
ಉಡುಪಿ: ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡಬೇಕು. ಕೊಳಚೆ ನೀರನ್ನು ಶುದ್ಧೀಕರಿಸದೆ ನದಿ, ತೋಡುಗಳಿಗೆ ಬಿಟ್ಟು ಜಲಮಾಲಿನ್ಯ ಉಂಟು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ 376ಕ್ಕೂ ಹೆಚ್ಚು ವಸತಿ ಸಮುಚ್ಚಯಗಳು ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದೇ ಮಳೆ ನೀರು ಹರಿಯುವ ತೋಡುಗಳಿಗೆ ಬಿಡುತ್ತಿರುವ ಕಾರಣ ನಗರಸಭೆ ವತಿಯಿಂದ ನೋಟಿಸ್ ನೀಡಲಾಗಿದೆ ಎಂದರು.
ಅವುಗಳಲ್ಲಿ 200 ವಸತಿ ಸಮುಚ್ಚಯಗಳು ಮಣಿಪಾಲದಲ್ಲಿ, 105 ಅಪಾರ್ಟ್‌ಮೆಂಟ್‌ಗಳು ಉಡುಪಿ ನಗರದಲ್ಲಿ ಹಾಗೂ 70 ಮಲ್ಪೆ ವ್ಯಾಪ್ತಿಯಲ್ಲಿದ್ದು, ವಸತಿ ಸಮುಚ್ಚಯದ ಮಾಲೀಕರು ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡಲು ಮುಂದಾಗಬೇಕು ಎಂದು ಸೂಚಿಸಿದರು.
ನಗರಸಭಾ ವ್ಯಾಪ್ತಿಯ ಕೆಲವು ವಸತಿ ಸಮುಚ್ಚಯಗಳಲ್ಲಿ ಕೊಳಚೆ ನೀರಿನ ಸಂಸ್ಕರಣ ಘಟಕಗಳಿವೆ. ಆದರೂ ಅವುಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈ ಹಿಂದೆ ಅಂದಾಜು ₹400 ಕೋಟಿ ವೆಚ್ಚದ ಯೋಜನೆ ರೂಪಿಸಿ, ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ಸರ್ಕಾರದಿಂದ ಈ ಬಗ್ಗೆ ಯಾವುದೇ ಒಪ್ಪಿಗೆ ದೊರೆತಿಲ್ಲ. ಇಲ್ಲಿನ ಭೂ ಪ್ರದೇಶ ಏರಿಳಿತ ಇರುವುದರಿಂದ ಹೆಚ್ಚಿನ ಅನುದಾನ ಅವಶ್ಯಕತೆ ಇದೆ ಎಂದರು.
ಸಕ್ಕಿಂಗ್ ಯಂತ್ರಗಳ ಬಳಕೆಯೊಂದಿಗೆ ತ್ಯಾಜ್ಯ ನೀರಿನ ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು. ನಗರ ವ್ಯಾಪ್ತಿಯ ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳು ಇವೆಯೇ ಎಂಬುದರ ಬಗ್ಗೆ ಸರ್ವೆ ಮಾಡಿ 20 ದಿನಗಳೊಳಗಾಗಿ ಮಾಹಿತಿ ನೀಡುವಂತೆ ನಗರಸಭೆ ಆಯುಕ್ತರು ಹಾಗೂ ಪ್ರಾದೇಶಿಕ ಪರಿಸರ ಅಧಿಕಾರಿಗೆ ಅವರು ಸೂಚನೆ ನೀಡಿದರು.
ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಪರಿಸರ ಅಧಿಕಾರಿ ಕೆ. ಕೀರ್ತಿ ಕುಮಾರ್, ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.
ತ್ಯಾಜ್ಯ ನೀರು ನೇರವಾಗಿ ಜಲ ಮೂಲಗಳಿಗೆ ಸೇರಿ ನೀರು ಕಲುಷಿತವಾಗುತ್ತಿದೆ. ತ್ಯಾಜ್ಯ ನೀರನ್ನು ಶುದ್ಧಿಕರಿಸಿ ಅವುಗಳನ್ನು ಉದ್ಯಾನದ ಸೇರಿದಂತೆ ವಿವಿಧೆಡೆ ಮರುಬಳಕೆ ಮಾಡಬೇಕುಸ್ವರೂಪ ಟಿ.ಕೆ. ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.