ADVERTISEMENT

ಉಡುಪಿ: ಮಹಿಳಾ ಶಕ್ತಿಯಿಂದ ಕಸವಾಯ್ತು ಸಂಪನ್ಮೂಲ

ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಯಶಸ್ಸಿನ ಹಿಂದಿದೆ ಸ್ತ್ರೀಶಕ್ತಿ: ಮಹಿಳಾ ಸ್ವಸಹಾಯ ಸಂಘಗಳಿಂದ 60 ಎಸ್‌ಎಲ್‌ಆರ್‌ಎಂ ಘಟಕಗಳ ನಿರ್ವಹಣೆ

ಬಾಲಚಂದ್ರ ಎಚ್.
Published 7 ಮಾರ್ಚ್ 2022, 19:45 IST
Last Updated 7 ಮಾರ್ಚ್ 2022, 19:45 IST
ಅನುಷಾ, ಕೊಕ್ಕರ್ಣೆ ಎಸ್‌ಎಲ್‌ಆರ್‌ಎಂ ಘಟಕದ ನಿರ್ವಾಹಕಿ
ಅನುಷಾ, ಕೊಕ್ಕರ್ಣೆ ಎಸ್‌ಎಲ್‌ಆರ್‌ಎಂ ಘಟಕದ ನಿರ್ವಾಹಕಿ   

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಹಿಂದೆ ಸ್ತ್ರೀ ಶಕ್ತಿಯ ಪಾಲು ದೊಡ್ಡದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಘನ ಹಾಗೂ ದ್ರವ ಸಂಪನ್ಮೂಲ ಕೇಂದ್ರಗಳನ್ನು (ಎಸ್‌ಎಲ್‌ಆರ್‌ಎಂ) ಯಶಸ್ವಿಯಾಗಿ ಮುನ್ನಡೆಸುತ್ತಿರುವ ಮಹಿಳೆಯರು ಸ್ವಚ್ಛ ಭಾರತದ ರಾಯಭಾರಿಗಳಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಮನೆಗಳಿಂದ ಹಸಿ ಹಾಗೂ ಒಣ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ಮಹಿಳೆಯರು ಕಸವನ್ನೇ ಸಂಪನ್ಮೂಲವನ್ನಾಗಿ ಬದಲಾಯಿಸಿದ್ದು, ಹಳ್ಳಿಗಳಲ್ಲಿ ಸ್ವಚ್ಛತೆಯ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಎಸ್‌ಎಲ್‌ಆರ್‌ಎಂ ಘಟಕಗಳ ನಿರ್ವಹಣೆಯ ಹೊಣೆ ಹೊತ್ತು ನೂರಾರು ಮಹಿಳೆಯರ ಬದುಕಿಗೆ ಆಧಾರವಾಗಿದ್ದಾರೆ. ಪುರುಷರಿಗೆ ಕಡಿಮೆ ಇಲ್ಲದಂತೆ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯಿತಿಗಳಿದ್ದು, ಹಸಿ ಹಾಗೂ ಒಣ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ. ಬಹುತೇಕ ಪಂಚಾಯಿತಿಗಳಲ್ಲಿ ಎಸ್‌ಎಲ್‌ಆರ್‌ಎಂ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯ 155 ಪಂಚಾಯಿತಿಗಳ ಪೈಕಿ 60 ಪಂಚಾಯಿತಿಗಳಲ್ಲಿರುವ ಎಸ್‌ಎಲ್‌ಆರ್‌ಎಂ ಘಟಕಗಳ ನಿರ್ವಹಣೆಯ ಹೊಣೆಯನ್ನು ಸಂಪೂರ್ಣವಾಗಿ ಮಹಿಳಾ ಸ್ವಸಹಾಯ ಸಂಘಗಳೇ ವಹಿಸಿಕೊಂಡಿರುವುದು ವಿಶೇಷ.

ADVERTISEMENT

250ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ:

60 ಪಂಚಾಯಿತಿಗಳಲ್ಲಿರುವ ಎಸ್‌ಎಲ್‌ಆರ್‌ಎಂ ಘಟಕಗಳಲ್ಲಿ 250ಕ್ಕೂ ಹೆಚ್ಚು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ದಿನ ಮನೆ ಮನೆಗಳಿಂದ ಕಸ ಸಂಗ್ರಹಿಸುವುದು, ಎಲ್‌ಎಲ್‌ಆರ್‌ಎಂ ಘಟಕಗಳಿಗೆ ತ್ಯಾಜ್ಯವನ್ನು ತಂದು ಬೇರ್ಪಡಿಸುವುದು, ಮಾರಾಟ ಮಾಡುವುದು, ಹಣಕಾಸು ನಿರ್ವಹಣೆ, ವೇತನ ಹಂಚಿಕೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಆರ್ಥಿಕ ಸ್ವಾವಲಂಬನೆ:

ಮಹಿಳೆಯರು ಮುನ್ನಡೆಸುತ್ತಿರುವ 60 ಎಸ್‌ಎಲ್‌ಆರ್‌ಎಂ ಘಟಕಗಳ ಪೈಕಿ 30ಕ್ಕೂ ಹೆಚ್ಚು ಘಟಕಗಳು ಸಂಪೂರ್ಣವಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಿವೆ. ಗ್ರಾಮ ಪಂಚಾಯಿತಿಯಿಂದ ಬಿಡಿಗಾಸು ಆರ್ಥಿಕ ನೆರವು ಪಡೆಯದೆ ಕಸ ಸಂಗ್ರಹಕ್ಕೆ ಪ್ರತಿಯಾಗಿ ಮನೆಗಳಿಂದ ಸಂಗ್ರಹಿಸುವ ಮಾಸಿಕ ಚಂದಾ ಹಣ ಹಾಗೂ ಒಣ ತ್ಯಾಜ್ಯ ಮಾರಾಟದಿಂದ ಬರುವ ಹಣವನ್ನು ಸಿಬ್ಬಂದಿ ವೇತನ, ಘಟಕಗಳ ನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದಾರೆ.

ವಾಹನ ಚಾಲಕರೂ ಮಹಿಳೆಯರೇ:

ಪುರುಷರಿಗಷ್ಟೆ ಸೀಮಿತ ಎಂಬತಿದ್ದ ಚಾಲಕರ (ಡ್ರೈವರ್‌) ವೃತ್ತಿಯನ್ನು ಮಹಿಳೆಯರು ಯಶಸ್ವಿಯಾಗಿ ನಿಭಾಯಿಸುತ್ತಿದ್ದು, ಕಸ ಸಂಗ್ರಹಿಸುವ ವಾಹನಗಳ ಚಾಲಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 60 ಮಹಿಳೆಯರಿಗೆ ಜಿಲ್ಲಾ ಪಂಚಾಯಿತಿಯಿಂದ ಕಸದ ವಾಹನಗಳನ್ನು ಓಡಿಸುವ ತರಬೇತಿ ನೀಡಲಾಗಿದ್ದು, ಈಗಾಗಲೇ ಎಲ್ಲರೂ ಕಲಿಕಾ ಚಾಲನಾ ಪರವನಾಗಿ (ಎಲ್‌ಎಲ್‌ಆರ್‌) ಪಡೆದುಕೊಂಡಿದ್ದಾರೆ. ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್‌ 8ರಂದು ಡಿಎಲ್‌ (ಚಾಲನಾ ಪರವಾನಗಿ) ಪಡೆದುಕೊಳ್ಳಲಿದ್ದಾರೆ.

ಸ್ವಚ್ಛ ಭಾರತ ಮಿಷನ್‌ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಮಹಿಳೆಯರು ಪ್ರಮುಖ ಕಾರಣ. ಪುರುಷರಿಗಿಂತ ಕಡಿಮೆ ಇಲ್ಲದಂತೆ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಎಸ್‌ಎಲ್‌ಆರ್‌ಎಂ ಘಟಕಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಕಸ ಸಂಗ್ರಹಿಸುವ ವಾಹನಗಳನ್ನು ಓಡಿಸುವುದನ್ನೂ ಕಲಿತು ಸ್ವಾವಲಂಬಿಗಳಾಗಿದ್ದಾರೆ ಎಂದು ಸ್ವಚ್ಛ ಭಾರತ್ ಮಿಷನ್‌ ಕಾರ್ಯಕ್ರಮದ ಅಧಿಕಾರಿ ರಘುನಾಥ್‌ ಸಂತಸ ವ್ಯಕ್ತಪಡಿಸಿದರು.

‘ಮಹಿಳಾ ಶಕ್ತಿ ಅನಾವರಣ’

ಮನೆಯನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳುವ ಮಹಿಳೆಯರು ಗ್ರಾಮಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳಬಲ್ಲರು ಎಂದು ಜಿಲ್ಲೆಯ 60 ಗ್ರಾಮ ಪಂಚಾಯಿತಿಗಳಲ್ಲಿ ಎಲ್‌ಎಲ್‌ಆರ್‌ಎಂ ಘಟಕಗಳ ನಿರ್ವಹಣೆಯ ಹೊಣೆಯನ್ನು ಸ್ತ್ರೀಶಕ್ತಿ ಸಂಘಗಳಿಗೆ ನೀಡಲಾಯಿತು. ನಿರೀಕ್ಷೆಯಂತೆ ಮಹಿಳೆಯರು ಗ್ರಾಮಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಎಸ್‌ಎಲ್‌ಆರ್‌ಎಂ ಘಟಕಗಳು ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಣೆಯಾಗಬೇಕು ಎಂಬ ಉದ್ದೇಶದಿಂದ 60 ಮಹಿಳೆಯರಿಗೆ ಕಸ ಸಂಗ್ರಹ ವಾಹನಗಳನ್ನು ಓಡಿಸುವ ತರಬೇತಿ ನೀಡಲಾಗಿದೆ. ಮಾರ್ಚ್‌ 8ರಂದು ಮಹಿಳಾ ದಿನವೇ ಅವರಿಗೆ ಡಿಎಲ್ ವಿತರಿಸಲಾಗುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

–ಡಾ.ವೈ.ನವೀನ್ ಭಟ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಬದುಕು ರೂಪಿಸಿದ ‘ತ್ಯಾಜ್ಯ’

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಹುಟ್ಟಿದ ಊರನ್ನು ಸ್ವಚ್ಛಗೊಳಿಸಲು ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ. ಕೆಲಸದಲ್ಲಿ ಮೇಲು ಕೀಳು ಎಂಬುದಿಲ್ಲ. ಘಟಕದ ನಿರ್ವಹಣೆಯ ಹೊಣೆ ಇದ್ದರೂ ಕಸ ಸಂಗ್ರಹಿಸುತ್ತೇನೆ, ತ್ಯಾಜ್ಯ ಬೇರ್ಪಡಿಸುತ್ತೇನೆ, ಅಗತ್ಯಬಿದ್ದಾಗ ಚಾಲಕಿಯಾಗಿ ಕಸ ಸಂಗ್ರಹಿಸುವ ವಾಹನ ಓಡಿಸುತ್ತೇನೆ. ಕಸ ಕೇವಲ ತ್ಯಾಜ್ಯವಲ್ಲ; ಬದಕನ್ನು ರೂಪಿಸಿದ ಸಂಪನ್ಮೂಲ.

–ಸೀಮಾ, ಪಾಂಡೇಶ್ವರ ಎಸ್‌ಎಲ್‌ಆರ್‌ಎಂ ಘಟಕದ ಉಸ್ತುವಾರಿ‌

‘ಜೀವನ ಬದಲಿಸಿದ ಎಸ್‌ಎಲ್‌ಆರ್‌ಎಂ’

ಪರಿಸರ ಕಾಳಜಿ ಇಷ್ಟದ ಕಾರ್ಯವಾಗಿದ್ದು, ಅದಕ್ಕೆ ಪೂರಕವಾಗಿ ಮರವಂತೆಯ ಎಲ್‌ಎಲ್‌ಆರ್‌ಎಂ ಘಟಕದ ನಿರ್ವಹಣೆ ಹೊಣೆ ಸಿಕ್ಕಿರುವುದು ಖುಷಿ ತಂದಿದೆ. ಆರಂಭದಲ್ಲಿ ಕಸ ಸಂಗ್ರಹಿಸಲು ಹೋದಾಗ ಸಾರ್ವಜನಿಕರು ವ್ಯಂಗ್ಯ ಮಾಡಿದರು. ಕಸವನ್ನು ಕೊಟ್ಟು, ಹಣವನ್ನೂ ಕೊಡಬೇಕೆ ಎಂದು ವಿರೋಧಿಸಿದರು. ಈಗ ಪರಿಸ್ಥಿತಿ ಬದಲಾಗಿದ್ದು ಮುಂಗಡ ಕೊಡುತ್ತಿದ್ದಾರೆ. ಸ್ವಚ್ಚ ಭಾರತ್ ಮಿಷನ್ ಯೋಜನೆ ಬದುಕನ್ನು ಬದಲಾಯಿಸಿದೆ. ಮಾತನಾಡಲು ಭಯಪಡುತ್ತಿದ್ದ ನಾನು ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸುವ ಸಂಪನ್ಮೂಲ ವ್ಯಕ್ತಿಯಾಗಿದ್ದೇನೆ. ಘಟಕದ ಸಾಧನೆಯ ಹಿಂದೆ ಸಹ ನಿರ್ವಾಹಕಿ ಸುಜಾತಾ ಅವರ ಶ್ರಮವೂ ಇದೆ.

–ಸುನಿತಾ, ಮರವಂತೆ ಎಸ್‌ಎಲ್‌ಆರ್‌ಎಂ ಘಟಕದ ನಿರ್ವಾಹಕಿ

‘ಆರಂಭದಲ್ಲಿ ಅಸಹಕಾರ; ಈಗ ಸಹಕಾರ’

ಎಸ್‌ಎಲ್‌ಆರ್‌ಎಂ ಘಟಕಗಳು ಆರಂಭವಾದಾಗ ಸಾರ್ವಜನಿಕರು ಸಹಕಾರ ನೀಡಲಿಲ್ಲ. ಸಾರ್ವಜನಿಕರಿಗೆ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯ ಮಹತ್ವ ತಿಳಿಸಿದ ಬಳಿಕ ಕಸ ನೀಡಲು ಶುರುಮಾಡಿದ್ದಾರೆ. ಒಂದು ದಿನ ಕಸ ಸಂಗ್ರಹಿಸಲು ಹೋಗದಿದ್ದರೆ ಕರೆ ಮಾಡಿ ವಿಚಾರಿಸುತ್ತಾರೆ. ಆರಂಭದಲ್ಲಿ ಆರ್ಥಿಕ ಸಮಸ್ಯೆಯಲ್ಲಿದ್ದ ಕೊಕ್ಕರ್ಣೆ ಘಟಕ ಈಗ ಸಂಪೂರ್ಣ ಆರ್ಥಿಕ ಸ್ವಾವಲಂಬನೆ ಸಾಧಿಸಿದೆ. ತ್ಯಾಜ್ಯ ಸಂಗ್ರಹಿಸುವ ಕಾರ್ಯ ಖುಷಿಕೊಟ್ಟಿದ್ದು, ಬದುಕಿಗೆ ಆಧಾರವಾಗಿದೆ.

–ಅನುಷಾ, ಕೊಕ್ಕರ್ಣೆ ಎಸ್‌ಎಲ್‌ಆರ್‌ಎಂ ಘಟಕದ ನಿರ್ವಾಹಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.