇ ಹೊಣೆ. ಬೈಕ್‌ ಸವಾರ ರಸ್ತೆ ಹೊಂಡಕ್ಕೆ ಬಿದ್ದು ಲಾರಿಯಡಿಗೆ ಮುಗುಚಿ ಬೀಳುವ ದೃಶ್ಯವು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಹೇಳಿದರು. ‘ಸರ್ವಿಸ್‌ ರಸ್ತೆ ಹದಗೆಟ್ಟು ತಿಂಗಳುಗಳು ಕಳೆದರೂ ಸಂಬಂಧಪಟ್ಟವರು ದುರಸ್ತಿಗೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ. ಮೇಲ್ಸೇತುವೆ ಕಾಮಗಾರಿ ಮುಗಿಯುವ ವರೆಗಾದರೂ ಅಂಬಲಪಾಡಿ ಬೈಪಾಸ್‌ನಲ್ಲಿ ಪೊಲೀಸರನ್ನು ನೇಮಿಸಬೇಕು ಮತ್ತು ಸರ್ವಿಸ್‌ ರಸ್ತೆಯನ್ನು ತಾತ್ಕಾಲಿಕವಾಗಿಯಾದರೂ ದುರಸ್ತಿ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.