ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್‌: ಜಿಲ್ಲಾಧಿಕಾರಿ ಜಿ.ಜಗದೀಶ್‌

ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸಹಕಾರಿ; ಜಿಲ್ಲಾಧಿಕಾರಿ ಜಿ.ಜಗದೀಶ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 14:39 IST
Last Updated 27 ಸೆಪ್ಟೆಂಬರ್ 2020, 14:39 IST
ಭಾನುವಾರ ಮಲ್ಪೆ ಬೀಚ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿದರು.
ಭಾನುವಾರ ಮಲ್ಪೆ ಬೀಚ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿದರು.   

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ವಿಷನ್‌ ಡಾಕ್ಯುಮೆಂಟ್‌ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಭಾನುವಾರ ಮಲ್ಪೆ ಬೀಚ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಮಗ್ರ ಯೋಜನೆಗಳನ್ನು ಒಳಗೊಂಡಿರುವ ವಿಷನ್‌ ಡಾಕ್ಯುಮೆಂಟ್ ತಯಾರಿಸುತ್ತಿರುವ ರಾಜ್ಯದ ಮೊದಲ ಜಿಲ್ಲೆ ಉಡುಪಿಯಾಗಿದೆ. ವರದಿ ಅಂತಿಮ ಹಂತದಲ್ಲಿದ್ದು, ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ಪ್ರವಾಸೋದ್ಯಮಕ್ಕೆ ಆದ್ಯತೆ ದೊರೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಪ್ರವಾಸೋದ್ಯಮವನ್ನು ಉತ್ತುಂಗಕ್ಕೇರಿಸುವ ಆಶಯ ಇದೆ ಎಂದರು.

ADVERTISEMENT

ಬ್ಲೂ ಫ್ಲಾಗ್ ಗರಿ:

ಪಡುಬಿದ್ರಿಯ ಎಂಡ್‌ ಪಾಯಿಂಟ್‌ ಬೀಚ್‌ಗೆ ಅಂತರರಾಷ್ಟ್ರೀಯ ಮನ್ನಣೆಯಾದ ಬ್ಲೂ ಫ್ಲಾಗ್ ಮಾನ್ಯತೆ ಶೀಘ್ರ ಸಿಗಲಿದೆ. ರಾಷ್ಟ್ರೀಯ ಜ್ಯೂರಿಗಳು ಬೀಚ್‌ನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.

ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಹಾಗೂ ಹೊಸತನ ನೀಡಬೇಕು. ನೆರೆ ರಾಜ್ಯಗಳ ಹಾಗೂ ವಿದೇಶಗಳ ಜನರು ಉಡುಪಿಯತ್ತ ಆಕರ್ಷಿತರಾಗಬೇಕು. ಈ ನಿಟ್ಟಿನಲ್ಲಿ ಗೋವಾದಿಂದ ಉಡುಪಿ ಕಡೆಗೆ ಮುಖಮಾಡದೆ ಮಂಗಳೂರು, ಕೇರಳ ಕಡೆಗೆ ಹೋಗುತ್ತಿರುವ ಪ್ರವಾಸಿಗರನ್ನು ಉಡುಪಿಯತ್ತ ಸೆಳೆಯುವಂತೆ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಪ್ರೊ.ಈಶ್ವರ್ ಮಾತನಾಡಿ, ‘ಪ್ರವಾಸಿಗರ ಬೇಡಿಕೆ ಹಾಗೂ ಪೂರೈಕೆಗೆ ಒತ್ತು ನೀಡಬೇಕಿದೆ. ಪ್ರವಾಸಿಗರು ಸಾಮಾನ್ಯವಾಗಿ ಪ್ರವಾಸ ಮಾಡುವ ಭಾಷೆ-ಸಂಸ್ಕೃತಿ, ಶೈಲಿ, ಅಲ್ಲಿನ ಸ್ಥಳೀಯ ತಿನಿಸುಗಳನ್ನು ಸವಿಯಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಪ್ರವಾಸೋದ್ಯಮ ಅಭಿವೃದ್ಧಿ ಸಾದ್ಯ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಅಧ್ಯಕ್ಷ ರಾಘವೇಂದ್ರ ಕಿಣಿ ಮಾತನಾಡಿದರು. ಯೋಧರಿಗೆ ಕೊರೊನಾ ಮಾಸ್ಕ್‌ ಪೂರೈಸಿದ ಇಶಿತಾ ಆಚಾರ್‌ಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೀಚ್‌ನ ಸುತ್ತ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಸಿಇಒ ಪ್ರೀತಿ ಗೆಹ್ಲೋಟ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ, ಭಾರತ್ ಸೌಟ್ಸ್‌ ಹಾಗೂ ಗೈಡ್ಸ್‌ನ ಜಿಲ್ಲಾ ಅಧಿಕಾರಿ ಡಾ.ವಿಜಯೇಂದ್ರ, ನಗರಸಭಾ ಸದಸ್ಯರಾದ ಶ್ರೀಶ ಕೊಡವೂರು, ಹಾಗೂ ಸುಂದರ್ ಕಲ್ಮಾಡಿ, ಆ್ಯಡ್ಲಿನ್ ಇದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ್‌ ಸ್ವಾಗತಿಸಿದರು. ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.