ADVERTISEMENT

ಅದ್ದೂರಿಯ ಉಡುಪಿ ಉಚ್ಚಿಲ ದಸರಾ 22ರಿಂದ

ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವೈಭವ: ದಸರಾ ರೂವಾರಿ ಶಂಕರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:31 IST
Last Updated 18 ಸೆಪ್ಟೆಂಬರ್ 2025, 4:31 IST
ಉಚ್ಚಿಲ ಕ್ಷೇತ್ರದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗುತ್ತಿರುವ ಮಂಟಪ
ಉಚ್ಚಿಲ ಕ್ಷೇತ್ರದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗುತ್ತಿರುವ ಮಂಟಪ   

ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ ಸೆ. 22ರಿಂದ ಅ. 2ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಉಡುಪಿ ಉಚ್ಚಿಲ ದಸರಾ ರೂವಾರಿ, ಉದ್ಯಮಿ ಜಿ. ಶಂಕರ್ ತಿಳಿಸಿದರು.

ಉಚ್ಚಿಲದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಕ್ತರ ಸಹಕಾರದಲ್ಲಿ ಕ್ಷೇತ್ರದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರು, ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನ ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು. ಪಡುಬಿದ್ರಿಯಿಂದ ಕಾಪು ಸಮುದ್ರ ತೀರದವರೆಗೆ ಮಾಡಲಾಗಿರುವ ವಿದ್ಯುದ್ದೀಪಾಲಂಕಾರದ ಉದ್ಘಾಟನೆ 21ರಂದು ಸಂಜೆ 6.30ಕ್ಕೆ ನಡೆಯಲಿದೆ ಎಂದರು.

22ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ದಸರಾಕ್ಕೆ ಚಾಲನೆ ನೀಡುವರು. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜನಪ್ರತಿನಿಧಿಗಳು ಭಾಗವಹಿಸುವರು. 9ಕ್ಕೆ ನವದುರ್ಗೆಯರು, ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ, ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು. 10ಕ್ಕೆ ವಿವಿಧ ಮೇಳ, ವಸ್ತು ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು ಎಂದು ತಿಳಿಸಿದರು.

ADVERTISEMENT

ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರ ಮೀನು, ಹೊಳೆ ಮೀನುಗಳ ಪ್ರದರ್ಶನ, ಮರಳು ಕಲಾಕೃತಿ, ಕುಬ್ಜ ಸಹೋದರರ ಕಲಾಕೃತಿ, ಜನಜಾಗೃತಿ ಕಲಾಕೃತಿ, ವಿಶೇಷ ಶಾಲೆಯ ಮಕ್ಕಳ ಕಲಾಕೃತಿ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆಯಲಿದೆ. ಈ ಭಾರಿ ಸೀರೆ ಮೇಳ ಆಯೋಜಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮ: ಶರನ್ನವರಾತ್ರಿ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ 9ರಿಂದ 12ರವರೆಗೆ ಚಂಡಿಕಾಹೋಮ, ಬೆಳಿಗ್ಗೆ 10ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12ರಿಂದ 3ರವರೆಗೆ ಅನ್ನಸಂತರ್ಪಣೆ, ಸಂಜೆ 5ರಿಂದ 5.45ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, 5.30ರಿಂದ 6.15ರವರೆಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, 6.30ರಿಂದ ಪ್ರಸಾದ ವಿತರಣೆ, ರಾತ್ರಿ 8.30ರಿಂದ ಕಲ್ಪೋಕ್ತ ಪೂಜೆ ನಡೆಯಲಿದೆ. ಅ. 2ರಂದು ವಿಜಯ ದಶಮಿಯಂದು ಸಾಮೂಹಿಕ ಮಹಾಚಂಡಿಕಾ ಯಾಗ, ಮಹಾ ಪೂರ್ಣಾಹುತಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: 22ರಂದು ಸಂಜೆ7ರಿಂದ ಹಿನ್ನಲೆ ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದಿಂದ ‘ಗುರುಕಿರಣ್ ನೈಟ್ಸ್, ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ 9 ಯಕ್ಷಗಾನ ಭಾಗವತರಿಂದ ‘ನಾದ ವೈಕುಂಠ’, ಸಾಮೂಹಿಕ ದಾಂಡಿಯಾ ನೃತ್ಯ, ಕ್ಷೇತ್ರದ ರಥಬೀದಿಯ ಸುತ್ತ ಸಾಮೂಹಿಕ ಕುಣಿತ ಭಜನೆ, ಭರತನಾಟ್ಯ, ಜಾನಪದ ನೃತ್ಯ ಕಾರ್ಯಕ್ರಮ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶೋಭಾ ಯಾತ್ರೆ: ಅ. 2ರಂದು ಕ್ಷೇತ್ರದಿಂದ ಸಂಜೆ 4.30ಕ್ಕೆ ಶೋಭಾಯಾತ್ರೆ ಹೊರಟು ಎರ್ಮಾಳ್ ತನಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಅಲ್ಲಿಂದ ತಿರುಗಿ ಹೆದ್ದಾರಿ ಮೂಲಕ ಉಚ್ಚಿಲ– ಮೂಳೂರು, ಕೊಪ್ಪಲಂಗಡಿಯವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ವಿಗ್ರಹದ ವಿಸರ್ಜನೆ ನಡೆಯಲಿದೆ. ಈ ಸಂದರ್ಭದಲ್ಲಿ  ಕಾಶಿಯ ಅರ್ಚಕರಿಂದ ಗಂಗಾರತಿ, ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ, ನವದುರ್ಗೆಯರಿಗೆ, ಶಾರದಾ ಮಾತೆ, ಅಂಬಾರಿ ಹೊತ್ತ ಆನೆಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ವ್ಯವಸ್ಥೆ ಮಾಡಲಾಗಿದೆ.  

ದಸರಾ ಪ್ರಯುಕ್ತ ಸ್ಪರ್ಧೆಗಳು: ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮಹಿಳೆಯರ ಹುಲಿಕುಣಿತ ಸ್ಪರ್ಧೆ, ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ, ಅವಿಭಜಿತ ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ, ರಾಜ್ಯಮಟ್ಟದ ಆಹ್ವಾನಿತ ತಂಡಗಳ ‘ನೃತ್ಯವೈಭವ’ ಸ್ಪರ್ಧೆ ನಡೆಯಲಿದೆ.

ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಶರಣ್ ಮಟ್ಟು, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಪ್ರಮುಖರಾದ ಸತೀಶ್ ಕುಂದರ್, ಉಷಾ ರಾಣಿ ಬೋಳೂರು, ಸಂಧ್ಯಾ ಡಿ. ಸುನೀಲ್, ರತ್ನಾಕರ ಸಾಲ್ಯಾನ್, ಸುಜಿತ್ ಸಾಲ್ಯಾನ್, ಸತೀಶ್ ಅಮೀನ್ ಬಾರ್ಕೂರು, ಶಿವಕುಮಾರ್ ಮೆಂಡನ್, ಮನೋಜ್ ಕಾಂಚನ್, ಸುಗುಣ ಕರ್ಕೇರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.