ADVERTISEMENT

ಯುನಿಟ್ ರಕ್ತ ಮೂರು ಜೀವಗಳಿಗೆ ಸಹಕಾರಿ

ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡುವಂತೆ ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 13:58 IST
Last Updated 9 ಅಕ್ಟೋಬರ್ 2019, 13:58 IST
ಹೆಚ್ಚು ಬಾರಿ ರಕ್ತದಾನ ಮಾಡಿರುವ ಸ್ವಪ್ನಾ ಸುರೇಶ್, ವೇಣುಗೋಪಾಲ, ರೇಣು ಜಯರಾಂ, ಗುರುಮೂರ್ತಿ, ಗುರುಪ್ರಸಾದ್ ಅವರನ್ನು  ಗೌರವಿಸಲಾಯಿತು.
ಹೆಚ್ಚು ಬಾರಿ ರಕ್ತದಾನ ಮಾಡಿರುವ ಸ್ವಪ್ನಾ ಸುರೇಶ್, ವೇಣುಗೋಪಾಲ, ರೇಣು ಜಯರಾಂ, ಗುರುಮೂರ್ತಿ, ಗುರುಪ್ರಸಾದ್ ಅವರನ್ನು  ಗೌರವಿಸಲಾಯಿತು.   

ಉಡುಪಿ: ರಕ್ತದಾನಕ್ಕೆ ಸಮನಾದ ದಾನ ಯಾವುದೂ ಇಲ್ಲ. ಒಂದು ಯುನಿಟ್ ರಕ್ತ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು. ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಲಹೆ ನೀಡಿದರು.

ಬುಧವಾರ ಚಿಟ್ಪಾಡಿಯ ಸೇಂಟ್ ಮೇರಿಸ್‌ ಅನುದಾನಿತ ಐಟಿಐ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ‘ಜೀವಿತಾವಧಿಯಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ’ ಎಂಬ ಘೋಷ ವಾಕ್ಯದಡಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಕರು ಮೂರು ತಿಂಗಳಿಗೊಮ್ಮೆ ಹಾಗೂ ಯುವತಿಯರು ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಜೀವಿತಾವಧಿಯಲ್ಲಿ 240 ಬಾರಿ ರಕ್ತದಾನ ಮಾಡಬಹುದಾಗಿದ್ದು, ಕನಿಷ್ಠ 720 ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.

ADVERTISEMENT

ಯುವಕರು ದೇಶದ ಆಧಾರ ಸ್ತಂಭ. ಭಾರತೀಯರು ಪ್ರಪಂಚದ ಎಲ್ಲೆಡೆ ಎಲ್ಲಾ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸಿದ್ದಾರೆ. ಆದರೆ, ಐಟಿಐಗಳಲ್ಲಿ ತರಬೇತಿ ಪಡೆದವರು ಅಚಲವಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಉದ್ಯೋಗ ಪಡೆದು ಸ್ವಾವಲಂಬಿಗಳಾಗಬೇಕು. ಇತರರಿಗೂ ಉದ್ಯೋಗ ನೀಡಬೇಕು. ಈ ನಿಟ್ಟಿನಲ್ಲಿ ಐಟಿಐ ಕೇಂದ್ರಗಳು ವಿದ್ಯಾರ್ಥಿಗಳನ್ನು ತರಬೇತುಗೊಳಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ್ ಮಾತನಾಡಿ, ರಕ್ತದಾನದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಎಲ್ಲ ಜಿಲ್ಲೆಗಳಿಗೆ ಮಾದರಿಯಾಗಿದೆ. ಗ್ರಾಮ ಮಟ್ಟದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿ ಹಾಗೂ ಯುವ ಜನತೆಯಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್ ಮಾತನಾಡಿ, ದೇಶ ಎಷ್ಟೇ ಮುಂದುವರಿದಿದ್ದರೂ ರಕ್ತಕ್ಕೆ ಪರ್ಯಾಯ ವಸ್ತುವನ್ನು ಆವಿಷ್ಕರಿಸಲಾಗಿಲ್ಲ. ಅಪಘಾತ ಹಾಗೂ ಇತರ ಅನಾರೋಗ್ಯ ಸಂದರ್ಭಗಳು ಎದುರಾದಾಗ ಮತ್ತೊಬ್ಬ ವ್ಯಕ್ತಿಯಿಂದ ಪಡೆದ ರಕ್ತದಿಂದ ಮಾತ್ರ ಜೀವವನ್ನು ಉಳಿಸಬಹುದು ಎಂದರು.

ಫಲಾಪೇಕ್ಷೆ ಬಯಸದೆ ಮಾಡುವ ದಾನ ರಕ್ತದಾನವಾಗಿದ್ದು, ಯುವಕರು ಇಂತಹ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಜೀವ ಉಳಿಸುವಂತಹ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.

ಸೇಂಟ್‌ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕ ವಲೇರಿಯನ್ ಮೆಂಡೋನ್ಸಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಪ್ರಯೋಗಾಲಯಗಳಲ್ಲಿ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ರಕ್ತಕ್ಕೆ ಜಾತಿ, ಧರ್ಮಗಳ ಭೇಧವಿಲ್ಲ. ಒಬ್ಬ ದಾನಿ ನೀಡುವ ರಕ್ತ ಇನ್ನೊಂದು ಜೀವಕ್ಕೆ ಆಧಾರವಾಗುತ್ತದೆ ಎಂದರು.

ಹೆಚ್ಚು ಬಾರಿ ರಕ್ತದಾನ ಮಾಡಿರುವ ಸ್ವಪ್ನಾ ಸುರೇಶ್, ವೇಣುಗೋಪಾಲ, ರೇಣು ಜಯರಾಂ, ಗುರುಮೂರ್ತಿ, ಗುರುಪ್ರಸಾದ್ ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೇಂಟ್‌ ಮೇರಿಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗಿಲ್ಬರ್ಟ್ ಬ್ರಗಾಂಝಾ ಸ್ವಾಗತಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಮಹಾಬಲೇಶ್ವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.