ADVERTISEMENT

ವಿಮಾನದಲ್ಲಿ ಓಷಧ ಸಿಂಪಡನೆ ವದಂತಿ: ಬಾವಿಗಳಿಗೆ ಹೊದಿಕೆ ಮುಚ್ಚಿದ ಸಾರ್ವಜನಿಕರು!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 15:38 IST
Last Updated 22 ಮಾರ್ಚ್ 2020, 15:38 IST
ಬಾವಿಗೆ ಹೊದಿಕೆ ಮುಚ್ಚಿರುವುದು
ಬಾವಿಗೆ ಹೊದಿಕೆ ಮುಚ್ಚಿರುವುದು   

ಶಿರ್ವ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದೆರಡು ದಿನಗಳಿಂದ ರಾತ್ರಿ ವೇಳೆ ವಿಮಾನಗಳಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ ಎಂಬ ವದಂತಿ ಹಬ್ಬಿದ್ದು, ಗ್ರಾಮೀಣ ಪ್ರದೇಶದ ಜನತೆ ಆತಂಕಿತರಾಗಿದ್ದಾರೆ.

ರಾತ್ರಿ ವೇಳೆ ಯಾರೂ ಮನೆಯಿಂದ ಹೊರಗೆ ಬರಬಾರದು. ಮನೆಯ ಹೊರಗೆ ಬಟ್ಟೆಬರೆಗಳನ್ನು ಒಣಗಲು ಹಾಕಬಾರದು ಎಂಬಿತ್ಯಾದಿ ಸುದ್ದಿಗಳು ಹಬ್ಬಿದ್ದವು. ಇದರಿಂದ ಅನೇಕರು ಗಾಬರಿಗೊಂಡಿರುವ ಪ್ರಸಂಗಗಳು ಬೆಳಕಿಗೆ ಬಂದಿದೆ.

ಶನಿವಾರ ರಾತ್ರಿ ವೇಳೆ ಮನೆಯಂಗಳದಲ್ಲಿ ಆಕಾಶದತ್ತ ದಿಟ್ಟಿ ಹಾಯಿಸುತ್ತಾ ಕುಳಿತ್ತಿದ್ದ ಅನೇಕರು ವಿಮಾನಗಳು ಹಾರಾಡುತ್ತಿದ್ದಂತೆ ಗಾಬರಿಗೊಂಡರು. ಇದೇ ವೇಳೆ ಕಟಪಾಡಿ, ಮಟ್ಟು, ಪಡುಕರೆ ಪರಿಸರದಲ್ಲಿ ಕೆಲವು ಮನೆಗಳಲ್ಲಿ ಕುಡಿಯುವ ನೀರಿನ ಬಾವಿಗೆ ಪ್ಲಾಸ್ಟಿಕ್ ಶೀಟ್, ಬಟ್ಟೆಬರೆ, ಇನ್ನಿತರ ವಸ್ತುಗಳಿಂದ ಹೊದಿಕೆ ಮುಚ್ಚಿ, ಬಾವಿ ನೀರಿಗೆ ರಕ್ಷಣೆ ಒದಗಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಸುದ್ದಿಯಿಂದಾಗಿ ಗ್ರಾಮೀಣ ಭಾಗದ ಜನರು ಭಾನುವಾರ ರಾತ್ರಿ ಭಯಭೀತರಾಗಿ ಇಂತಹ ವ್ಯವಸ್ಥೆಯನ್ನು ಮಾಡಿಕೊಂಡಿರುವುದು ಕಂಡು ಬಂತು. ಸಾಮಾಜಿಕ ಜಾಲತಾಣಗಳಲ್ಲಿ ಈಗ ಬೇರೆ ಬೇರೆ ಕಡೆಗಳಲ್ಲಿ ರಾತ್ರಿ ಹೊತ್ತು ಬಾವಿಗಳಿಗೆ ಹೊದಿಕೆಗಳನ್ನು ಮುಚ್ಚಿರುವ ಛಾಯಾಚಿತ್ರಗಳು ಸಾಲು ಸಾಲಾಗಿ ಹರಿದಾಡಲು ಶುರುವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.