ADVERTISEMENT

ಹೆಬ್ರಿ: ಕಾಡುಪ್ರಾಣಿ ಹಾವಳಿ, ರೈತರಿಗೆ ಸಂಕಷ್ಟ

ಎಕರೆಗೆ ₹ 3 ಲಕ್ಷ ಪರಿಹಾರ, ಬಂದೂಕು ಪರವಾನಗಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:49 IST
Last Updated 26 ನವೆಂಬರ್ 2022, 4:49 IST
ಹೆಬ್ರಿ ತಾಲ್ಲೂಕಿನ ಮುನಿಯಾಲಿನ ತೆಂಗಿನತೋಟದಲ್ಲಿ ಮಂಗಗಳು ಸಿಯಾಳ ಕುಡಿದು ಹಾಕಿರುವುದು
ಹೆಬ್ರಿ ತಾಲ್ಲೂಕಿನ ಮುನಿಯಾಲಿನ ತೆಂಗಿನತೋಟದಲ್ಲಿ ಮಂಗಗಳು ಸಿಯಾಳ ಕುಡಿದು ಹಾಕಿರುವುದು   

ಹೆಬ್ರಿ: ಅಡಿಕೆ, ತೆಂಗು, ಬಾಳೆ ಸಹಿತ ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳಿಗೆ ಮಂಗ ಇನ್ನಿತರ ಕಾಡುಪ್ರಾಣಿಗಳು ಹಿಂಡುಹಿಂಡಾಗಿ ಲಗ್ಗೆ ಇಟ್ಟು ಹಾಳು ಮಾಡುತ್ತಿವೆ. ಕಾಡುಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆಗೆ ಸರ್ಕಾರ ಕ್ರಮವಹಿಸುತ್ತಿಲ್ಲ. ಹೀಗಾದರೆ ಕೃಷಿ ಜೀವನ ಕಷ್ಟದಾಯಕವಾಗುತ್ತದೆ ಎಂಬುದು ರೈತರ ಅಳಲು.

ಒಂದು ಮಂಗ ದಿನಕ್ಕೆ ಐದರಷ್ಟು ಸಿಯಾಳ ಹಾಳು ಮಾಡುತ್ತದೆ. ಒಂದು ಸಿಯಾಳಕ್ಕೆ ರೈತರಿಗೆ ₹ 20–25 ದೊರೆಯುತ್ತದೆ. ಇದರಿಂದ ದಿನಕ್ಕೆ ₹ 125ರಷ್ಟು ನಷ್ಟವಾಗುತ್ತದೆ. ಬೊಂಡದ ಜೊತೆಗೆ ಅಡಿಕೆ, ತರಕಾರಿ, ಬಾಳೆ, ಭತ್ತವನ್ನೂ ಮಂಗಳು ಹಾನಿ ಮಾಡುತ್ತವೆ. ಹೀಗಾದರೆ ತೋಟದ ಬೆಳೆಗಾರರು ಬದುಕುವುದಾದರೂ ಹೇಗೆ ಎಂದು ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಕುಲಾಲ್‌ ಪ್ರಶ್ನಿಸಿದರು.

ಬಂದು ಬೇಸಾಯ ಮಾಡಲು ಸಿದ್ಧ ಮಾಡಿರುವ ನೇಜಿ, ದನಗಳಿಗೆ ಮೇಯಲು ಬೆಳೆಸಿರುವ ಹುಲ್ಲು, ಬೆಳೆದ ಭತ್ತದ ಪೈರು ಎಲ್ಲವನ್ನೂ ಜಿಂಕೆಗಳು ತಿಂದು ನಾಶ ಮಾಡುತ್ತವೆ. ಕಡವೆಗಳು ಹಿಂಡಾಗಿ ಬಂದು ಭತ್ತ, ಅಡಿಕೆ, ತೆಂಗು, ಬಾಳೆ ಗಿಡಗಳನ್ನೇ ತಿಂದು ನಾಶಪಡಿಸುತ್ತಿವೆ. ಕಾಡುಕೋಣಗಳು ಬಹುತೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡುತ್ತಿವೆ. ಕಾಡುಕೋಣಗಳು ಗಿಡಗಳನ್ನು ತುಳಿದು ಹಾಳು ಮಾಡುತ್ತವೆ. ಕಾಡುಕೋಣಗಳನ್ನು ಓಡಿಸುವುದೇ ಕಷ್ಟ. ನೋಡುವಾಗಲೇ ಭಯಹುಟ್ಟುತ್ತದೆ. ಇತ್ತೀಚೆಗೆ ಚಿರತೆ, ಹುಲಿಗಳು ಕೂಡ ಅಲ್ಲಲ್ಲಿ ಕಾಣುತ್ತಿವೆ. ಸಾಕುನಾಯಿ, ದನಕರುಗಳನ್ನು ಹಿಡಿದು ತಿನ್ನುತ್ತಿವೆ. ಮನುಷ್ಯರ ಮೇಲೂ ದಾಳಿ ಮಾಡುವ ಭೀತಿಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ನವಿಲುಗಳ ಕಾಟ ಇತ್ತೀಚೆಗೆ ಜಾಸ್ತಿಯಾಗಿದೆ. ತರಕಾರಿಗಳ ಗಿಡ, ಹೂವು ಎಲ್ಲವನ್ನೂ ನಾಶಪಡಿಸುತ್ತವೆ. ರೈತರು ಕೃಷಿಗಾಗಿ ಬ್ಯಾಂಕ್‌ ಸಹಿತ ಸಹಕಾರ ಸಂಘಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುತ್ತಾರೆ. ಮಳೆ– ಗಾಳಿ ಸಹಿತ ಹವಾಮಾನಗಳ ವೈಪರೀತ್ಯದ ಸಮಸ್ಯೆಯಿಂದ ಒಂದೆಡೆ ನಷ್ಟವಾದರೆ, ಇನ್ನೊಂದೆಡೆ ಕಾಡುಪ್ರಾಣಿಗಳ ಸಮಸ್ಯೆ, ಬೆಲೆ ಏರಿಕೆಯ ಸಂಕಷ್ಟ. ಸಮಸ್ಯೆ ಎದುರಿಸಿ ಬೆಳೆದ ಬೆಳೆಯ ಫಲ ರೈತರ ಕೈಗೆ ಸಿಗುವುದಿಲ್ಲ. ಹೀಗಾದರೆ ಸಾಲ ಮರುಪಾವತಿ ಮಾಡುವುದು ಹೇಗೆ, ಜೀವನ ಮಾಡುವುದು ಹೇಗೆ? ಸರ್ಕಾರ ಪರಿಹಾರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಕಾಡುಪ್ರಾಣಿಗಳಿಂದ ಆದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪ್ರತಿ ರೈತನಿಗೆ ಎಕರೆಗೆ ₹ 3 ಲಕ್ಷ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಯಾವ ಷರತ್ತು ಇಲ್ಲದೆ ಬಂದೂಕು ಪರವಾನಗಿ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.