ADVERTISEMENT

ತೆರೆಮರೆಯ ಪ್ರವಾಸಿ ತಾಣಗಳು ಬೆಳಕಿಗೆ ಬರಲಿ

ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಶಾಸಕ ಕೆ.ರಘುಪತಿ ಭಟ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 12:58 IST
Last Updated 27 ಸೆಪ್ಟೆಂಬರ್ 2022, 12:58 IST
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಿಂದ ಮಲ್ಪೆ ಬೀಚ್‌ವರೆಗೆ ನಡೆದ ಬೈಕ್‌ ರ‍್ಯಾಲಿಗೆ ಶಾಸಕ ರಘುಪತಿ ಭಟ್‌ ಚಾಲನೆ ನೀಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಿಂದ ಮಲ್ಪೆ ಬೀಚ್‌ವರೆಗೆ ನಡೆದ ಬೈಕ್‌ ರ‍್ಯಾಲಿಗೆ ಶಾಸಕ ರಘುಪತಿ ಭಟ್‌ ಚಾಲನೆ ನೀಡಿದರು.   

ಉಡುಪಿ: ಜಿಲ್ಲೆಯಲ್ಲಿ ಪ್ರವಾಸಿಗರಿಗೆ ತೆರೆದುಕೊಳ್ಳದಂತಹ ಬೆಳಕಿಗೆ ಬಾರದಂತಹ ಬಹಳಷ್ಟು ಪ್ರವಾಸಿ ತಾಣಗಳಿದ್ದು ಅವುಗಳ ಬಗ್ಗೆ ಪ್ರವಾಸಿಗರಿಗೆ ಪ್ರಚಾರ ಮಾಡುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಮಂಗಳವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕರಾವಳಿ ಪ್ರವಾಸೋದ್ಯಮ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕೃಷ್ಣಮಠ, ಮಲ್ಪೆ ಬೀಚ್, ಸೇಂಟ್ ಮೇರಿಸ್ ದ್ವೀಪದಂತಹ ಪ್ರಸಿದ್ಧ ಪ್ರವಾಸಿ ತಾಣಗಳ ಹೊರತಾಗಿಯೂ ಸೂರಾಲು ಮಣ್ಣಿನ ಅರಮನೆಯಂತಹ ಹೆಚ್ಚು ಬೆಳಕಿಗೆ ಬಾರದಂತಹ ಹಲವು ಪ್ರವಾಸಿ ಸ್ಥಳಗಳಿವೆ. ಅಂತಹ ತಾಣಗಳ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಆಗಬೇಕು.

ADVERTISEMENT

ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಿ ಸಿಆರ್‌ಝೆಡ್ ನಿಯಮಗಳಲ್ಲಿ ರಿಯಾಯಿತಿ ದೊರೆತಿರುವುದು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಕೋವಿಡ್ ನಂತರ ವಿದೇಶಗಳಿಗೆ ಪ್ರವಾಸ ಮಾಡುವವರ ಸಂಖ್ಯೆ ಕುಸಿತವಾಗಿದ್ದು, ರಾಷ್ಟ್ರದೊಳಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರ ಹೆಚ್ಚಿನ ಒಲವು ತೋರುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ಉಡುಪಿ ಜಿಲ್ಲೆಯ ರಜತ ಮಹೋತ್ಸದ ಭಾಗವಾಗಿ ಜಿಲ್ಲೆಯ ಅಭಿವೃದ್ಧಿಯ ಜತೆಗೆ ಪ್ರವಾಸಿ ತಾಣಗಳ ಬಗ್ಗೆ ರಾಜ್ಯದಾದ್ಯಂತ ಸಾರ್ವಜನಿಕರಿಗೆ ಮಾಹಿತಿ ನೀಡಿ ಉಡುಪಿಗೆ ಆಹ್ವಾನ ನೀಡಲು ಎಲ್‌ಇಡಿ ವಿಶೇಷ ರಥವನ್ನು ಸಿದ್ಧಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇಂತಹ ಪ್ರಯತ್ನಗಳು ಸಹಕಾರಿಯಾಗಲಿವೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಗೆ ನಿಯಮಗಳಲ್ಲಿ ಸರಳೀಕರಣ ಅಗತ್ಯವಾಗಿದ್ದು, ಸಿಆರ್‌ಝೆಡ್ ನಿಯಮಗಳಲ್ಲಿ ಈಗಾಗಲೇ ವಿನಾಯತಿ ದೊರೆತಿರುವುದರಿಂದ ಹೋಂ ಸ್ಟೇಗಳಿಗೆ ಅನುಮತಿ ನೀಡುವ ವಿಧಾನವನ್ನು ಆನ್‌ಲೈನ್ ಮೂಲಕ ಸರಳೀಕರಣಗೊಳಿಸಲಾಗುತ್ತಿದೆ.

ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲ ವಿಧದ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಪ್ರವಾಸೋದ್ಯಮ ಇಲಾಖೆಯ ಇನ್‌ಸ್ಟಾಗ್ರಾಂ ಪುಟವನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲರ ಸಹಕಾರದಿಂದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ, ಕರಾವಳಿ ಪ್ರವಾಸೋದ್ಯಮ ಸಂಘಟನೆಗಳ ಪದಾಧಿಕಾರಿಗಳು ಇದ್ದರು. 60ಕ್ಕೂ ಅಧಿಕ ರೈಡರ್‌ಗಳಿಂದ ಬೈಕ್ ರ‍್ಯಾಲಿ ಮತ್ತು ವಿಂಟೇಜ್ ಕಾರುಗಳ ರ‍್ಯಾಲಿ ನಡೆಯಿತು.

ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಲು 15ಕ್ಕೂ ಹೆಚ್ಚು ಬ್ಲಾಗರ್‌ಗಳು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.