ADVERTISEMENT

ಶಿರೂರು ಪರ್ಯಾಯ ಪೂರ್ವ ಕಟ್ಟಿಗೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 0:30 IST
Last Updated 14 ಜುಲೈ 2025, 0:30 IST
ಕಟ್ಟಿಗೆ ಮುಹೂರ್ತ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು
ಕಟ್ಟಿಗೆ ಮುಹೂರ್ತ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು   

ಉಡುಪಿ: ಶಿರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮುಹೂರ್ತಗಳಲ್ಲಿ ಮೂರನೆಯದಾದ ಕಟ್ಟಿಗೆ ಮುಹೂರ್ತ ಶ್ರೀಕೃಷ್ಣ ಮಠದಲ್ಲಿ ಪರಿಸರದಲ್ಲಿ ಭಾನುವಾರ ಜರುಗಿತು.

ದಿವಾನ ಉದಯಕುಮಾರ ಸರಳತ್ತಾಯ ನೇತೃತ್ವದಲ್ಲಿ ಪುರೋಹಿತ ಗಿರಿರಾಜ ಉಪಾಧ್ಯಾಯ ಅವರು ವಿಠಲ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ರಥಬೀದಿಯಲ್ಲಿ ಚಂದ್ರೇಶ್ವರ, ಅನಂತೇಶ್ವರ, ಕೃಷ್ಣಮಠದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರಿಗೂ ಪ್ರಾರ್ಥನೆ ಸಲ್ಲಿಸಲಾಯಿತು.

ಕಲ್ಸಂಕದ ಬಳಿಯ ಲಕ್ಷ್ಮಿ ತೋಟದಿಂದ ಕಟ್ಟಿಗೆಗಳನ್ನು ಮೂರು ಎತ್ತಿನ ಗಾಡಿಗಳಲ್ಲಿ ಮತ್ತು ಭಕ್ತರು ತಲೆಹೊರೆಯಲ್ಲಿ ರಥಬೀದಿಗೆ ತಂದರು. ಮಧ್ವಸರೋವರದ ಈಶಾನ್ಯ ಭಾಗದ ನಿಗದಿತ ಸ್ಥಳದಲ್ಲಿ ನವಧಾನ್ಯ ದಾನ, ಪೂಜೆ ಸಲ್ಲಿಸಲಾಯಿತು.

ADVERTISEMENT

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ವೇದವರ್ಧನತೀರ್ಥ ಶ್ರೀಪಾದರು ಜೊತೆಯಾಗಿ ಕಟ್ಟಿಗೆ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.

ಧಾರ್ಮಿಕ ಸಭೆಯಲ್ಲಿ ಮಾತನಾಡಿದ ವೇದವರ್ಧನತೀರ್ಥ ಶ್ರೀಪಾದರು, ‘ಇದು ನಮ್ಮ ಪರ್ಯಾಯ ಎನ್ನುವುದಕ್ಕಿಂತಲೂ ಕೃಷ್ಣ ಭಕ್ತರ ಪರ್ಯಾಯವಾಗಿದೆ’ ಎಂದು ಹೇಳಿದರು. 

‘ಕೃಷ್ಣನಿಗೆ ನೈವೇದ್ಯ ಸಮರ್ಪಿಸಿ, ಅದನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಇದನ್ನು ಸಿದ್ಧಪಡಿಸಲು ಕಟ್ಟಿಗೆಗಳನ್ನು ಭಕ್ತರ ಸಹಕಾರದಿಂದಲೇ ಸಂಗ್ರಹಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.