ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಜರಗಲಿರುವ ಉಡುಪಿ - ಉಚ್ಚಿಲ ದಸರಾ 2025 ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸೋಮವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಡುಪಿ - ಉಚ್ಚಿಲ ದಸರಾ ಆಚರಣೆಯು ಮೈಸೂರು ದಸರಾಕ್ಕಿಂತ ವಿಭಿನ್ನವಾಗಿದೆ. ಇಲ್ಲಿನ ಮಹಾಲಕ್ಷ್ಮಿ ದೇವಳಕ್ಕೆ ಭೇಟಿ ನೀಡಿರುವುದು ಸಂತಸ ತಂದಿದೆ. ಉಡುಪಿ ಉಚ್ಚಿಲ ದಸರಾ ಜಿಲ್ಲೆಯಲ್ಲಿ ಇನ್ನಷ್ಟು ಬೆಳವಣಿಗೆ ಕಾಣುವಂತಾಗಲಿ ಎಂದು ಶುಭ ಹಾರೈಸಿದರು.
ಜಿ.ಶಂಕರ್ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಇಲ್ಲಿ ದಸರಾ ನಡೆಯುತ್ತಿದೆ. ಅವರಿಗೆ ತಾಯಿಯ ಕೃಪೆಯಿಂದ ಇಷ್ಟು ದೊಡ್ಡ ಮಟ್ಟದಲ್ಲಿ ದಸರಾ ಆಚರಣೆ ಮಾಡಲು ಸಾಧ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಉಚ್ಚಿಲ ದಸರಾ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಇಲ್ಲಿನ ವಿಜೃಂಭಣೆಯನ್ನು ನೋಡಿ ಅಚ್ಚರಿಗೊಂಡಿದ್ದೇನೆ. ಒಂಬತ್ತು ದಿನಗಳ ಕಾಲ ದಸರಾ ಮಹೋತ್ಸವವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.
ಉಚ್ಚಿಲ ದಸರಾ ರೂವಾರಿ ಜಿ.ಶಂಕರ್ ಮಾತನಾಡಿ, ಈ ಭಾರಿ ನಾಲ್ಕನೇ ವರ್ಷದ ಉಡುಪಿ ಉಚ್ಚಿಲ ದಸರಾ ಆಚರಿಸುತಿದ್ದೇವೆ. ಮುಂದಿನ ದಿನಗಳಲ್ಲಿ ದಸರಾವನ್ನು ಮೈಸೂರು ದಸರಾ ಮಾದರಿಯಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಹೇಳಿದರು.
ನವದುರ್ಗೆಯರ ಹಾಗೂ ಶಾರದಾ ಮಾತೆ ಪ್ರತಿಷ್ಠಾಪನೆಯಾಗಿದೆ. ಪ್ರತೀ ವರ್ಷ ದಸರಾಕ್ಕೆ ₹4.5 ಕೋಟಿ ಖರ್ಚಾಗುತ್ತಿದೆ. ಸರ್ಕಾರ, ಜನಪ್ರತಿನಿಧಿಗಳು, ಇಲಾಖೆಗಳ ಅಧಿಕಾರಿಗಳು ದಸರಾಕ್ಕೆ ಸಹಕರಿಸುತ್ತಿದ್ದಾರೆ. ಪ್ರತಿ ನಿತ್ಯ ಅನ್ನಸಂತರ್ಪಣೆ, ಚಂಡಿಕಾ ಯಾಗ ನಡೆಯಲಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೈವಸ್ಥಾನಗಳು, ದೇವಸ್ಥಾನಗಳು ನಾಡಿನ ಅಸ್ಮಿತೆ. ಭಾರತ ಸಂಸ್ಕೃತಿಯ ನೆಲ, ದುಷ್ಟತ್ವ ಹೋಗಬೇಕು. ಶಿಷ್ಟತ್ವ ಪರಿಪಾಲನೆಯಾಗಬೇಕು. ಸಾಮರಸ್ಯದ ಕಾಪು, ಸಮೃದ್ಧ ಕಾಪು ನನ್ನ ಕನಸು. ಈ ಮೂಲಕ ಅದು ಈಡೇರಲಿ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಎಲ್ಲಾ ಕಡೆಗಳಲ್ಲೂ ದೇವಿಯ ಆರಾಧನೆ ಜತೆಯಲ್ಲಿ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯುವ ಈ ವೇಳೆ ಉಡುಪಿ ಜಿಲ್ಲೆಯಲ್ಲಿ ದಸರಾ ಹಬ್ಬದ ಕೊರತೆ ನೀಗಿದೆ. ವರ್ಷದಿಂದ ವರ್ಷಕ್ಕೆ ದಸರಾ ಬಹಳ ವಿಜೃಂಭಣೆಯಿಂದ ದಸರಾ ನಡೆಯುತ್ತಿದೆ ಎಂದು ಹೇಳಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮ, ಉದ್ಯಮಿಗಳಾದ ಕೃಷ್ಣಮೂರ್ತಿ, ಅಂಜಲಿ ವಿಜಯ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಉಪಸ್ಥಿತರಿದ್ದರು.
ಮಹಿಳಾ ಉದ್ಯಮಿ ಅಂಜಲಿ ವಿಜಯ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳು, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ಸಾಧು ಸಾಲ್ಯಾನ್, ಶ್ರೀಪತಿ ಭಟ್, ಉಷಾ ರಾಣಿ ಮಂಗಳೂರು, ಮನೋಜ್ ಕಾಂಚನ್, ಸುಜಿತ್ ಸಾಲ್ಯಾನ್, ಸತೀಶ್ ಕಾಂಚನ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ ಮತ್ತು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಷ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ .ಕೊಟ್ಯಾನ್ ಬೆಳ್ಳಂಪಳ್ಳಿ ಸ್ವಾಗತಿಸಿದರು. ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.