ADVERTISEMENT

ಉಡುಪಿ: 18 ಕಲಾ ಸಾಧಕರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 15:30 IST
Last Updated 26 ಡಿಸೆಂಬರ್ 2020, 15:30 IST
ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.   

ಉಡುಪಿ: ಬದುಕು ಬೇರೆ, ಭಗವಂತನ ಆರಾಧನೆ ಬೇರೆಯಾಗಬಾರದು. ಬದುಕಿನುದ್ದಕ್ಕೂ ದೇವರ ಸ್ಮರಣೆ ಮಾಡಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮನುಷ್ಯ ದೇವರ ಪೂಜೆಗೆ ಹಾಗೂ ಬದುಕಿಗೆ ಸಮಯ ನಿಗದಿಪಡಿಸಿ ವಿಂಗಡಿಸಿದ್ದಾನೆ. ದೇವರ ಪೂಜೆಗೆ ಸಮಯ ಮೀಸಲಿಟ್ಟಿದ್ದಾನೆ. ಜೀವನದ ಪ್ರತಿ ಕ್ಷಣವೂ ದೇವರಿಗೆ ಮೀಸಲಾಗಬೇಕು ಎಂದು ಸ್ವಾಮೀಜಿ ಹೇಳಿದರು.

ಭಗವಂತನ ಸ್ಮರಣೆಯಿಂದ ಜೀವನ ನಡೆಸಿದರೆ ಯಾವುದೇ ಅವ್ಯವಹಾರಗಳಿಗೆ ಎಡೆ ಇರುವುದಿಲ್ಲ. ಸ್ವಸ್ಥ ಹಾಗೂ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ದಾರಿಯಾಗುತ್ತದೆ. ಯಕ್ಷಗಾನ ಕಲಾರಂಗದ ಕಲಾ ಪೋಷಣೆಗೆ ದಾನಿಗಳು ಬೆನ್ನೆಲುಬಾಗಿ ನಿಂತಿರುವುದು ಅಭಿನಂದನಾರ್ಹ ಎಂದರು.

ADVERTISEMENT

ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ‘ಯಕ್ಷಗಾನ ಕಲಾರಂಗ ಸಂಸ್ಥೆಯು ವಿಶ್ವೇಶತೀರ್ಥ ಶ್ರೀಗಳ ಅಪೇಕ್ಷೆಯಂತೆ ಕಲಾ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ಸಾಗಲಿ. ಕಲೆಯನ್ನು ಎತ್ತಿಹಿಡಿದು ಸಮಾಜಕ್ಕೆ ಮಾರ್ಗದರ್ಶಿಯಾಗಿ ಬೆಳೆಯಲಿ ಎಂದು ಆಶಿಸಿದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ‘ಯಕ್ಷಗಾನ ಕಲಾರಂಗ ಸಂಸ್ಥೆ 1975ರಲ್ಲಿ ಜನ್ಮತಾಳಿದ್ದು, 1993ರಿಂದ ಪ್ರಶಸ್ತಿ ನೀಡುವ ಪರಿಪಾಠ ಆರಂಭವಾಯಿತು. 27 ವರ್ಷಗಳಲ್ಲಿ 20,019 ಪ್ರಶಸ್ತಿಗಳನ್ನು ವೃತ್ತಿ ಕಲಾವಿದರಿಗೆ ನೀಡಲಾಗಿದೆ. 40,000 ಪ್ರಶಸ್ತಿಯನ್ನು ಯಕ್ಷಗಾನ ವಿದ್ವಾಂಸರಿಗೆ ನೀಡಲಾಗಿದೆ ಎಂದರು.‌

ಯಕ್ಷಗಾನ ಕಲಾರಂಗ ಸಂಸ್ಥೆ ಹಾಗೂ ಯಕ್ಷಗಾನದ ಮೇಲೆ ಅಪಾರ ಪ್ರೀತಿಹೊಂದಿದ್ದ ಪೇಜಾವರ ವಿಶ್ವೇಶತೀರ್ಥರ ಸ್ಮರಣಾರ್ಥ ಪ್ರಶಸ್ತಿ ನೀಡುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರ. ಶ್ರೀಗಳ ಹೆಸರಿನಲ್ಲಿ ನೀಡುತ್ತಿರುವುದು ಇದು 20ನೇ ಪ್ರಶಸ್ತಿ ಎಂದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಮುಖಂಡರಾದ ನಾರಾಯಣ ಹೆಗಡೆ, ಎಸ್.ವಿ.ಭಟ್, ಗಣೇಶ್ ರಾವ್ ಇದ್ದರು.

ಯಕ್ಷಗಾನ ಕಲಾರಂಗ ಪ್ರಶಸ್ತಿ ಪುರಸ್ಕೃತರು

ವಿಶ್ವೇಶತೀರ್ಥ ಪ್ರಶಸ್ತಿ: ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ಕಾಸರಗೋಡು

ಡಾ.ಬಿ.ಬಿ.ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ: ಅನಂತ್ ಕುಲಾಲ್‌

ಪ್ರೊ.ಬಿ.ವಿ.ಆಚಾರ್ಯ ಸ್ಮರಣಾರ್ಥ: ಮಹಾಬಲ ನಾಯ್ಕ್

ನಿಟ್ಟೂರು ಸುಂದರ ಶೆಟ್ಟಿ, ಮಹೇಶ್ ಶೆಟ್ಟಿ ಸ್ಮರಣಾರ್ಥ: ರಾಮಕೃಷ್ಣ ಶೆಟ್ಟಿಗಾರ್

ಬಿ.ಜಗಜೀವನ್‌ದಾಸ್‌ ಶೆಟ್ಟಿ ಸ್ಮರಣಾರ್ಥ: ಬಾಬು ಕುಲಾಲ

ವಿಶ್ವಜ್ಜ ಶೆಟ್ಟಿ ಸ್ಮರಣಾರ್ಥ: ನಗ್ರಿ ಮಹಾಬಲ ರೈ

ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ: ಪ್ರಬಾಕರ ಹೆಗಡೆ ಚಿಟ್ಪಾಣಿ

ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ: ರಾಮಕೃಷ್ಣ ಮಂದಾರ್ತಿ

ಮಾರ್ವಿ ರಾಮಕೃಷ್ಣ ಹೆಬ್ಬಾರ, ವಾದಿರಾಜ ಹೆಬ್ಬಾರ ಸ್ಮರಣಾರ್ಥ: ಮಂಜುನಾಥ್ ಭಟ್‌

ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ: ದಿನೇಶ್ ಅಮ್ಮಣ್ಣಾಯ

ಶಿರಿಯಾರ ಮಂಜು ನಾಯ್ಕ್‌ ಸ್ಮರಣಾರ್ಥ: ತಿಮ್ಮಪ್ಪ ಹೆಗಡೆ ಶಿರಳಗಿ

ಕೋಟ ವೈಕುಂಠ ಸ್ಮರಣಾರ್ಥ: ಬಸವರಾಜ

ಐರೋಡಿ ರಾಮ ಗಾಣಿಗ ಸ್ಮರಣಾರ್ಥ: ಉಮೇಶ್ ಹೆಬ್ಬಾರ್

ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ: ರಾಮಚಂದ್ರ ಹೆಗಡೆ ಮೂರೂರು

ಕಡಿಯಾಡಿ ಸುಬ್ರಾಯ ಉಪಾಧ್ಯಾ ಸ್ಮರಣಾರ್ಥ: ರಘುರಾಮ ಗೌಡ

ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ: ಸಂಜಯ್ ಕುಮಾರ್ ಶೆಟ್ಟಿ

ಪ್ರಭಾವತಿ ವಿ.ಶೆಣೈ, ವಿಶ್ವನಾಥ್ ಶೆಣೈ ಗೌರವಾರ್ಥ: ಮಹಾದೇವ ಪಟಗಾರ

ತಿಮ್ಮಯ್ಯ ಗೌರವಾರ್ಥ: ರಾಘವದಾಸ

ಯಕ್ಷಚೇತನ ಪ್ರಶಸ್ತಿ: ಪ್ರೊ.ಕೆ.ಸದಾಶಿವರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.