ADVERTISEMENT

ಕುಂದಾಪುರ/ಉಡುಪಿ: ನಾಲ್ಕು ದಶಕಗಳು ಕಳೆದರೂ ಮುಗಿಯದ 'ವಾರಾಹಿ'

ಕೃಷಿಕರ ಭರವಸೆಯನ್ನು ಇನ್ನೂ ಜೀವಂತವಾಗಿರಿಸಿದ ರಾಜ್ಯದ ಹಳೆಯ ಬೃಹತ್ ನೀರಾವರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 19:30 IST
Last Updated 5 ಜನವರಿ 2022, 19:30 IST
ಕುಂದಾಪುರ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ವಾರಾಹಿ ಬೃಹತ್ ನೀರಾವರಿ ಯೋಜನೆಯ ಕಾಲುವೆಯಲ್ಲಿ ಹರಿಯುತ್ತಿರುವ ಜಲರಾಶಿ.
ಕುಂದಾಪುರ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ವಾರಾಹಿ ಬೃಹತ್ ನೀರಾವರಿ ಯೋಜನೆಯ ಕಾಲುವೆಯಲ್ಲಿ ಹರಿಯುತ್ತಿರುವ ಜಲರಾಶಿ.   

ಕುಂದಾಪುರ/ಉಡುಪಿ: ರಾಜ್ಯದ ಹಳೆಯ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ವಾರಾಹಿ ಯೋಜನೆಗೆ ರಾಜ್ಯ ಸರ್ಕಾರದ ಆಡಳಿತಾತ್ಮಕ ಮಂಜೂರಾತಿ ದೊರೆತು ನಾಲ್ಕು ದಶಕಗಳು ಕಳೆದಿವೆ. ಯೋಜನೆಗೆ ಶಂಕುಸ್ಥಾಪನೆ ನೇರವೇರಿದ ಬಳಿಕ ರಾಜ್ಯವು 16 ಮುಖ್ಯಮಂತ್ರಿಗಳನ್ನು ಕಂಡಿದೆ. ಅಷ್ಟೆ ಸಂಖ್ಯೆಯ ನೀರಾವರಿ ಮಂತ್ರಿಗಳು ಬಂದು ಹೋಗಿದ್ದಾರೆ. ಆದರೆ, ವರಾಹಿ ಯೋಜನೆ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ಅವಿಭಜಿತ ಉಡುಪಿ ಹಾಗೂ ಕುಂದಾಪುರ ತಾಲ್ಲೂಕುಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು 1979ರಲ್ಲಿ ಅಂದಿನ ಸರ್ಕಾರ ವಾರಾಹಿ ಬೃಹತ್ ನೀರಾವರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿತು. ಅಂದಿನ ಮುಖ್ಯಮಂತ್ರಿ ಗುಂಡೂರಾವ್‌ ಹಾಗೂ ನೀರಾವರಿ ಸಚಿವ ಮಲ್ಲಾರಿ ಗೌಡ ಪಾಟೀಲ್‌ ಡಿ.30, 1980ರಲ್ಲಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದರು.

ಅದಾದ ಬಳಿಯ ವಾರಾಹಿ ಕವಲುಗಳನ್ನು ಒಡೆಯುತ್ತಲೇ ಸಾಗಿದ್ದು, ಮುಕ್ತಾಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಜಿಲ್ಲೆಯ ಏಕೈಕ ಬೃಹತ್ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ 'ವಾರಾಹಿ'ಗೆ ಇದೀಗ 43 ವರ್ಷಗಳು ತುಂಬುತ್ತಿವೆ. ಆದರೂ, ಯೋಜನೆಯ ಮೂಲ ಉದ್ದೇಶ ಪೂರ್ಣವಾಗಿ ಸಾಕಾರಗೊಂಡಿಲ್ಲ.

ADVERTISEMENT

ನೀರಿನಂತೆ ಹರಿದ ಹಣ:

ಯೋಜನೆ ಆರಂಭದಲ್ಲಿ ಉಡುಪಿ ಜಿಲ್ಲೆಯ ಅಂದಾಜು 15,702 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸಬೇಕು, ಜನರಿಗೆ ಕುಡಿಯುವ ನೀರು ಕೊಡಬೇಕು ಹಾಗೂ ಇತರ ನೀರಿನ ಅಗತ್ಯತೆಗಳನ್ನು ಪೂರೈಸಬೇಕು ಎಂಬ ದೂರಗಾಮಿ ಉದ್ದೇಶದಿಂದ ವರಾಹಿ ನೀರಾವರಿ ಯೋಜನೆ ಆರಂಭವಾಯಿತು.

ಕೇವಲ ₹ 9.43 ಕೋಟಿ ಅಂದಾಜು ವೆಚ್ಚದಲ್ಲಿ ಆರಂಭವಾದ ಯೋಜನೆ ಪ್ರಸ್ತುತ ನೂರಾರು ಪಟ್ಟು ಹೆಚ್ಚಾಗಿದೆ. ಗೊಂದಲ, ನಿಧಾನಗತಿಯ ಕಾಮಗಾರಿ, ಯೋಜನೆಯಲ್ಲಿ ನಿರಂತರ ಮಾರ್ಪಾಡುಗಳಾದ ಕಾರಣ 1979 ರಿಂದ 2004ರವರೆಗೆ 25 ವರ್ಷಗಳ ಅವಧಿಯಲ್ಲಿ ವಾರಾಹಿ ಯೋಜನೆಗೆ ಬಳಕೆಯಾಗಿದ್ದು ಕೇವಲ ₹ 37 ಕೋಟಿ ಮಾತ್ರ.

ಯೋಜನೆ ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ ಎನ್ನುವ ಸಾರ್ವತ್ರಿಕ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಹಾಗೂ ಕಾಮಗಾರಿಗೆ ಆರ್ಥಿಕ ಅಡ್ಡಿಗಳು ಎದುರಾಗಬಾರದು ಎಂಬ ಉದ್ದೇಶದಿಂದ 2003–04ರಲ್ಲಿ ವಾರಾಹಿ ಯೋಜನೆಯ ನಿರ್ವಹಣೆ ಹೊಣೆಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವರ್ಗಾಯಿಸಲಾಯಿತು.

ಸ್ಥಳೀಯ ರೈತರ, ಜನಪ್ರತಿನಿಧಿಗಳ, ಮಾಧ್ಯಮಗಳ ಒಕ್ಕೂರಲ ಆಗ್ರಹಕ್ಕೆ ಮಣಿದು 2005ರಲ್ಲಿ ಪುನರ್ ಹುಟ್ಟು ಪಡೆದ ವಾರಾಹಿ ಯೋಜನೆಗೆ 2005 ರಿಂದ 2011ರವರೆಗೆ ₹ 375 ಕೋಟಿ ಖರ್ಚಾಗಿದೆ. 2019 ರವರೆಗೆ ಯೋಜನೆಗೆ ₹ 650 ಕೋಟಿ ವೆಚ್ಚ ಮಾಡಲಾಗಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಯೋಜನೆಯ ವ್ಯಾಪ್ತಿ:

ಪ್ರಾರಂಭದ ದಿನಗಳಲ್ಲಿ ವಾರಾಹಿ ಯೋಜನೆಯ ವ್ಯಾಪ್ತಿ ಕುಂದಾಪುರ ಹಾಗೂ ಉಡುಪಿ ತಾಲ್ಲೂಕುಗಳಿಗೆ ಮಾತ್ರ ಸೀಮಿತವಾಗಿತ್ತು. ಕುಂದಾಪುರ ಹಾಗೂ ಉಡುಪಿ ತಾಲ್ಲೂಕಿನ 68 ಗ್ರಾಮಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿತ್ತು. ಬಳಿಕ ಉಡುಪಿ ಕುಂದಾಪುರದ ಜತೆಗೆ ಬೈಂದೂರು, ಬ್ರಹ್ಮಾವರ, ಕಾಪು ತಾಲ್ಲೂಕುಗಳಿಗೂ ವಿಸ್ತರಣೆಯಾಗಿದೆ. ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹಾಗೂ ವ್ಯಾಪ್ತಿಯೂ ಹೆಚ್ಚಾಗಿದೆ. ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಬೇರೆ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ.

ಕುಂದಾಪುರ ತಾಲ್ಲೂಕಿನ ಹಂಗಳೂರು, ಕೋಟೇಶ್ವರ, ಬೀಜಾಡಿ, ಗೋಪಾಡಿ, ಉಳ್ತೂರು, ಕುಂಭಾಸಿ, ತೆಕ್ಕಟ್ಟೆ, ಆನಗಳ್ಳಿ, ಕೋಣಿ, ವಕ್ವಾಡಿ, ಬಸ್ರೂರು, ಕಂದಾವರ, ಕಾಳಾವರ, ಬೇಳೂರು, ಅಸೋಡು, ಬಳ್ಕೂರು, ಹಾರ್ದಳ್ಳಿ-ಮಂಡಳ್ಳಿ, ಯಡಾಡಿ-ಮತ್ಯಾಡಿ, ಹಾಲಾಡಿ-76, ಹಾಲಾಡಿ-28, ಮೊಳಹಳ್ಳಿ, ಜಪ್ತಿ, ಕೆದೂರು, ಕೊರ್ಗಿ, ಹೆಸ್ಕತ್ತೂರು, ಹೊಂಬಾಡಿ-ಮಂಡಾಡಿ, ಸಿದ್ಧಾಪುರ, ಶಂಕರನಾರಾಯಣ, ಅಂಪಾರು, ಹಳ್ನಾಡು, ಕಾವ್ರಾಡಿ, ಉಳ್ಳೂರು-74, ಕುಳ್ಳಂಜೆ ಹಾಗೂ ಉಡುಪಿ ತಾಲ್ಲೂಕಿನ ಆವರ್ಸೆ, ವಂಡಾರು, ಶಿರಿಯಾರ, ಅಚ್ಲಾಡಿ, ಹೆಗ್ಗುಂಜೆ, ಹಿಲಿಯಾಣ, ಕಕ್ಕುಂಜೆ, ಶಿರೂರು-33, ಕಾಡೂರು, ನಡೂರು, ಕಾವಡಿ, ಬನ್ನಾಡಿ, ಯಡ್ತಾಡಿ, ಬಿಲ್ಲಾಡಿ, ವಡ್ಡರ್ಸೆ, ಹನೇಹಳ್ಳಿ, ಹೇರಾಡಿ, ಹೊಸಾಳು ಹಾಗೂ ಇತರ 7 ಗ್ರಾಮಗಳನ್ನು ವಾರಾಹಿ ಯೋಜನಾ ವ್ಯಾಪ್ತಿಗೆ ಸೇರಿಸಲಾಗಿತ್ತು.

ಎಡ ಹಾಗೂ ಬಲದಂಡೆ ಕಾಲುವೆ:

ಉದ್ದೇಶಿತ ಗ್ರಾಮಗಳ ಕೃಷಿ ಹಾಗೂ ನೀರಾವರಿ ಚಟುವಟಿಕೆಗಳಿಗೆ ವಾರಾಹಿ ನದಿಯ ನೀರನ್ನು ಉದ್ದನೆಯ ಕಾಲುವೆಯ ಮೂಲಕ ಹರಿಸಿ ಜನರ ಅಗತ್ಯತೆಗಳನ್ನು ಪೂರೈಸಲು ಎಡ ದಂಡೆ ಹಾಗೂ ಬಲದಂಡೆ ಎನ್ನುವ ಎರಡು ವಿಭಾಗಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. 44.35 ಕಿ.ಮೀ ಎಡದಂಡೆಯ ಕಾಲುವೆ ಹಾಗೂ 42.73 ಕಿ.ಮೀ ಉದ್ದದ ಬಲದಂಡೆ ಕಾಲುವೆ ನಿರ್ಮಾಣ ಮಾಡುವುದು ಯೋಜನೆಯ ಉದ್ದೇಶವಾಗಿತ್ತು.

ವಿಪರ್ಯಾಸವೆಂದರೆ ಯೋಜನೆ ಪ್ರಾರಂಭವಾಗಿ 43 ವರ್ಷಗಳಾಗುತ್ತಿದ್ದರೂ ಯೋಜನೆಗೆ ಗುರುತಿಸಲಾಗಿರುವ ಭೂಮಿಯನ್ನು ಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿಲ್ಲ. ಸ್ವಾಧೀನ ಪಡಿಸಿಕೊಂಡಿರುವ ಭೂಮಿಗಳಿಗೂ ತ್ವರಿತ ಪರಿಹಾರ ಹಣ ಸಂದಾಯ ಮಾಡಿಲ್ಲ ಎನ್ನುವ ಆರೋಪಗಳು ವ್ಯಾಪಕವಾಗಿವೆ. ಎಡದಂಡೆ ಯೋಜನೆಯಲ್ಲಿ 38 ಕಿ.ಮೀ ದೂರದವರೆಗಿನ ಕಾಲುವೆ ಹಾಗೂ ಇತರ ಕಾಮಗಾರಿಗಳು ಪೂರ್ಣಗೊಂಡಿವೆ.

ಪ್ರಾರಂಭದಿಂದಲೂ ಕುಂಟು ನೆವಗಳೊಂದಿಗೆ ಕಡೆಗಣಿಸಲ್ಪಡುತ್ತಲೇ ಬಂದಿರುವ ಬಲದಂಡೆಯ ಯೋಜನೆಯ ಕಾಮಗಾರಿ ಆರಂಭಕ್ಕೆ ಇನ್ನೂ ಶುಭ ಮಹೂರ್ತ ಕೂಡಿ ಬಂದಿಲ್ಲ.

ವಾರಾಹಿ ಹುಟ್ಟು...

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗುಡ್ಡೆಕೊಪ್ಪದಲ್ಲಿ ಹುಟ್ಟುವ ವಾರಾಹಿ ನದಿಯು 88 ಕಿ.ಮೀ ಪಶ್ಚಿಮಾಭಿಮುಖವಾಗಿ ಹರಿದು ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪ ಸಮುದ್ರ ಸೇರುತ್ತದೆ. ಈ ವಾರಾಹಿ ನದಿಗೆ ಸಿದ್ದಾಪುರದ ಬಳಿಯ ಹೊರಿಯಬ್ಬೆ ಬಳಿ ಅಣೆಕಟ್ಟು ಕಟ್ಟಿ ವಾರಾಹಿ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ನೀರನ್ನು ಹರಿಸಿ, ವಿದ್ಯುತ್ ಉತ್ಪಾದನೆ ಬಳಿಕ ಹರಿಯುವ ನೀರನ್ನು ಉಡುಪಿ ಹಾಗೂ ಕುಂದಾಪುರ ತಾಲ್ಲೂಕಿನ ಕೃಷಿ ಭೂಮಿಗೆ ನೀರು ಹರಿಸುವುದು ಯೋಜನೆ ಮೂಲ ಉದ್ದೇಶ.

‘ಭರವಸೆಗಳು ಕಮರಿವೆ’

ನನ್ನ ಅಜ್ಜನ ಕಾಲದಲ್ಲಿ ಆರಂಭವಾಗಿದ್ದ ವಾರಾಹಿ ಯೋಜನೆಯ ಕಾಲುವೆಗಳಲ್ಲಿ ಇಂದಲ್ಲ, ನಾಳೆ ನೀರು ಬರುತ್ತದೆ ಎನ್ನುವ ಭರವಸೆಗಳನ್ನು ಇಟ್ಟುಕೊಂಡಿದ್ದ ಅಜ್ಜ ಕಾಲವಾಗಿ ಆಗಲೇ 16 ವರ್ಷ ಕಳೆದಿದೆ. ಯೋಜನೆ ನಿರೀಕ್ಷಿತ ಅವಧಿಯಲ್ಲಿ ಮುಕ್ತಾಯವಾಗುತ್ತದೆ ಎನ್ನುವ ಭರವಸೆಗಳು ಕಡಿಮೆಯಾಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿ ಪ್ರತೀಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.