ADVERTISEMENT

ಉಡುಪಿ: ಖಾಸಗಿ ಬಸ್‌ಗಳ ಅತಿವೇಗಕ್ಕೆ ಬೀಳಲಿ ಕಡಿವಾಣ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 7:39 IST
Last Updated 23 ಜೂನ್ 2025, 7:39 IST
ಉಡುಪಿಯ ಬನ್ನಂಜೆ ಬಳಿ ಈಚೆಗೆ  ಖಾಸಗಿ ಬಸ್ಸೊಂದು ಅತಿ ವೇಗದಿಂದ ಬಂದು ನಡುರಸ್ತೆಯಲ್ಲೇ ತಿರುಗಿ ನಿಂತಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿರುವುದು    
ಉಡುಪಿಯ ಬನ್ನಂಜೆ ಬಳಿ ಈಚೆಗೆ  ಖಾಸಗಿ ಬಸ್ಸೊಂದು ಅತಿ ವೇಗದಿಂದ ಬಂದು ನಡುರಸ್ತೆಯಲ್ಲೇ ತಿರುಗಿ ನಿಂತಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿರುವುದು       

ಉಡುಪಿ: ಖಾಸಗಿ ಬಸ್‌ಗಳ ಅತಿವೇಗ, ಅಜಾಗರೂಕತೆಯ ಚಾಲನೆ ಪ್ರಕರಣಗಳು ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಭಯದಿಂದಲೇ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.

ಕೆಲದಿನಗಳ ಹಿಂದೆ ಉಡುಪಿ ನಗರದ ಬನ್ನಂಜೆಯಲ್ಲಿ ಅತಿವೇಗದಿಂದ ಬಂದ ಖಾಸಗಿ ಬಸ್ಸೊಂದು ನಡುರಸ್ತೆಯಲ್ಲೇ ತಿರುಗಿ ನಿಂತು ಭಯಾತಂಕ ಸೃಷ್ಟಿಸಿತ್ತು. ಬಸ್‌ ಅತಿವೇಗದಿಂದ ಸಂಚರಿಸಿರುವ ಮತ್ತು ತಿರುಗಿ ನಿಂತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಪೊಲೀಸರು ಬಸ್‌ ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಿದ್ದರು.

ಖಾಸಗಿ ಬಸ್‌ಗಳು ನಗರ ವ್ಯಾಪ್ತಿಯ ಮಿತಿಗಿಂತ ಅಧಿಕ ವೇಗದಲ್ಲಿ ಸಂಚರಿಸುವುದು, ಎಲ್ಲೆಂದರಲ್ಲಿ ನಿಲ್ಲಿಸುವುದು ಸಾಮಾನ್ಯವಾಗಿದ್ದು, ಇದರಿಂದ ಇತರ ವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ ಎಂದು ಜನರು ದೂರಿದ್ದಾರೆ.

ADVERTISEMENT

ಕೆಲವೆಡೆ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಖಾಸಗಿ ಬಸ್‌ಗಳು ಕರೆದೊಯ್ಯುತ್ತಿವೆ ಎಂಬ ಆರೋಪಗಳೂ ಕೇಳಿ ಬಂದಿವೆ. ಕುಂದಾಪುರ– ಉಡುಪಿ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ಗಳು ಇನ್ನೊಂದು ಬಸ್‌ ಅನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಪ್ರಯಾಣಿಕರ ಜೀವಕ್ಕೆ ಸಂಚಕಾರ ತರುವ ರೀತಿಯಲ್ಲಿ ಸಂಚಾರ ನಡೆಸುತ್ತಿವೆ  ಎಂದು ಪ್ರಯಾಣಿಕರು ಆರೋಪಿಸುತ್ತಾರೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ದಡಮುಟ್ಟದೆ ಕುಂಟುತ್ತಾ ಸಾಗಿದ್ದು, ಇಂತಹ ಪ್ರದೇಶಗಳಲ್ಲಿ ಸರ್ವಿಸ್‌ ರಸ್ತೆ, ಕಿರಿದಾದ ರಸ್ತೆಗಳಲ್ಲಿ ಸಂಚರಿಸಬೇಕಾಗುತ್ತದೆ. ಅಲ್ಲಿ ಎಲ್ಲೆಂದರಲ್ಲಿ ಬಸ್‌ಗಳು ನಿಲುಗಡೆಯಾಗುವುದರಿಂದ ವಾಹನ ದಟ್ಟಣೆಗೂ ಕಾರಣವಾಗುತ್ತಿವೆ.

ನಗರದ ಅಂಬಲಪಾಡಿ ಬೈಪಾಸ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿನ ಸರ್ವಿಸ್‌ ರಸ್ತೆಗಳಲ್ಲಿ ಎಲ್ಲಾ ವಾಹನಗಳು ಸಂಚರಿಸುತ್ತಿದ್ದು, ಈ ಸರ್ವಿಸ್‌ ರಸ್ತೆಯ ಕರಾವಳಿ ಬೈಪಾಸ್‌ ಮತ್ತು ಅಂಬಲಪಾಡಿ ನಡುವೆ ನಿಲುಗಡೆ ಇಲ್ಲದಿದ್ದರೂ ಕೆಲವು ಖಾಸಗಿ ಬಸ್‌ಗಳನ್ನು ನಿಲುಗಡೆ ಮಾಡುವುದರಿಂದ ಇತರ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ.

ಕರಾವಳಿ ಬೈಪಾಸ್‌ನಿಂದ ಸಿಟಿಬಸ್‌ ನಿಲ್ದಾಣದ ಕಡೆಗೆ ತೆರಳುವ ರಸ್ತೆಯಲ್ಲೂ ಜನರು ಕೈತೋರಿಸುವಲ್ಲಿ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಕೂಡ ಪ್ರಯಾಣಿಕ ಸುರಕ್ಷತೆಯನ್ನು ಪರಿಗಣಿಸದೆ ಅತಿವೇಗದಿಂದ ಸಂಚರಿಸುತ್ತಿರುವ ಬಗ್ಗೆಯೂ ಜನರು ದೂರುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ, ಕಾಲೇಜು ವಿದ್ಯಾರ್ಥಿಗಳು ಬಸ್‌ನ ಮೆಟ್ಟಿಲುಗಳಲ್ಲಿ ನಿಂತು ನೇತಾಡಿಕೊಂಡು ಹೋಗುತ್ತಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಜಿಲ್ಲೆಯ ಬಹುತೇಕ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲದ ಕಾರಣ ಜನರು ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ.

ಉಡುಪಿ ನಗರದ ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಪ್ರವೇಶಿಸುವಲ್ಲಿ ಖಾಸಗಿ ಬಸ್‌ಗಳು ಪಾದಚಾರಿಗಳಿಗೂ ಅಪಾಯ ತರುವ ರೀತಿಯಲ್ಲಿ ಅತಿವೇಗದಿಂದ ಬಸ್‌ನಿಲ್ದಾಣ ಪ್ರವೇಶಿಸುತ್ತಿವೆ ಎಂದು ನಗರವಾಸಿಗಳು ದೂರಿದ್ದಾರೆ. ಸಂಬಂಧಪಟ್ಟವರು ಇಂತಹ ಬಸ್‌ಗಳ ಅತಿವೇಗಕ್ಕೆ ಕಡಿವಾಣ ಹಾಕಬೇಕು ಎಂದೂ ಆಗ್ರಹಿಸಿದ್ದಾರೆ.

ನಗರದಲ್ಲಿ ನಿಲುಗಡೆ ಇಲ್ಲದ ಜಾಗದಲ್ಲಿ ನಿಲ್ಲಿಸಿರುವ ಬಸ್‌ 

ಬಾಗಿಲುಗಳೇ ಇಲ್ಲ

ನಗರ ಹಾಗೂ ಇತರೆಡೆಗಳಲ್ಲಿ ಸಂಚರಿಸುವ ಹೆಚ್ಚಿನ ಖಾಸಗಿ ಬಸ್‌ಗಳಿಗೆ ಬಾಗಿಲುಗಳೇ ಇಲ್ಲ. ಕೆಲವು ಬಸ್‌ಗಳಿಗೆ ಬಾಗಿಲುಗಳು ಇದ್ದರೂ ಅದರ ಬಳಕೆಯೇ ಆಗುತ್ತಿಲ್ಲ. ಇದರಿಂದ ಚಾಲಕರು ಪಕ್ಕನೆ ಬ್ರೇಕ್‌ ಹಾಕಿದಾಗ ಬಸ್‌ನೊಳಗಿನ ಪ್ರಯಾಣಿಕರು ಹೊರಗೆ ಬೀಳುವ ಸಾಧ್ಯತೆಗಳೂ ಇವೆ. ಕೆಲ ತಿಂಗಳ ಹಿಂದೆ ಕಾರ್ಕಳ ವ್ಯಾಪ್ತಿಯಲ್ಲಿ ಖಾಸಗಿ ಬಸ್ಸೊಂದರ ಚಾಲಕ ಬ್ರೇಕ್‌ ಹಾಕಿದ ಪರಿಣಾಮವಾಗಿ ವಿದ್ಯಾರ್ಥಿಯೊಬ್ಬ ಬಸ್‌ನ ಒಳಗಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದ. ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹೆಚ್ಚಾಗಿ ಖಾಸಗಿ ಬಸ್‌ಗಳನ್ನೇ ಆಶ್ರಯಿಸುತ್ತಿದ್ದು ಬಸ್‌ಗಳಿಗೆ ಬಾಗಿಲುಗಳಿಲ್ಲದಿರುವುದು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದಲೂ ಆತಂಕಕಾರಿಯಾಗಿದೆ.

‘ಅತಿವೇಗಕ್ಕೆ ಪರವಾನಗಿ ರದ್ದು ಶಿಕ್ಷೆ’

ಅತಿ ವೇಗ ಮತ್ತು ಬಸ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋದರೆ ಚಾಲಕನ ಚಾಲನಾ ಪರವಾನಗಿ ಮತ್ತು ಬಸ್‌ನ ಆರ್.ಸಿ. ರದ್ದಾಗುವ ಸಾಧ್ಯತೆ ಇದೆ ಎಂಬುದನ್ನು ಖಾಸಗಿ ಬಸ್‌ಗಳ ಮಾಲಕರು ಮತ್ತು ಚಾಲಕರು ಅರಿತುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಹೇಳಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಬಸ್‌ ಮಾಲಕರು ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಸದ್ಯಕ್ಕೆ ನಾವು ಅತಿ ವೇಗ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕೊಂಡೊಯ್ಯುವ ಬಸ್‌ಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯ ವಿವಿಧ ರೂಟ್‌ಗಳಿಗೆ ಕೆಎಸ್‌ಆರ್‌ಟಿಸಿಯ ಹೊಸ ಬಸ್‌ಗಳು ಬರುವ ಸಾಧ್ಯತೆ ಇದ್ದು ಅವುಗಳು ಬಂದ ಮೇಲೆ ಖಾಸಗಿ ಬಸ್‌ಗಳನ್ನು ಕಟ್ಟುನಿಟ್ಟಿನ ತಪಾಸಣೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

‘ಸುರಕ್ಷಿತ ಚಾಲನೆಗೆ ಗಮನ ನೀಡಿ’

ಖಾಸಗಿ ಬಸ್‌ಗಳ ಚಾಲರು ಒತ್ತಡದಿಂದ ಚಾಲನೆ ಮಾಡುವ ಪರಿಸ್ಥಿತಿ ಈಗ ಇಲ್ಲ. ಅವರಿಗೂ ಕುಟುಂಬಗಳಿವೆ. ಆದ್ದರಿಂದ ತಮ್ಮ ಹಾಗೂ ಪ್ರಯಾಣಿಕರ ಜೀವಕ್ಕೆ ಆಪತ್ತು ತರುವ ರೀತಿಯಲ್ಲಿ ಚಾಲನೆ ಮಾಡಬಾರದು ಎಂದು ಕೆನರಾ ಬಸ್‌ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಸ್‌ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದರು. ಹೊಸ ಕಾನೂನು ದಂಡ ಮೊದಲಾದವುಗಳ ಬಗ್ಗೆಯೂ ಚಾಲಕರು ಜಾಗೃತರಾಗಿರಬೇಕು. ಮತ್ತು ಎಚ್ಚರಿಕೆಯಿಂದ ಬಸ್‌ ಚಾಲನೆ ಮಾಡಬೇಕು. ಇಲ್ಲದಿದ್ದರೆ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ಸುರಕ್ಷಿತ ಚಾಲನೆಗೆ ಆದ್ಯತೆ ನೀಡುವ ಕುರಿತು ಚಾಲಕರಿಗೆ ಸಂಘದಿಂದ ಜಾಗೃತಿ ಮೂಡಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

‘ಟೈಮಿಂಗ್‌ ವಿಚಾರಕ್ಕೆ ಜಗಳ’

ಟೈಮಿಂಗ್‌ ವಿಚಾರವಾಗಿ ಬಸ್‌ಗಳ ಸಿಬ್ಬಂದಿ ಪರಸ್ಪರ ಜಗಳವಾಡುವ ಪ್ರಕರಣಗಳು ನಗರದಲ್ಲಿ ಹಲವು ಬಾರಿ. ಖಾಸಗಿ ಬಸ್‌ಗಳ ಟೈಮಿಂಗ್‌ ವಿಚಾರದ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು. ಇದೇ ಕಾರಣಕ್ಕೆ ಅತಿವೇಗದಿಂದ ಬಸ್‌ಗಳನ್ನು ಚಲಾಯಿಸಲಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಿಳಿಸಿದರು. ಖಾಸಗಿ ಬಸ್‌ಗಳ ಅತಿ ವೇಗಕ್ಕೆ ಮತ್ತು ನಗರದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.