ADVERTISEMENT

ಉಡುಪಿ: ಶತಕ ಬಾರಿಸಿ ಮುನ್ನುಗ್ಗುತ್ತಿರುವ ಟೊಮೆಟೊ

ಹೋಟೆಲ್ ಮೆನುವಿನಲ್ಲಿ ಟೊಮೆಟೊ ಬಾತ್, ಕರಿ ಮಾಯ; ನುಗ್ಗೆ, ಬೀನ್ಸ್‌ ದರವೂ ಗಗನಕ್ಕೆ

ಬಾಲಚಂದ್ರ ಎಚ್.
Published 23 ಮೇ 2022, 19:30 IST
Last Updated 23 ಮೇ 2022, 19:30 IST
ಟೊಮೆಟೊ
ಟೊಮೆಟೊ   

ಉಡುಪಿ: ಮಾರುಕಟ್ಟೆಯಲ್ಲಿ ಟೊಮೆಟೊ ದರ ಶತಕ ಬಾರಿಸಿ ಮುನ್ನುಗ್ಗುತ್ತಿವೆ. ಮಳೆ ಮತ್ತೆ ಮುಂದುವರಿದರೆ ದರ ಮತ್ತಷ್ಟು ಗಗನಕ್ಕೇರಲಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಒಂದೆಡೆ ಟೊಮೆಟೊ ದರ ಏರಿಕೆಯಿಂದ ಗೃಹಿಣಿಯರಿಗೆ ತಲೆಬಿಸಿ ಶುರುವಾಗಿದ್ದರೆ, ಮತ್ತೊಂದೆಡೆ ಹೋಟೆಲ್‌ಗಳ ಮೆನುವಿನಲ್ಲಿ ಟೊಮೆಟೊ ಬಾತ್, ಟೊಮೆಟೊ ಕರಿ ಮಾಯವಾಗುತ್ತಿದೆ.

ನಗರದ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಟೊಮೆಟೊ ದರ ಕೆ.ಜಿ.ಗೆ ಬರೋಬ್ಬರಿ ₹ 100 ಇತ್ತು. ಚಿಲ್ಲರೆಯಾಗಿ ಖರೀದಿಸಿದರೆ ಗ್ರಾಹಕರು ಭರ್ತಿ ನೂರರ ಒಂದು ನೋಟು ಕೊಡಬೇಕಿತ್ತು. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 80 ದರ ನಿಗದಿಪಡಿಸಲಾಗಿತ್ತು. ಹೆಚ್ಚು ದರ ಕೊಟ್ಟರೂ ಟೊಮೆಟೊ ಗುಣಮಟ್ಟ ಸಾಧಾರಣ ಎಂಬ ಅಸಮಾಧಾನ ಗ್ರಾಹಕರಲ್ಲಿ ಕಂಡುಬಂತು.

ADVERTISEMENT

ಎಷ್ಟಿತ್ತು; ಎಷ್ಟಾಯ್ತು:

15 ದಿನಗಳ ಹಿಂದಷ್ಟೆ ಟೊಮೆಟೊ ದರ ₹ 30 ರಿಂದ ₹ 40ರ ಆಸುಪಾಸಿನಲ್ಲಿತ್ತು. ಅಸಾನಿ ಚಂಡಮಾರುತದ ಪ್ರಭಾವದಿಂದ ರಾಜ್ಯದೆಲ್ಲೆಡೆ ಸುರಿದ ಭಾರಿ ಮಳೆಗೆ ಟೊಮೆಟೊ ಬೆಳೆ ಬಹುತೇಕ ನೆಲ ಕಚ್ಚಿದ್ದರಿಂದ ದರ ಏಕಾಏಕಿ ಗಗನಕ್ಕೇರಿದೆ ಎನ್ನುತ್ತಾರೆ ವ್ಯಾಪಾರಿ ರಫೀಕ್‌.

ಕೋಲಾರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ಉಡುಪಿಗೆ ಪೂರೈಕೆಯಾಗುತ್ತಿದ್ದ ಟೊಮೆಟೊ ಸ್ಥಗಿತವಾಗಿದೆ. ಹೊರ ರಾಜ್ಯಗಳಿಂದ ಟೊಮೆಟೊ ಖರೀದಿಸಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಅವರು.

ನಾಸಿಕ್ ಟೊಮೆಟೊ ಲಗ್ಗೆ:

ಕರ್ನಾಟಕಕ್ಕೆ ಹೋಲಿಸಿದರೆ ಹೊರ ರಾಜ್ಯಗಳಲ್ಲಿ ಟೊಮೆಟೊ ದರ ಸ್ವಲ್ಪ ಕಡಿಮೆ ಇದೆ. ಹಾಗಾಗಿ, ಮಹಾರಾಷ್ಟ್ರದ ನಾಸಿಕ್‌ನಿಂದ ಸಗಟಾಗಿ ಟೊಮೆಟೊ ತರಿಸಿಕೊಳ್ಳಲಾಗುತ್ತಿದೆ. ಒಂದು ಬಾಕ್ಸ್‌ನಲ್ಲಿ ಶೇ 25ರಷ್ಟು ಹಣ್ಣುಗಳು ಹಾಳಾಗಿರುತ್ತವೆ. ಲಾಭದ ಮಾತಿರಲಿ, ಅಸಲಿಗೂ ‌ಮೋಸವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು ರಫೀಕ್‌.

ತಿಂಗಳ ಹಿಂದೆ ಮೂರ್ನಾಲ್ಕು ಕೆ.ಜಿ ಟೊಮೆಟೊ ಖರೀದಿಸಿ ಕೊಂಡೊಯ್ಯುತ್ತಿದ್ದ ಗ್ರಾಹಕರು ಈಗ ಅರ್ಧ ಕೆ.ಜಿ ಖರೀದಿಸುತ್ತಿದ್ದಾರೆ. ಟೊಮೆಟೊ ಆಯ್ಕೆಯಲ್ಲೂ ಬಹಳ ಯೋಚನೆ ಮಾಡುತ್ತಿದ್ದಾರೆ. ಮದುವೆ ಸೇರಿದಂತೆ ಇತರ ಸಮಾರಂಭಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುವವರು ಸಾದ್ಯವಾದಷ್ಟು ಕಡಿಮೆ ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಹೋಟೆಲ್‌ಗಳು ಕಂಗಾಲು:

ಗೃಹಿಣಿಯರಿಗೆ ಮಾತ್ರವಲ್ಲ; ಹೋಟೆಲ್‌ಗಳಿಗೂ ಟೊಮೆಟ್‌ ದರ ಏರಿಕೆಯ ಬಿಸಿ ತಟ್ಟಿದೆ. ಕೆಲವು ಹೋಟೆಲ್‌ಗಳಲ್ಲಿನ ಮೆನುವಿನಲ್ಲಿ ಟೊಮೆಟೊ ಬಾತ್‌, ಟೊಮೆಟೊ ಕರಿ ಕಾಣುತ್ತಿಲ್ಲ. ದರ ಹೆಚ್ಚಾಗಿದೆ ಎಂದು ಖಾದ್ಯಗಳಿಗೆ ಸಂಪೂರ್ಣವಾಗಿ ಟೊಮೆಟೊ ಬಳಕೆ ನಿಲ್ಲಿಸಲು ಸಾದ್ಯವೇ ಇಲ್ಲ. ಸಾಂಬಾರ್‌, ಪಲ್ಯ, ರಸಂ, ಕರಿ ತಯಾರಿಗೆ ಟೊಮೆಟೊ ಅಗತ್ಯವಾಗಿ ಬೇಕು. ಹಿಂದಿನಷ್ಟು ಸಾದ್ಯವಾಗದಿದ್ದರೂ ಕಡಿಮೆ ಖರೀದಿ ಮಾಡುತ್ತಿದ್ದೇವೆ ಎನ್ನುತ್ತಾರೆ ಹೋಟೆಲ್ ಉದ್ಯಮಿ ಸತ್ಯಪ್ರಕಾಶ್‌.

ಬೀನ್ಸ್‌, ನುಗ್ಗೆ, ಅಲಸಂದೆಯೂ ತುಟ್ಟಿ:

ಟೊಮೆಟೊ ಮಾತ್ರವಲ್ಲ; ಬೀನ್ಸ್‌, ನುಗ್ಗೆಕಾಯಿ ಹಾಗೂ ಮೀಟರ್ ಅಲಸಂದೆ ದರವೂ 100ರ ಗಟಿ ದಾಟಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಹಾಗೂ ತಮಿಳುನಾಡಿನಿಂದ ಪೂರೈಕೆಯಾಗುತ್ತಿದ್ದ ಬೀನ್ಸ್‌ ಮಳೆಗೆ ಹಾಳಾಗಿದೆ. ದಾವಣಗೆರೆಯಲ್ಲಿ ಭಾರಿ ಮಳೆಯಾಗಿದ್ದರಿಂದ ಮೀಟರ್ ಅಲಸಂದೆ ಕೊಳೆತುಹೋಗಿದ್ದು ದರ ಹೆಚ್ಚಿದೆ ಎನ್ನುತ್ತಾರೆ ವ್ಯಾಪಾರಿಗಳು.

ಮಾರುಕಟ್ಟೆಯಲ್ಲಿ ತರಕಾರಿ ದರ

ತರಕಾರಿ–ವಾರದ ಹಿಂದಿನ ದರ–ಸದ್ಯದ ದರ

ಟೊಮೆಟೊ–50–100

ಬೀನ್ಸ್‌–80–120

ನುಗ್ಗೆಕಾಯಿ–80–120

ಮೀಟರ್ ಅಲಸಂದೆ–40–140

ಈರುಳ್ಳಿ–20–20

ಬೆಂಡೆ–40–50

ಕ್ಯಾರೆಟ್‌–40–60

ಹೂಕೋಸು–40–60‌

ಬದನೆಕಾಯಿ–30–60

ಕ್ಯಾಪ್ಸಿಕಂ–60–80

ಈರೇಕಾಯಿ–40–80

ಸಾಂಬಾರ್ ಸೌತೆ–08–25

ಬೀಟ್‌ರೂಟ್‌–25–40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.