
ಪಡುಬಿದ್ರಿ: ಎರ್ಮಾಳಿನಲ್ಲಿ ಕಂಬಳದ ತರಬೇತಿ ಕೇಂದ್ರ ಕಂಬಳ ಭವನ ಹಾಗೂ ಕೌಶಲ ಅಭಿವೃದ್ಧಿ ಘಟಕ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು ಎಂದು ರಾಜ್ಯ ಕಂಬಳ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳ ನಡೆಯುವ ಸ್ಥಳ ವೀಕ್ಷಿಸಿದ ಅವರು ಎರ್ಮಾಳಿನಲ್ಲಿ ರಾಜ್ಯ ಕಂಬಳ ಸಂಸ್ಥೆಯ ಕಚೇರಿ ತೆರೆಯಲಾಗುವುದು ಎಂದರು. ಕಂಬಳ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಓಟಗಾರರ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮ ನಡೆಯಲಿದೆ. ಇದನ್ನು ಇಲ್ಲಿಯೇ ಮಾಡಲು ಎರ್ಮಾಳು ಕಂಬಳ ಸಮಿತಿ ಒಪ್ಪಿದೆ. ಮುಂದಿನ ದಿನಗಳಲ್ಲಿ ಎರ್ಮಾಳು ಕಂಬಳದ ಕೇಂದ್ರ ಸ್ಥಾನ ಆಗಲಿದೆ ಎಂದು ಅವರು ಹೇಳಿದರು. ಎರ್ಮಾಳು ಕಂಬಳ ಸಮಿತಿಯ ಅಧ್ಯಕ್ಷ ರೋಹಿತ್ ಹೆಗ್ಡೆ ಪಾಲ್ಗೊಂಡಿದ್ದರು.
ತೆಂಕ-ಬಡಾ ಜೋಡುಕರೆ ಕಂಬಳದ 4 ಜೊತೆ ಕೋಣಗಳನ್ನು ಕರೆಗೆ ಇಳಿಸುವ ಮೂಲಕ ಡಿ.11ರಂದು ಮೊದಲ ಕುದಿ ಕಂಬಳ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.