ADVERTISEMENT

ವಾಲ್ಮೀಕಿ ಜೀವನ ಪ್ರೇರಣಾದಾಯಕ: ಶಾಸಕ ಯಶ್‌ಪಾಲ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 8:04 IST
Last Updated 8 ಅಕ್ಟೋಬರ್ 2025, 8:04 IST
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು   

ಉಡುಪಿ: ಮಹರ್ಷಿ ವಾಲ್ಮೀಕಿ ವಿಶ್ವ ಕಂಡ ಶ್ರೇಷ್ಠ ಕವಿ. ತಮ್ಮ ಜ್ಞಾನದಿಂದ ಅತ್ಯಂತ ಶ್ರೇಷ್ಠ ಕಾವ್ಯ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜೀವನ ಎಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಗವಾನ್ ಶ್ರೀರಾಮ ಧರ್ಮದ ಪ್ರತಿಮೂರ್ತಿ. ರಾಮಾಯಣವು ರಾಮನ ಆದರ್ಶಗಳನ್ನು ಸಾರುವ ಗ್ರಂಥ. ಇಡೀ ಜಗತ್ತಿನ ಮನಸನ್ನು ಗೆದ್ದ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳ ಆಚಾರ– ವಿಚಾರಗಳನ್ನು ಇಂದಿನ ಯುವಜನರಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಭಾರತೀಯ ಸಮಾಜದಲ್ಲಿ ಕಂಡುಬರುವ ಸರ್ವಶ್ರೇಷ್ಠ ಗ್ರಂಥಗಳೆಂದರೆ ಅದು ರಾಮಾಯಣ ಮತ್ತು ಮಹಾಭಾರತ. ಈ ಮಹಾಕಾವ್ಯಗಳು ಜಗತ್ತಿನ ಎಲ್ಲಾ ಕಾವ್ಯಗಳಿಗೆ ಪ್ರೇರಣಾದಾಯಕವಾಗಿವೆ ಎಂದು ಹೇಳಿದರು.

ರಾಮಾಯಣ ಸಾರ್ವಕಾಲಿಕವಾಗಿದ್ದು ಇಂದಿಗೂ ಪ್ರಸ್ತುತತೆ ಉಳಿಸಿಕೊಂಡಿದೆ. ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳ ಜೀವನದಿಂದಲೂ ನಾವೆಲ್ಲರೂ ಪ್ರೇರಣೆ ಪಡೆದು ಸಮಾಜವನ್ನು ಮುನ್ನಡೆಸಬಹುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಅಂದು ವಾಲ್ಮೀಕಿ ಮಹರ್ಷಿ ವಿಶ್ವದ ಮೇರು ಕೃತಿಯಾದ ರಾಮಾಯಣವನ್ನು ರಚಿಸಿದರೆ, ಇಂದಿನ ಕಾಲದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವ ಮೂಲಕ ಕೊಡುಗೆ ನೀಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಕ್ಕಿಂತಲೂ ಅವರ ವ್ಯಕ್ತಿತ್ವ ಪರಿವರ್ತಿಸಿ, ಒಳ್ಳೆಯ ಬದುಕನ್ನು ನೀಡುವುದು ಸಂವಿಧಾನದ ಆಶಯವಾಗಿದೆ ಎಂದು ಹೇಳಿದರು.

ಕಾರ್ಕಳ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್ ವಿಶೇಷ ಉಪನ್ಯಾಸ ನೀಡಿದರು. ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಸ್ವಾಗತಿಸಿದರು.

ವಾಲ್ಮೀಕಿ ಮಹರ್ಷಿ ಹೆಸರಿನಲ್ಲಿ ಜಾರಿಯಾಗಿರುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಡೆದು ಸಮಾಜದ ಉನ್ನತಿಯಾದಾಗ ವಾಲ್ಮೀಕಿ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ
ಯಶ್‌ಪಾಲ್‌ ಸುವರ್ಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.