
ಉಡುಪಿ: ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ನಡೆದಿದ್ದು, ಭಕ್ತರ ಸ್ವಾಗತಕ್ಕೆ ಉಡುಪಿ ನಗರ ಸಜ್ಜಾಗಿದೆ.
ನಗರಸಭೆಯ ವತಿಯಿಂದ ₹50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದ್ದು, ರಾತ್ರಿ ವೇಳೆ ನಗರವು ಕಂಗೊಳಿಸುತ್ತಿದೆ.
ಜ.17 ರಂದು ರಾತ್ರಿ 2 ಗಂಟೆಯಿಂದ ಇಲ್ಲಿನ ಜೋಡುಕಟ್ಟೆಯಿಂದ ಶ್ರೀಕೃಷ್ಣಮಠದವರೆಗೆ 85ಕ್ಕೂ ಅಧಿಕ ಕಲಾ ತಂಡಗಳು, ಸ್ತಬ್ಧ ಚಿತ್ರಗಳಿರುವ ಪರ್ಯಾಯ ಮೆರವಣಿಗೆ ನಡೆಯಲಿದೆ.
18ರಂದು ಬೆಳಿಗ್ಗೆ 5.55ಕ್ಕೆ ಕೃಷ್ಣಮಠದ ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ಸಾಂಪ್ರದಾಯಿಕ ದರ್ಬಾರ್ ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ ಜರುಗಲಿದೆ.
ಬೆಳಿಗ್ಗೆ 6ಗಂಟೆಗೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಸಭೆ ನಡೆಯಲಿದೆ. ವಿವಿಧ ಮಠಾಧೀಶರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಬಿಜೆಪಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳುವರು.
‘ಎರಡು ಲಕ್ಷಕ್ಕೂ ಅಧಿಕ ಭಕ್ತರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ’ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಶೀರೂರು ಪರ್ಯಾಯ ಸ್ವಾಗತ ಸಮಿತಿಯಿಂದ ಜ.17ರಂದು ಸನ್ಮಾನಿಸಲಾಗುವುದು. ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಶೀರೂರು ಶ್ರೀಪಾದರು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.