ADVERTISEMENT

ಉಡುಪಿ: 23 ಎಕರೆಗೆ ವ್ಯಾಪಿಸಿದ ಬಣ್ಣದ ಕಲ್ಲಂಗಡಿ

ತೈವಾನ್ ತಳಿಯ ಕಲ್ಲಂಗಡಿಗೆ ವರ್ಷದಿಂದ ವರ್ಷಕ್ಕೆ ಕುದುರುತ್ತಿದೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 15:43 IST
Last Updated 7 ಫೆಬ್ರುವರಿ 2025, 15:43 IST
ಸುರೇಶ್‌ ನಾಯಕ್‌ ಅವರು ಬೆಳೆದ ಬಣ್ಣಬಣ್ಣದ ಕಲ್ಲಂಗಡಿ
ಸುರೇಶ್‌ ನಾಯಕ್‌ ಅವರು ಬೆಳೆದ ಬಣ್ಣಬಣ್ಣದ ಕಲ್ಲಂಗಡಿ   

ಉಡುಪಿ: ಬಣ್ಣ ಬಣ್ಣದ ಕಲ್ಲಂಗಡಿ ಬೆಳೆಯುವ ಮೂಲಕ ಗಮನ ಸೆಳೆದಿರುವ ಹಿರಿಯಡ್ಕದ ಸುರೇಶ್ ನಾಯಕ್ ಅವರು, ಬಾರಿ ಬೇಡಿಕೆಯ ಕಾರಣ ಬೆಳೆಯನ್ನು ಈ ಬಾರಿ 24 ಎಕರೆಗೆ ವಿಸ್ತರಿಸಿದ್ದಾರೆ.

ಸುರೇಶ್ ನಾಯಕ್ ಅವರು ಕೆಲ ವರ್ಷಗಳ ಹಿಂದೆ ಐದು ಎಕರೆ ಪ್ರದೇಶದಲ್ಲಿ ಬಣ್ಣ ಬಣ್ಣದ ಕಲ್ಲಂಗಡಿ ಬೆಳೆ ಆರಂಭಿಸಿದ್ದರು. ಪ್ರಯೋಗಾತ್ಮಕವಾಗಿ ಆರಂಭಿಸಿದ ಈ ಬೆಳೆಗೆ ಎಲ್ಲೆಡೆಯಿಂದ ಉತ್ತಮ‌ ಸ್ಪಂದನ ಲಭಿಸಿತ್ತು.

ತೈವಾನ್‌ ದೇಶದ ಆರೋಹಿ ತಳಿಯ ಕಲ್ಲಂಗಡಿ ಹಣ್ಣಿಗೆ ಇದೀಗ ರಾಜ್ಯಾದ್ಯಂತದಿಂದ ಬೇಡಿಕೆ ಕುದುರಿದ್ದು, ಪ್ರವಾಸಿಗರು ಕೂಡ ಹಿರಿಯಡ್ಕದಲ್ಲಿರುವ ಸುರೇಶ್‌ ಅವರ ಅಂಗಡಿಗೆ ಬಂದು ಕಲ್ಲಂಗಡಿ ಹಣ್ಣು ಖರೀದಿಸುತ್ತಿದ್ದಾರೆ.

ADVERTISEMENT

ಹೊರಗಡೆ ಹಳದಿ ಬಣ್ಣ ಹಾಗೂ ಒಳಗಡೆ ಕೆಂಪುಬಣ್ಣ, ಹೊರಗಡೆ ಹಸಿರು, ಒಳಗಡೆ ಹಳದಿ ಹಾಗೂ ಕೇಸರಿ ಬಣ್ಣವಿರುವ ಮೂರು ಬಗೆಯ ಕಲ್ಲಂಗಡಿ ಹಣ್ಣುಗಳನ್ನು ಸುರೇಶ್‌ ಅವರು ಬೆಳೆಯುತ್ತಿದ್ದಾರೆ. ಜೊತೆಗೆ ಸಾಂಪ್ರದಾಯಿಕ ತಳಿಯ ಕಲ್ಲಂಗಡಿ ಹಣ್ಣನ್ನೂ ಬೆಳೆಯುತ್ತಿದ್ದಾರೆ.

ಬಣ್ಣ ಬಣ್ಣದ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಿರುವುದರಿಂದಲೇ ಗ್ರಾಹಕರು ಇವರನ್ನು ಹುಡುಕಿಕೊಂಡು ಬಂದು ಹಣ್ಣುಗಳನ್ನು ಖರೀದಿಸುತ್ತಾರೆ.

ಸುರೇಶ್‌ ಅವರು 12 ವರ್ಷಗಳಿಂದ ಕಲ್ಲಂಗಡಿ ಹಣ್ಣಿನ ಕೃಷಿ ಮಾಡುತ್ತಿದ್ದರೂ ವಿವಿಧ ಬಣ್ಣಗಳ ಕಲ್ಲಂಗಡಿಗಳನ್ನು ಮೂರು ವರ್ಷಗಳಿಂದಷ್ಟೇ ಬೆಳೆಯುತ್ತಿದ್ದಾರೆ.

ಸಾಮಾನ್ಯ ಕಲ್ಲಂಗಡಿಗಿಂತ ಹೆಚ್ಚು ರುಚಿ ಹಾಗೂ ಬೀಜಗಳು ಕಡಿಮೆ ಇರುವುದರಿಂದ ಈ ಹಣ್ಣಿಗೆ ಹೆಚ್ಚಿನ ಬೇಡಿಕೆ ಕುದುರಿದೆ. 23 ಎಕ್ರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲು ಅಗತ್ಯವಿರುವ ಬೀಜ ಖರೀದಿಗೆ ಸುಮಾರು ₹8 ಲಕ್ಷ ವೆಚ್ಚ ಮಾಡಿದ್ದೇನೆ. ತೈವಾನ್‌ ತಳಿಯ ಕಲ್ಲಂಗಡಿ ಬೀಜಕ್ಕೆ 50 ಗ್ರಾಂ ಗೆ ₹4,200 ಬೆಲೆ ಇದೆ ಎನ್ನುತ್ತಾರೆ ಸುರೇಶ್ ನಾಯಕ್.

ಕಲ್ಲಂಗಡಿ ಹಣ್ಣುಗಳನ್ನು ಮಧ್ಯವರ್ತಿಗಳ ಮೊರೆ ಹೋಗದೇ ನಾನೇ ನೇರವಾಗಿ ಮಾರಾಟ ಮಾಡುವುದರಿಂದ ಲಾಭದಾಯಕವಾಗಿದೆ. ಇನ್ನು ಜಾತ್ರೆಗಳ ಋತುವಿನಲ್ಲಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಜನವರಿಯಿಂದ ಮೇ ತಿಂಗಳವರೆಗೆ ಕಲ್ಲಂಗಡಿ ಕೊಯ್ಲು ಇರುತ್ತದೆ. ಬೀಜ ಹಾಕಿ 55 ರಿಂದ 60 ದಿನ ಕೊಯ್ಲಿಗೆ ಬೇಕು ಎಂದೂ ಅವರು ವಿವರಿಸುತ್ತಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಕೃಷಿವಸ್ತು ಪ್ರದರ್ಶನದಲ್ಲಿ ಕಣ್ಣಿಗೆ ಬಿದ್ದ ಹಳದಿ ಬಣ್ಣದ ಕಲ್ಲಂಗಡಿಯಿಂದ, ಅದನ್ನು ಬೆಳೆಯುವ ಆಸಕ್ತಿ ಮೂಡಿತು ಎನ್ನುತ್ತಾರೆ ಅವರು.

ಸುರೇಶ್‌ ನಾಯಕ್‌ ಅವರ ಕಲ್ಲಂಗಡಿ ಕೃಷಿ
ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ಕಲ್ಲಂಗಡಿ ಹಣ್ಣಿನ ಬೆಳೆಯತ್ತ ಜಿಲ್ಲೆಯ ರೈತರು ಇನ್ನಷ್ಟು ಚಿತ್ತ ಹರಿಸಬೇಕು. ಇದೊಂದು ಲಾಭದಾಯಕ ಬೆಳೆಯಾಗಿದೆ.
–ಸುರೇಶ್‌ ನಾಯಕ್‌, ಕಲ್ಲಂಗಡಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.