ADVERTISEMENT

ಬ್ರಹ್ಮಾವರ: ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿತೇ ವಾರಾಹಿ ನೀರು ?

ಎ.ಶೇಷಗಿರಿ ಭಟ್ಟ‌
Published 15 ಫೆಬ್ರುವರಿ 2026, 2:00 IST
Last Updated 15 ಫೆಬ್ರುವರಿ 2026, 2:00 IST
ಚಾಂತಾರು ಗ್ರಾಮಕ್ಕೆ ನೀರುಣಿಸುವ ಚಾಂತಾರು ಮದಗ
ಚಾಂತಾರು ಗ್ರಾಮಕ್ಕೆ ನೀರುಣಿಸುವ ಚಾಂತಾರು ಮದಗ   

ಬ್ರಹ್ಮಾವರ: ಬೇಸಿಗೆಯ ಬಿಸಿ ಏರುತ್ತಾ ಇದೆ. ಚಳಿಯೊಂದಿಗೆ ಬಿಸಿಲಿನ ತಾಪವೂ ಹೆಚ್ಚಿದ್ದು, ನೀರಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಬಾರಿ ವಾರಾಹಿಯಿಂದ ಪಂಚಾಯಿತಿಗಳಿಗೆ ನೇರವಾಗಿ ನೀರು ಸರಬರಾಜು ಆಗುತ್ತಿರುವುದರಿಂದ ಏಪ್ರಿಲ್‌, ಮೇಯಲ್ಲಿ ನೀರಿನ ಸಮಸ್ಯೆ ಅಷ್ಟೊಂದು ಉದ್ಭವಿಸಲಿಕ್ಕಿಲ್ಲ ಎನ್ನುವ ಆಶಾಭಾವನೆ ಗ್ರಾಮಾಂತರ ಪ್ರದೇಶಗಳ ಜನರದ್ದು.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ ಕೊಕ್ಕರ್ಣೆ, ಕಾಡೂರು, ಚೇರ್ಕಾಡಿ, ನೀಲಾವರ, ಆರೂರು, ಚಾಂತಾರು ಗ್ರಾಮದ ಬಹುತೇಕ ಕಡೆ ಏಪ್ರಿಲ್‌ ಬಂತೆಂದೆರೆ ಜನರು ನೀರಿಗಾಗಿ ಕಷ್ಟ ಪಡುವುದು ಸಾಮಾನ್ಯ. ಪಂಚಾಯಿತಿಯಿಂದ ನಲ್ಲಿ ಮೂಲಕ, ಟ್ಯಾಂಕರ್‌ ಮೂಲಕ ನೀರು ಒದಗಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಈ ಬಾರಿ ಸಮಸ್ಯೆ ಉದ್ಭವಿಸುವ ಮೊದಲೇ ಕಿಂಡಿ ಅಣೆಕಟ್ಟೆಗಳಲ್ಲಿ ಹಲಗೆಗಳನ್ನು ಸರಿಯಾಗಿ ಜೋಡಿಸಿರುವುದರಿಂದ ನೀರಿನ ಸಮಸ್ಯೆ ಇದುವರೆಗೆ ಕಾಣಿಸಿಲ್ಲ.

ಚೇರ್ಕಾಡಿ ಮತ್ತು ನೀಲಾವರ ಪಂಚಾಯಿತಿಗಳಲ್ಲೂ ನೀರಿನ ಸಮಸ್ಯೆ ಪರಿಹಾರಕ್ಕೆ ಪಂಚಾಯಿತಿ ಸಕಲ ಸಿದ್ಧತೆ ನಡೆಸಿದೆ. ಪಂಪ್‌ ಹಾಳಾದಲ್ಲಿ ಬದಲಿ ವ್ಯವಸ್ಥೆಗೂ ವ್ಯವಸ್ಥೆ ಮಾಡಿ ಬೇಸಿಗೆಯ ನೀರಿಗೆ ಸಿದ್ಧತೆ ನಡೆಸಿದೆ. ಚಾಂತಾರು ಗ್ರಾಮದ ಹಲವು ಮನೆಗಳಿಗೆ ನೀರುಣಿಸುವ ಚಾಂತಾರು ಮದಗದಲ್ಲೂ ಈ ಬಾರಿ ನೀರಿನ ಪೋಲು ಅಷ್ಟೊಂದು ಆಗಿಲ್ಲ.

ADVERTISEMENT

ವಾರಾಹಿ ವರದಾನ: ಬಹತೇಕ ಎಲ್ಲ ಪಂಚಾಯಿತಿಗಳಿಗೂ 2–3 ತಿಂಗಳಿನಿಂದ ವಾರಾಹಿ ನೀರು ಬರುತ್ತಿದೆ. ಪಂಚಾಯಿತಿಯ ಓವರ್‌ ಹೆಡ್‌ಟ್ಯಾಂಕ್‌ಗಳಿಗೆ ನೇರವಾಗಿ ವಾರಾಹಿ ನೀರು ಬರುತ್ತಿದ್ದು, ಅಲ್ಲಿಂದ ಪ್ರತಿ ಮನೆಗೂ ಪೈಪ್‌ ಮೂಲಕ ನೀರು ಸರಬರಾಜು ಆಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಅಷ್ಟೊಂದು ಉದ್ಭವಿಸಲ್ಲ ಎಂದು ಚೇರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯರ ಅಭಿಪ್ರಾಯ.

ನೀರಿನ ಬಿಲ್‌ಹೆಚ್ಚು: ವಾರಾಹಿಯಿಂದ ಪಂಚಾಯಿತಿಗೆ ನೀರು ಸರಬರಾಜಾಗುತ್ತಿದೆ. ಆದರೆ ಪಂಚಾಯಿತಿಯಿಂದ ಅಧಿಕ ಮೊತ್ತ ಪಡೆದುಕೊಳ್ಳಲಾಗುತ್ತಿದೆ ಎನ್ನುವ ಮಾತು ಪಂಚಾಯಿತಿ ಸದಸ್ಯರಿಂದ ಕೇಳಿ ಬರುತ್ತಿದೆ. ವಾರಾಹಿಗಿಂತ ಕಿಂಡಿ ಅಣೆಕಟ್ಟು, ಬಾವಿಗಳಿಂದ ಗ್ರಾಮಕ್ಕೆ ನೀರು ಪೂರೈಸಿದರೆ ವೆಚ್ಚ ಕಡಿಮೆ ಆಗಲಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ.

ಕೃಷಿಕರಿಗೆ ತೊಂದರೆ: ತಾಲ್ಲೂಕಿನ ಕೆಲವಡೆ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಣೆ ತಡವಾಗಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ಇನ್ನೊಂದೆಡೆ ಉಪ್ಪು ನೀರು ನುಗ್ಗಿ ಕೃಷಿಕರಿಗೆ ತೊಂದರೆಯಾಗಿದೆ. ಕೃಷಿಕರು ನದಿಗಳಲ್ಲಿ ಅಳವಡಿಸಿದ ಪಂಪ್‌ಗಳು ಉಪ್ಪು ನೀರಿನಿಂದ ತುಕ್ಕು ಹಿಡಿದು ಹಾಳಾಗುತ್ತಿವೆ ಎಂದು ಹೇರಂಜೆ ಭಾಗದ ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಹವಾಮಾನದ ವೈಪರೀತ್ಯದಿಂದಲೂ ನೀರು ಬಹುಬೇಗ ಕಡಿಮೆಯಾಗುತ್ತಿದೆ. ಇದರಿಂದ ಎರಡನೇ ಬೆಳೆಗೂ ಬಾವಿಯಿಂದ ಪಂಪ್‌ಗಳ ಮೂಲಕ ನೀರುಣಿಸುವ ಕಾರ್ಯವಾಗುತ್ತಿದೆ ಎಂದು ಕೂಡ್ಲಿಯ ಕೃಷಿಕ ಶ್ರೀನಿವಾಸ ಉಡುಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೋಟ ಪರಿಸರದಲ್ಲೂ ನೀರಿನ ಅಭಾವ ಈಗಷ್ಟೇ ಪ್ರಾರಂಭವಾಗಿದೆ. ಕೋಟ ಹೋಬಳಿಯ ಸಾಹೇಬರಕಟ್ಟೆ, ಶಿರಿಯಾರದ ಕೆಲವು ಪ್ರದೇಶಗಳಲ್ಲಿ ವಾರಾಹಿ ಕಾಲುವೆಗಳ ಮೂಲಕ ನೀರು ಸರಬರಾಜು ಆಗುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ. ಅಂತರ್ಜಲವೂ ಹೆಚ್ಚಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೇನೂ ಆಗುವುದಿಲ್ಲ ಎನ್ನುವ ಮಾತು ಅಲ್ಲಿಯ ಗ್ರಾಮಸ್ಥರದ್ದು.

ಉಪ್ಪೂರಿನ ಕಿಂಡಿ ಅಣೆಕಟ್ಟೆಯ ಹಲಗೆಗಳ ಜೋಡಣೆ ಸರಿಯಾಗದೆ ಇರುವುದರಿಂದ ಉಪ್ಪುನೀರು ಒಳನುಗ್ಗಿ ಕೃಷಿಕರಿಗೆ ತೊಂದರೆಯಾಗಿದೆ. ಹಲವು ಪಂಪ್‌ಗಳೂ ಹಾಳಾಗಿವೆ
ಅನಂತ ಸೇರಿಗಾರ ಆರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.