
ಬ್ರಹ್ಮಾವರ: ಇಂದಿನ ಯುವ ಸಮುದಾಯಕ್ಕೆ ತುಂಬಾ ಅವಕಾಶಗಳು ಮತ್ತು ಸೌಲಭ್ಯಗಳಿವೆ. ಅವುಗಳನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳಿ ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಆನಂದ ಹೇಳಿದರು.
ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮಾದರಿ, ಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಪೋಷಕರು ವಿಜ್ಞಾನ ವಿಷಯಕ್ಕೆ ತುಂಬಾ ಮಹತ್ವ ನೀಡುತ್ತಾರೆ. ವಿದ್ಯಾರ್ಥಿಗಳು ಕ್ರಿಯಾತ್ಮಕ ಯೋಜನೆ, ಸಾಮರ್ಥ್ಯದ ಕಡೆಗೆ ಗಮನ ನೀಡಬೇಕು. ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಚಿತ್ರಕಲೆ ಮತ್ತು ವಿಜ್ಞಾನ ಮಾದರಿ ತಯಾರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ ಶಿಕ್ಷಕರ ಶ್ರಮ ಅಭಿನಂದನೀಯ ಎಂದರು.
ಸಂಸ್ಥೆಯ ಪ್ರಾಂಶುಪಾಲ ಜಾರ್ಜ್ ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ವಿಜ್ಞಾನದ ಮಾದರಿಯ ತಯಾರಿಕೆ ಸಂತೋಷವನ್ನು ಉಂಟು ಮಾಡುತ್ತದೆ. ವಿದ್ಯಾರ್ಥಿಗಳು ಅಲ್ಬರ್ಟ್ ಐನ್‌ಸ್ಟೀನ್ ಅವರ ಕಲ್ಪನೆ, ನ್ಯೂಟನ್‌ನಲ್ಲಿರುವ ಪ್ರಶ್ನಿಸುವ ಮನೋಭಾವ, ರವಿವರ್ಮರ ಚಿತ್ರಕಲೆ, ಅಬ್ದುಲ್ ಕಲಾಂ ಅವರಲ್ಲಿದ್ದ ಕನಸು ಕಾಣುವ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ವಸ್ತು ಪ್ರದರ್ಶನದಲ್ಲಿ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳ ಕಲಾಕುಂಚದಲ್ಲಿ ಅರಳಿದ ಸುಮಾರು 200ಕ್ಕೂ ಹೆಚ್ಚು ಚಿತ್ತ ಚಿತ್ತಾರಗಳು, ನೂತನ ವಿಜ್ಞಾನ ಮಾದರಿಗಳು, ಕರಕುಶಲ ವಸ್ತುಗಳನ್ನು ವಸ್ತು ಪ್ರದರ್ಶನದಲ್ಲಿ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.