ADVERTISEMENT

ಕೋವಿಡ್‌ ಜನಜಾಗೃತಿ ಯಕ್ಷಾಮೃತ

​ಪ್ರಜಾವಾಣಿ ವಾರ್ತೆ
Published 23 ಮೇ 2020, 12:06 IST
Last Updated 23 ಮೇ 2020, 12:06 IST
ಚಿತ್ರ( ಐರೋಡಿ) ಬ್ರಹ್ಮಾವರ ಬಳಿಯ ಐರೋಡಿಯಲ್ಲಿ ಯಕ್ಷಾಮೃತ ಕಾರ್ಯಕ್ರಮ ನಡೆಯಿತು.
ಚಿತ್ರ( ಐರೋಡಿ) ಬ್ರಹ್ಮಾವರ ಬಳಿಯ ಐರೋಡಿಯಲ್ಲಿ ಯಕ್ಷಾಮೃತ ಕಾರ್ಯಕ್ರಮ ನಡೆಯಿತು.   

ಬ್ರಹ್ಮಾವರ: ಕೋವಿಡ್‌ ಲಾಕ್‌ಡೌನ್‌ ಸಂಕಷ್ಟ ಪರಿಸ್ಥಿತಿಯಲ್ಲಿ ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡುವ ಉದ್ದೇಶದಿಂದ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರದ ಆಶ್ರಯದಲ್ಲಿ ಕಲಾಕೇಂದ್ರದ ಶಿಷ್ಯವೃಂದವು ‘ಯಕ್ಷಾಮೃತ’ ಎಂಬ ‘ಕೊರೊನಾ ಯಕ್ಷಗಾಯನ-ಗಾನಾಮೃತ’ ಶನಿವಾರ ನಡೆಯಿತು.

ವಿಷ್ಣುಮೂರ್ತಿ ಬೇಳೂರು ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆ.ಪಿ.ಹೆಗಡೆ, ನಾರಾಯಣ ಶಬರಾಯ, ರಾಘವೇಂದ್ರ ಮಯ್ಯ, ಸುರೇಶ ಶೆಟ್ಟಿ, ಉಮೇಶ ಸುವರ್ಣ ಕಾನಗೋಡು ಪರಮೇಶ್ವರ ನಾಯ್ಕ, ಉದಯಕುಮಾರ ಹೋಸಾಳ, ಕರುಣಾಕರ ಶೆಟ್ಟಿ, ಗಜೇಂದ್ರ ಶೆಟ್ಟಿ, ಗಣೇಶ ಆಚಾರ್, ಎನ್.ಜಿ.ಹೆಗಡೆ, ಸೂರಾಲು ರವಿ ಕುಮಾರ್, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ರಾಕೇಶ ಮಲ್ಯ ಭಾಗವಹಿಸಿದ್ದರು.

ವಿಶಿಷ್ಟ ಕಾರ್ಯಕ್ರಮ: ‘ಪ್ರಜಾವಾಣಿ’ ಫೇಸ್‌ಬುಕ್ ಪೇಜ್‌ನಲ್ಲಿ ಶನಿವಾರ ಬೆಳಿಗ್ಗೆ ನೇರ ಪ್ರಸಾರವಾದ ಈ ಕಾರ್ಯಕ್ರಮವನ್ನು ಸಹಸ್ರಾರು ಮಂದಿ ವೀಕ್ಷಿಸಿದರು. ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಎಂದ ಕೂಡಲೇ ನೂರಾರು ಯಕ್ಷ ಕಲಾಭಿಮಾನಿಗಳು ಬಂದು ವೀಕ್ಷಿಸುವುದು ಸಹಜ. ಆದರೆ, ಶನಿವಾರ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಅವರ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೈಕ್ ಆಪರೇಟರ್ಸ್‌, ಛಾಯಾಗ್ರಾಹಕರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಒಂದೆರಡು ಕಿ.ಮೀ. ವರೆಗೆ ಚೆಂಡೆ, ಭಾಗವತಿಕೆಯ ಧ್ವನಿಯನ್ನು ಗ್ರಾಮಸ್ಥರು ತಮ್ಮ ಮನೆಯಲ್ಲಿ ಇದ್ದು, ಉಳಿದವರು ಫೇಸ್ ಬುಕ್‌ನಲ್ಲಿ ಕೇಳಿ ನೋಡಿ ಆಸ್ವಾದಿಸಿದರು.

ADVERTISEMENT

ಗಮನ ಸೆಳೆದ ಛಾಯಾಗ್ರಾಹಕ: ಇಳಿ ವಯಸ್ಸಿನಲ್ಲೂ ಸಾಲಿಗ್ರಾಮ, ಕೋಟ ಪರಿಸರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳನ್ನು ಸೆರೆಹಿಡಿದು ನೇರವಾಗಿ ಫೇಸ್‌ಬುಕ್ ಮೂಲಕ ಜನರಿಗೆ ತಲುಪಿಸುತ್ತಿರುವ ಶ್ರೀನಿವಾಸ ಉಪಾಧ್ಯ ಶನಿವಾರ ನಡೆದ ಯಕ್ಷಾಮೃತ ಕಾರ್ಯಕ್ರಮವನ್ನು ಸತತ 3ಗಂಟೆ ನೇರ ಪ್ರಸಾರ ಮಾಡಿರುವುದು ವಿಶೇಷವಾಗಿತ್ತು.

‘ಪ್ರಜಾವಾಣಿ’ ವೇದಿಕೆ: ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದವರೆಗೆ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರು ತಮ್ಮನ್ನು ತೊಡಗಿಸಿಕೊಂಡು ಬ್ಯುಸಿಯಾಗಿರುತ್ತಿದ್ದರು. ಆದರೆ ಈ ಬಾರಿ ಲಾಕ್‌ಡೌನ್‌ನಿಂದ ಕಾರ್ಯಕ್ರಮ ನೀಡಲಾಗದೆ ಕಂಗಾಲಾಗಿದ್ದರು. ಈ ಸಮಯದಲ್ಲಿ ‘ಪ್ರಜಾವಾಣಿ’ ಮತ್ತು ಯಕ್ಷಗಾನ ಕಲಾಕೇಂದ್ರ ಈ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಶ್ಲಾಘನೀಯ ಎಂಬ ಮೆಚ್ಚುಗೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.