
ಉಡುಪಿ: ‘ಸೂಕ್ಷ್ಮವಾಗಿ ದೊಡ್ಡ ಸಂಗತಿಗಳನ್ನೂ ಸಂಕ್ಷಿಪ್ತವಾಗಿ ಕವಿತೆಗಳಲ್ಲಿ ಹೇಳಬಹುದು. ಯಾರನ್ನಾದರೂ ಸೂಕ್ಷವಾಗಿ ಟೀಕಿಸಲೂ ಅದರ ಮೂಲಕ ಸಾಧ್ಯ. ಹಾಗಾಗಿ ಕವಿತೆಗಳೇ ನನ್ನ ಮಾಧ್ಯಮ. ಕವಿತೆಗಳ ಮೂಲಕ ನಾನು ನನ್ನ ಸುತ್ತಲಿನ ಜಗತ್ತಿಗೆ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಸಮಿತಿ ಆಶ್ರಯದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ವಾಂಸ ಬಿ.ಎ.ವಿವೇಕ ರೈ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ನಾ. ದಾಮೋದರ ಶೆಟ್ಟಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯ, ಎಸ್.ವಿ. ಪರಮೇಶ್ವರ ಭಟ್ಟರ ಪುತ್ರ ಎಸ್.ಪಿ. ರಾಮಚಂದ್ರ, ಕೇಂದ್ರದ ಆಡಳಿತಾಧಿಕಾರಿ ಬಿ.ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಅರುಣ್ ಕುಮಾರ್ ಎಸ್.ಆರ್ . ಕಾರ್ಯಕ್ರಮ ನಿರೂಪಿಸಿದರು. ಆರ್. ನರಸಿಂಹ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ.ಆರ್. ರಾಘವೇಂದ್ರ ಆಚಾರ್ಯ ಅವರು ಎಸ್.ವಿ.ಪಿ. ಹಾಗೂ ಸುಬ್ರಾಯ ಚೊಕ್ಕಾಡಿ ಅವರ ಕವನಗಳ ಗಾಯನವನ್ನು ಪ್ರಸ್ತುತಪಡಿಸಿದರು. ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಸುಬ್ರಾಯ ಚೊಕ್ಕಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.