
‘ತಾಮ್ರಧ್ವಜ ಕಾಳಗ’ ಯಕ್ಷಗಾನ ಪ್ರದರ್ಶನ | ಯಕ್ಷ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ
ಉಡುಪಿ: ‘ಯಕ್ಷಗಾನ ಕ್ಷೇತ್ರದಲ್ಲಿ ದುಡಿದ ಕಲಾತಪಸ್ವಿಗಳ ಬಗ್ಗೆ ಸಮಾಜದಲ್ಲಿ ಹಿರಿಯರೆನಿಸಿಕೊಂಡವರು ಈಚೆಗೆ ಕೀಳಭಿರುಚಿಯ ಮಾತನ್ನು ಆಡಿದ್ದಾರೆ. ಅದು ಆಕಾಶವನ್ನು ನೋಡಿ ಉಗುಳಿದ ಹಾಗಾಯಿತು. ಅಂತಹ ಮಾತುಗಳ ಬಗ್ಗೆ ಕಲಾವಿದರು ತಲೆಕೆಡಿಸಿಕೊಳ್ಳಬೇಡಿ’ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಯಕ್ಷಗಾನ ಕಲಾರಂಗದ ವತಿಯಿಂದ ನಗರದ ಐವೈಸಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2025 ನೇ ಸಾಲಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅವರ ಹೇಳಿಕೆಯಿಂದ ಸಮಾಜದಲ್ಲಿ ಯಾವ ಕಲಾರಸಿಕರೂ ಕಿಂಚಿತ್ ವಿಚಲಿತರಾಗಿಲ್ಲ. ಎಲ್ಲರೂ ಕೂಡ ಕಲಾವಿದರ ಸಾಧನೆಯನ್ನು ಗಮನಿಸಿ ಗೌರವಿಸುತ್ತಿದ್ದಾರೆ’ ಎಂದರು.
‘ಒಂದು ಸಂಸ್ಥೆ ಮತ್ತು ಅದರ ಪದಾಧಿಕಾರಿಗಳು ಹೇಗೆ ಇರಬೇಕು ಎಂಬುದಕ್ಕೆ ಯಕ್ಷಗಾನ ಕಲಾರಂಗ ಸಂಸ್ಥೆ ಹಾಗೂ ಅದರ ಪದಾಧಿಕಾರಿಗಳು ಮಾದರಿ. ಯಕ್ಷಗಾನ ಕಲಾವಿದರ ಉನ್ನತಿಗಾಗಿ ಸಂಸ್ಥೆಯು ನಿರಂತರ ಶ್ರಮಿಸುತ್ತಿದೆ. ಇದು ಶ್ಲಾಘನೀಯ’ ಎಂದು ಹೇಳಿದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ‘ಯಕ್ಷಗಾನ ಕಲಾರಂಗ ಸಂಸ್ಥೆಯು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ ಬದಲಾಗಿ ಕಲಾವಿದರ ಮಕ್ಕಳಿಗೆ ನೆರವು, ಮನೆ ನಿರ್ಮಾಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ’ ಎಂದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಪ್ರಶಸ್ತಿ ಪ್ರದಾನ ಮಾಡಿದರು. ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಭಟ್, ಕಾರ್ಕಳದ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ, ಹರೀಶ್ ರಾಯಸ್, ವೈದ್ಯ ಡಾ. ಕಬ್ಯಾಡಿ ಹರಿರಾಮ ಆಚಾರ್ಯ, ಕೆ. ಮಹೇಶ್ ಉಡುಪ, ಪಡಾರು ರಾಮಕೃಷ್ಣ ಶಾಸ್ತಿ, ಲೀಲಾಕ್ಷ ಬಿ.ಕರ್ಕೇರಾ ಉಪಸ್ಥಿತರಿದ್ದರು. ಅಧ್ಯಕ್ಷ ಗಂಗಾಧರ ರಾವ್ ಸ್ವಾಗತಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ವಿಶ್ವೇಶತೀರ್ಥ ಪ್ರಶಸ್ತಿಯನ್ನು ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿ ಸಂಸ್ಥೆಗೆ ಹಾಗೂ ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರಿಗೆ ಪ್ರದಾನ ಮಾಡಲಾಯಿತು.
ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ, ಕಕ್ಕುಂಜೆ ಗೋಪಾಲ ಬಳೆಗಾರ, ಕೊಡೇರಿ ಕೃಷ್ಣ, ಕಲ್ಲಗುಡ್ಡೆ ಲಕ್ಷ್ಮಣ ಪೂಜಾರಿ, ರಾಧಾಕೃಷ್ಣ ಭಟ್ ಸೂರನಕೇರಿ, ಸುರೇಶ ಉಪ್ಪೂರ, ಕೃಷ್ಣಯ್ಯ ಬಿ. ಆಚಾರ್ ಬಿದ್ಕಲ್‌ಕಟ್ಟೆ, ಮನೋಹರ ರಾವ್ ಕೆ.ಜಿ., ಪ್ರಭಾಕರ ಶೆಟ್ಟಿ, ವಿಷ್ಣುಮಂಜಪ್ಪ ಆಚಾರಿ, ಲಕ್ಷ್ಮೀನಾರಾಯಣ ಸಂಪ, ಸಂಜೀವ ಶೆಟ್ಟಿ ಆಜ್ರಿಹರ, ಸುಣ್ಣಂಬಳ ವಿಶ್ವೇಶ್ವರ ಭಟ್, ಸುರೇಶ್ ರಾವ್, ಅಪ್ಪಯ್ಯ ಮಣಿಯಾಣಿ, ಕೃಷ್ಣಮೂರ್ತಿ ಉರಾಳ, ರಾಮ ಕೇಶವ ಗೌಡ, ಕಡಬ ರಾಮಚಂದ್ರ ರೈ, ಉಮೇಶ ಮೊಯಿಲಿ, ಶಿವಣ್ಣ ಶೆಟ್ಟಿ ಸರಪಾಡಿ, ಮೊಹನ ನಾಯ್ಕ, ಬಲಿಪ ವಿಶ್ವೇಶ್ವರ ಭಟ್, ಮಹಾಬಲ ಭಟ್ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.