
ಬೀದಿನಾಯಿಗಳು
(ಪ್ರಾತಿನಿಧಿಕ ಚಿತ್ರ)
ಬ್ರಹ್ಮಾವರ: ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಡುಪಿ ಜಿಲ್ಲೆಯ ಬೀದಿ ನಾಯಿಗಳ ಆಶ್ರಯತಾಣ ನಿರ್ಮಿಸುವುದರ ವಿರುದ್ಧದ ಹೋರಾಟಕ್ಕೆ ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮದ ಗ್ರಾಮಸ್ಥರು ಸಜ್ಜಾಗಿದ್ದಾರೆ.
ಉಪ್ಪೂರು ಗ್ರಾಮದ ಜನವಸತಿ ಪ್ರದೇಶದ ಸುಮಾರು 9 ಎಕರೆ 90 ಸೆಂಟ್ಸ್ ಪ್ರದೇಶದಲ್ಲಿ ಜಿಲ್ಲಾಡಳಿತ ನಿರ್ಮಿಸಲು ಹೊರಟಿರುವ ಈ ಆಶ್ರಯತಾಣದಿಂದ ಉಪ್ಪೂರು ಮತ್ತು ಆರೂರು ಗ್ರಾಮದ ಜನತೆ ಹೆಚ್ಚಿನ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಸರ್ಕಾರಿ ಜಾಗದಲ್ಲಿ ಉದ್ಯೋಗ ಸೃಷ್ಟಿಸಬಲ್ಲ ಅನೇಕ ಯೋಜನೆಗಳನ್ನು ತಂದಲ್ಲಿ ಪ್ರಯೋಜನವಾಗುತ್ತಿತ್ತು ಎನ್ನುವುದು ಇಲ್ಲಿಯ ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಬೀದಿ ನಾಯಿಗಳ ಆಶ್ರಯತಾಣ ವಿರೋಧಿಸಿ ಇದೇ 6ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಗೂ ಗ್ರಾಮಸ್ಥರು ಎಲ್ಲಾ ತಯಾರಿ ನಡೆಸಿದ್ದಾರೆ.
ಆಶ್ರಯತಾಣವು ಉಪ್ಪೂರು ಗ್ರಾಮಕ್ಕೆ ಬಂದರೆ ಗ್ರಾಮದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಲಿದೆ. ಪ್ರಸ್ತುತ ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮ ಶೀಂಬ್ರ ಸೇತುವೆಯಿಂದಾಗಿ ಮಣಿಪಾಲಕ್ಕೆ ಹತ್ತಿರವಾಗಿ ಈ ಮೂರೂ ಗ್ರಾಮಗಳು ಅಭಿವೃದ್ಧಿಗೊಳ್ಳುತ್ತಿದೆ. ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ತಾಲ್ಲೂಕು ಕ್ರೀಡಾಂಗಣ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಸತಿ ರಹಿತರಿಗೆ ನಿವೇಶನ ವ್ಯವಸ್ಥೆ ಸೇರಿದಂತೆ ಯಾವುದೇ ಜನೋಪಯೋಗಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಇರುವುದರಿಂದ ಈ ಬಗ್ಗೆ ಅಧಿಕಾರಿಗಳು ಗಮನ ನೀಡಲಿ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ ಪೂಜಾರಿ ಕೀಳಂಜೆ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಶೆಟ್ಟಿ ತಿಳಿಸಿದ್ದಾರೆ.
‘ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ನಾಯಿಗಳ ಆಶ್ರಯತಾಣಕ್ಕೆ ನಿಗದಿ ಪಡಿಸಿದ ಜಾಗದಲ್ಲಿಯೇ ಪಂಚಾಯಿತಿ ನಿವೇಶನಕ್ಕೆ ಜಾಗವನ್ನು ಕಾಯ್ದಿರಿಸಲಾಗಿತ್ತು. ಆದರೆ ಈಗ ಜಿಲ್ಲಾಡಳಿತ ನಾಯಿಗಳ ಆಶ್ರಯತಾಣವನ್ನಾಗಿ ಮಾಡಲು ಹೊರಟಿದೆ. ಮುಂದಾಗುವ ಸಮಸ್ಯೆಗಳಿಗೆ ಹೊಣೆ ಯಾರು ? ಇದಲ್ಲದೇ ಪಂಚಾಯಿತಿಗೆ ಕೂಡ ಈ ಪ್ರದೇಶದ ಸರ್ವೆ ಕಾರ್ಯ ನಡೆಸಿದ ಬಗ್ಗೆ ಮಾಹಿತಿ ಇಲ್ಲ. ಅವರ ಗಮನಕ್ಕೂ ತಾರದೇ ಇಲ್ಲಿ ಹೇಗೆ ಆಶ್ರಯತಾಣ ನಿರ್ಮಿಸಲು ಜಿಲ್ಲಾಡಳಿತ ಹೊರಟಿದೆ’ ಎಂದು ಸ್ಥಳೀಯ ನಿವಾಸಿ ಅಶ್ವಿನ್ ಪಿ. ರೋಚ್ ಪ್ರಶ್ನಿಸಿದ್ದಾರೆ.
ಉಪ್ಪೂರಿನಲ್ಲಿ ಬೀದಿನಾಯಿ ಆಶ್ರಯತಾಣ ನಿರ್ಮಾಣದಿಂದ ಗ್ರಾಮಕ್ಕೆ, ಗ್ರಾಮಸ್ಥರಿಗೆ ಏನೂ ಪ್ರಯೋಜನವಿಲ್ಲ. ಬದಲಾಗಿ ಜನವಸತಿ ಇರುವ ಪ್ರದೇಶವಾದ ಕಾರಣ ಪರಿಸರದ ಮೇಲಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ ಜನರ ನೆಮ್ಮದಿ ಕೆಡಿಸುವ ಜತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ನೀರಿನ ಸೆಲೆ ಇರುವ ಈ ಸ್ಥಳದಿಂದ ಮಡಿಸಾಲು ಹೊಳೆಗೆ ನೀರು ಸೇರುವುದರಿಂದ ಮುಂದೆ, ಬಾವಿಗಳ ಅಂತರ್ಜಲದ ಮೇಲೂ ಪರಿಣಾಮ ಉಂಟಾಗಿ ಅದೂ ಅನೇಕ ಆರೋಗ್ಯ ಸಮಸ್ಯೆ ಸೃಷ್ಟಿಸುವುದು ಖಚಿತ. ಈ ಜಾಗ ಜನೋಪಯೋಗಿ ಜನಪರ, ಪರಿಸರಸ್ನೇಹಿ ಯೋಜನೆಗಳಿಗೆ ಬಳಕೆಯಾಗಲಿ ಎಂದೂ ಆಗ್ರಹಿಸಿದ್ದಾರೆ.
‘ಜನರ ವಿರೋಧವನ್ನು ಲೆಕ್ಕಿಸದೆ ಜಿಲ್ಲಾಡಳಿತ ಆಶ್ರಯತಾಣ ನಿರ್ಮಾಣಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು’ ಎಂದು ಉಪ್ಪೂರು ಸಿ.ಎ. ಬ್ಯಾಂಕ್‌ನ ನಿರ್ದೇಶಕ ಹಾಗೂ ಸ್ಥಳೀಯ ನಿವಾಸಿ ರಮೇಶ ಕರ್ಕೆರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿನಾಯಿಗಳ ಆಶ್ರಯತಾಣ ನಿರ್ಮಿಸುವ ನಿರ್ಧಾರದ ವಿರುದ್ಧ ಪಕ್ಷಾತೀತವಾಗಿ ಹೋರಾಟಕ್ಕೆ ಗ್ರಾಮಸ್ಥರು ಸಿದ್ಧರಾಗಿದ್ದಾರೆ. ಪ್ರತಿಭಟನೆಗಾಗಿ ಹಲವು ಸಮಿತಿಯನ್ನು ಮಾಡಿ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ.
ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ತರುವಂತಹ ಯೋಜನೆ ನಮಗೆ ಬೇಡ. ಯುವಜನರಿಗೆ ಉದ್ಯೋಗ ನೀಡುವ ಯೋಜನೆಗಳು ಬರಲಿರಮೇಶ ಕರ್ಕೆರ, ಸ್ಥಳೀಯ ನಿವಾಸಿ
ನಂದಿನಿ ಡೇರಿ, ಶಾಲೆ, ಜನವಸತಿ ಪ್ರದೇಶದಲ್ಲಿ ನಾಯಿಗಳನ್ನು ತಂದು ಬಿಡುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಕಾಣಿಸಕೊಳ್ಳಬಹುದುಅಶ್ವಿನ್ ಕೆ. ರೋಚ್, ಸ್ಥಳೀಯ ನಿವಾಸಿ
ಮೂರು ಗ್ರಾಮದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ತಂದಲ್ಲಿ ಎಲ್ಲರಿಗೂ ಪ್ರಯೋಜನವಾಗಲಿದೆ. ಆದರೆ ಸಮಸ್ಯೆಗಳನ್ನು ತರುವ ಬೀದಿನಾಯಿಗಳ ಆಶ್ರಯತಾಣ ಇಲ್ಲಿ ಬೇಡವೇ ಬೇಡಉಮೇಶ ಶೆಟ್ಟಿ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.