ADVERTISEMENT

ಯಕ್ಷಗಾನ ಉಳಿವಿಗೆ ಯುವಜನರು ಶ್ರಮಿಸಿ: ಡಾ. ಎಚ್. ಎಸ್. ಬಲ್ಲಾಳ್

ಯಕ್ಷಗಾನ ಕೇಂದ್ರದ ವಾರ್ಷಿಕೋತ್ಸವ, ಎಂ.ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:40 IST
Last Updated 29 ಜನವರಿ 2026, 7:40 IST
ಮಾರಣಕಟ್ಟೆ ಮೇಳದ ಕಲಾವಿದ ಚಂದ್ರಗೌಡ ಗೋಳಿಕೆರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮಾರಣಕಟ್ಟೆ ಮೇಳದ ಕಲಾವಿದ ಚಂದ್ರಗೌಡ ಗೋಳಿಕೆರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಉಡುಪಿ: ಯಕ್ಷಗಾನ ನಮ್ಮ ನಾಡಿನ ಅಮೂಲ್ಯ ಸಾಂಸ್ಕೃತಿಕ ಪರಂಪರೆ. ಈ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವಜನತೆಯ ಮೇಲಿದೆ ಎಂದು ಮಾಹೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು.

ಯಕ್ಷಗಾನ ಕೇಂದ್ರ ಇಂದ್ರಾಳಿ, ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್ , ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ನಡೆದ ಯಕ್ಷಗಾನ ಕೇಂದ್ರದ 53ನೇ ವರ್ಷದ ವಾರ್ಷಿಕೋತ್ಸವ ಹಾಗೂ ಎಂ.ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಕ್ಷಗಾನ ತರಬೇತಿ, ಪ್ರದರ್ಶನ ಹಾಗೂ ಅಧ್ಯಯನಗಳಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸಿದರೆ ಪ್ರಬುದ್ಧವಾದ ಈ ಕಲೆಯ ಉಳಿವಿಗೆ ಹೊಸ ಉಸಿರು ನೀಡಿದಂತಾಗುತ್ತದೆ ಎಂದರು.

ADVERTISEMENT

ಮಾಹೆ ಸಹಕುಲಪತಿ ಡಾ. ನಾರಾಯಣ ಸಭಾಹಿತ್, ಟೆಲಿಕಮ್ಯುನಿಕೇಶನ್‍ನ ನಿವೃತ್ತ ಎಂಜಿನಿಯರ್ ವೈ. ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಾರಣಕಟ್ಟೆ ಮೇಳದ ಕಲಾವಿದ ಚಂದ್ರಗೌಡ ಗೋಳಿಕೆರೆ ಅವರಿಗೆ ‘ಎಂ.ಎಂ ಹೆಗ್ಡೆ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಎಂಐಟಿ ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸರ್ಟಿಫಿಕೇಟ್ ಕೋರ್ಸ್‌ನಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ, ಭುವನಪ್ರಸಾದ್ ಹೆಗ್ಡೆ, ಕೇಂದ್ರದ ಗುರುಗಳಾದ ಉಮೇಶ್ ಸುವರ್ಣ ಗೋಪಾಡಿ, ಕೃಷ್ಣಮೂರ್ತಿ ಭಟ್ ಬಗ್ವಾಡಿ, ಬಸವ ಮುಂಡಾಡಿ ಉಪಸ್ಥಿತರಿದ್ದರು.

ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ ಶೆಟ್ಟಿ ಸ್ವಾಗತಿಸಿದರು. ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಭಿನಂದನ ಭಾಷಣ ಮಾಡಿದರು. ಮಂಜುನಾಥ ಮಯ್ಯ ಅವರು ಸರ್ಟಿಫಿಕೇಟ್ ಕೋರ್ಸ್‌ನಡಿ ತರಬೇತಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕೆ. ರಾಘವೇಂದ್ರ ತುಂಗ ನಿರೂಪಿಸಿದರು.

ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಹಿಮ್ಮೇಳ ಪ್ರತಿಭೆ, ಸರ್ಟಿಫಿಕೇಟ್ ಕೋರ್ಸ್‍ನ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ, ಕೇಂದ್ರದ ವಿದ್ಯಾರ್ಥಿಗಳಿಂದ ‘ಸಮರ ಸೌಗಂಧಿಕ’ ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.