ADVERTISEMENT

ಉಭಯ ರಾಜ್ಯಗಳು ಸ್ವ ಪ್ರತಿಷ್ಠೆ ಬದಿಗಿಡಲಿ

‘ಮಹಾದಾಯಿ’ ಕುರಿತು ಶ್ರೀಪಾದ ನಾಯ್ಕ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 8:30 IST
Last Updated 21 ಜನವರಿ 2016, 8:30 IST
ಶಿರಸಿ ತಾಲ್ಲೂಕಿನ ಸಹಸ್ರಲಿಂಗಕ್ಕೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಬುಧವಾರ ಭೇಟಿ ನೀಡಿದಾಗ ಜೈನ ಮಠದ ಪ್ರಮುಖರು ಅವರನ್ನು ಸನ್ಮಾನಿಸಿದರು
ಶಿರಸಿ ತಾಲ್ಲೂಕಿನ ಸಹಸ್ರಲಿಂಗಕ್ಕೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಬುಧವಾರ ಭೇಟಿ ನೀಡಿದಾಗ ಜೈನ ಮಠದ ಪ್ರಮುಖರು ಅವರನ್ನು ಸನ್ಮಾನಿಸಿದರು   

ಶಿರಸಿ: ಮಹಾದಾಯಿ ನೀರು ಹಂಚಿಕೆ ಸಂಬಂಧ ಕರ್ನಾಟಕ ಹಾಗೂ ಗೋವಾ ರಾಜ್ಯಗಳು ಸ್ವ ಪ್ರತಿಷ್ಠೆ ಬದಿಗಿಟ್ಟು ಕಾನೂನು ರೀತಿಯಲ್ಲಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಕೇಂದ್ರ ಪ್ರವಾಸೋದ್ಯಮ, ಯೋಗ ಮತ್ತು ಆಯುಷ್ ಸಚಿವ ಶ್ರೀಪಾದ ನಾಯ್ಕ ಹೇಳಿದರು.

ತಾಲ್ಲೂಕಿನ ಪ್ರವಾಸಿ ಕ್ಷೇತ್ರ ಸಹಸ್ರಲಿಂಗ ಹಾಗೂ ಸ್ವರ್ಣವಲ್ಲಿ ಮಠಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಉಭಯ ರಾಜ್ಯಗಳಲ್ಲಿ ಪ್ರಸ್ತುತ ಬೇರೆ ಪಕ್ಷಗಳು ಅಧಿಕಾರದಲ್ಲಿವೆ. ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತುಕತೆ ಮೂಲಕ ಮಹಾದಾಯಿ ವಿವಾದವನ್ನು ಬಗೆಹರಿಸಲು ಪ್ರಯತ್ನಿಸಲಾಗಿತ್ತು. ಇದು ರಾಷ್ಟ್ರೀಯ ಸಮಸ್ಯೆ ಅಲ್ಲವಾಗಿದ್ದು, ಮಾತುಕತೆ ಮೂಲಕ ಅಥವಾ ಕಾನೂನು ಮಾರ್ಗದಲ್ಲಿ ಬಗೆಹರಿಸಿಕೊಳ್ಳಬಹುದು ಎಂದರು.

ಸೋಂದಾ ಜಾಗೃತ ವೇದಿಕೆ ಪದಾಧಿಕಾರಿಗಳು ಸೋಂದಾದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕೆಲವು ಬೇಡಿಕೆಗಳುಳ್ಳ ಮನವಿಯನ್ನು ಸಚಿವರಿಗೆ ಸಲ್ಲಿಸಿದರು. ಶಾಲ್ಮಲಾ ನದಿ ದಡದಲ್ಲಿರುವ ಸಹಸ್ರಲಿಂಗದ ರಕ್ಷಣೆಯಾಗಬೇಕು. ನೀರಿನ ನಡುವೆ ಇರುವ ಲಿಂಗಳನ್ನು ಸವಕಳಿಯಿಂದ ತಪ್ಪಿಸಬೇಕು.

ಹುಲದೇವನಸರ ಮಾರ್ಗವಾಗಿ ಸಹಸ್ರಲಿಂಗ ತಲುಪಲು ಹೊಸ ರಸ್ತೆ ನಿರ್ಮಾಣ, ಸೋಂದಾ ಮುತ್ತಿನಕೆರೆ ವೆಂಕಟರಮಣ ದೇವಾಲಯ, ಹಳೆಯೂರಿನ ಶಂಕರನಾರಾಯಣ ದೇವಾಲಯ, ಪೇಟೆ ವೆಂಕಟರಮಣ ದೇವಾಲಯಗಳಿಗೆ ರಸ್ತೆ ವ್ಯವಸ್ಥೆ, ಸುತ್ತ ಉದ್ಯಾನ ನಿರ್ಮಾಣ, ಸ್ವರ್ಣವಲ್ಲಿ ಮಠದ ಸಮೀಪ ಇರುವ ಕೋಟೆಯ ರಕ್ಷಣೆ, ಗೈಡ್‌ಗಳ ನೇಮಕ. ಐತಿಹಾಸಿಕ ಕುರುಹುಗಳ ರಕ್ಷಣೆಗೆ ಇತಿಹಾಸ ಅಧ್ಯಯನ ಕೇಂದ್ರ ಸ್ಥಾಪನೆ, ಹಯಗ್ರೀವ ಸಮುದ್ರದ ಅಭಿವೃದ್ಧಿ, ಜೈನ ನಿಷಧಿಗಳ ಸಂರಕ್ಷಣೆ ಸೇರಿದಂತೆ ವಿವಿಧ ಅಗತ್ಯಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಂದಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಭಂಡಾರಿ, ಪ್ರಮುಖರಾದ ಸದಾನಂದ ಭಟ್ಟ, ಸುರೇಶ್ಚಂದ್ರ ಹೆಗಡೆ, ಇತಿಹಾಸ ಸಂಶೋಧಕ ಲಕ್ಷ್ಮೀಶ ಸೋಂದಾ, ಜಾಗೃತ ವೇದಿಕೆಯ ರತ್ನಾಕರ ಹೆಗಡೆ ಬಾಡಲಕೊಪ್ಪ, ಶ್ರೀಪಾದ ಹೆಗಡೆ, ಸುಬ್ರಾಯ ಜೋಶಿ, ಚಂದ್ರರಾಜ ಜೈನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.