
ಉಡುಪಿ: ‘ಶಿಕ್ಷಣ ಪಡೆದರೆ ಎಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಜಗತ್ತಿನ ಮುಂದೆ ಧೈರ್ಯವಾಗಿ ನಿಲ್ಲಲು ಸಾಧ್ಯವಿದೆ. ಪ್ರತಿಯೊಂದು ಸಮುದಾಯದವರೂ ವಿದ್ಯೆಗೆ ಆದ್ಯತೆ ನೀಡಬೇಕು’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ಉಡುಪಿ ಜಿಲ್ಲಾ ಮರಾಟಿ ಸಮಾಜಸೇವಾ ಸಂಘದ ವತಿಯಿಂದ ಬ್ರಹ್ಮಾವರ ತಾಲ್ಲೂಕಿನ ಮುಂಡ್ಕಿನಜೆಡ್ಡು ಆರ್.ಕೆ. ಪಾಟ್ಕರ್ ಶಾಲಾ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮರಾಟಿ ಹೋಳಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯೆ ಪಡೆದ ಬಳಿಕ ನ್ಯಾಯಯುತವಾಗಿ ಧನ ಸಂಪಾದನೆ ಮಾಡಬೇಕು. ಜೊತೆಗೆ ಧರ್ಮಾಚರಣೆ ಯನ್ನೂ ಮಾಡಿದರೆ ಬದುಕು ಸಾರ್ಥಕವಾಗುತ್ತದೆ. ಆಧುನಿಕ ಸೌಲಭ್ಯಗಳು ಬಂದರೂ ಜನರ ದುಃಖ ಕಡಿಮೆಯಾಗಿಲ್ಲ. ಆಧುನಿಕತೆಗೆ ದುಃಖವನ್ನು ಅಳಿಸುವ ಶಕ್ತಿ ಇಲ್ಲ. ಸುಖದ ಮೂಲ ಧರ್ಮವಾದರೆ, ದುಃಖದ ಮೂಲ ಅಧರ್ಮ’ ಎಂದರು.
ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾ ಮರಾಟಿ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್ ಚಾಂತಾರು, ಸಂಚಾಲಕ ಉಮೇಶ್ ಎ. ನಾಯ್ಕ್ ಚೇರ್ಕಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮರಾಟಿ ಸಮಾಜದ ಮೂರು ಸಾವಿರಕ್ಕೂ ಹೆಚ್ಚು ಮಂದಿ ಹೋಳಿ ವೇಷಧಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.