ADVERTISEMENT

ಕೆಸರುಗದ್ದೆಯಾದ ಜಿಲ್ಲಾ ಕ್ರೀಡಾ ಮೈದಾನ!

ಪಿ.ಕೆ.ರವಿಕುಮಾರ
Published 23 ಸೆಪ್ಟೆಂಬರ್ 2013, 9:42 IST
Last Updated 23 ಸೆಪ್ಟೆಂಬರ್ 2013, 9:42 IST

ಕಾರವಾರ: ನಗರದಲ್ಲಿ ಇರುವುದೊಂದೇ ಕ್ರೀಡಾ ಮೈದಾನ. ಆದರೆ, ಅದು ಕೂಡ ವ್ಯವಸ್ಥಿತವಾಗಿಲ್ಲ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ನಿರ್ವಹಣೆಯಲ್ಲಿರುವ ಈ ಮೈದಾನ ಮಳೆ ಬಂದಾಗ ನೀರು ತುಂಬಿಕೊಂಡು ಕೆಸರುಗದ್ದೆಯಾಗಿ ಪರಿವರ್ತಿತವಾಗುತ್ತದೆ.

ಇದು ‘ಮಾಲಾದೇವಿ ಮೈದಾನ’ ಎಂದೇ ಪ್ರಸಿದ್ಧಿ. ಮೈದಾನದಲ್ಲಿ ಮಾಲಾದೇವಿ ದೇಗುಲ ಇರುವುದರಿಂದ ಆ ಹೆಸರು ಬಂದಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲ್ಲಿನ ಅವ್ಯವಸ್ಥೆ ಕೈಗನ್ನಡಿಯಾಗಿದೆ. 

ಪ್ರತಿಯೊಂದು ಜಿಲ್ಲೆಯಲ್ಲೂ ಸುಸಜ್ಜಿತ ಕ್ರೀಡಾಂಗಣ ಇದೆ. ಆದರೆ, ಉತ್ತರ ಕನ್ನಡದ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಮಾತ್ರ ಇದುವರೆಗೆ ಕ್ರೀಡಾಂಗಣ ನಿರ್ಮಾಣವಾಗಿಲ್ಲ. ಇಲ್ಲಿನ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಕ್ರೀಡಾಂಗಣ ಕೊರತೆ ಇದೆ. ಇದರಿಂದ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟು ಆಗಬೇಕೆನ್ನುವ ಹಲವರ ಕನಸಿಗೆ ಕೊಡಲಿ ಪೆಟ್ಟು ಬಿದ್ದಿದೆ.

ಹೊರಾಂಗಣ ಕ್ರೀಡೆಗಳಾದ ಫುಟ್‌ಬಾಲ್‌, ಕ್ರಿಕೆಟ್‌, ಅಥ್ಲೆಟಿಕ್‌, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಖೋ ಖೋ ಮತ್ತಿತರರ ಕ್ರೀಡೆಗಳು ಇಲ್ಲಿ ನಡೆಯುತ್ತವೆ. ಮಳೆ ಬಂದರೆ ಕ್ರೀಡಾಪಟುಗಳು ಆಡುವುದಿರಲಿ, ಮೈದಾನದಲ್ಲಿ ಕಾಲಿಡಲು ಕೂಡ ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ನೀರು ರಾಡಿಯಾಗಿರುತ್ತದೆ. ಒಳಾಂಗಣ ಕ್ರೀಡೆಗಳನ್ನು ಸುತ್ತಮುತ್ತಲಿನ ಶಾಲಾ, ಕಾಲೇಜು ಸಭಾಂಗಣದಲ್ಲಿ ನಡೆಸಬೇಕಾದ ಅನಿವಾರ್ಯತೆ ಇದೆ.

ನಗರದ ಹರಿದೇವ ನಗರದಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ಸುಮಾರು 50 ಮಕ್ಕಳಿದ್ದಾರೆ. ನಿತ್ಯ ಅವರೆಲ್ಲರೂ 4–5 ಕಿ.ಮೀ ದೂರವಿರುವ ಈ ಮೈದಾನಕ್ಕೆ ಕಾಲು ನಡಿಗೆಯಲ್ಲಿ ಬಂದು ಅಭ್ಯಾಸ ನಡೆಸಬೇಕಾದ ದುಃಸ್ಥಿತಿ ಇದೆ. 

ಮೂಲ ಸೌಕರ್ಯಗಳ ಕೊರತೆ: ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕ್ರೀಡಾಪಟುಗಳು ಉಡುಪುಗಳನ್ನು ಬದಲಿಸಲು ಕೊಠಡಿಗಳಿಲ್ಲ ಹಾಗೂ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್‌ ಸೌಲಭ್ಯ ಕೂಡ ಇಲ್ಲವಾಗಿದೆ.

ಈ ಮೈದಾನ ಮೂರು ಪ್ರವೇಶ ದ್ವಾರಗಳಿದ್ದು, ದ್ವಾರದ ಎಲ್ಲ ಗೇಟ್‌ಗಳು ತುಕ್ಕು ಹಿಡಿದಿವೆ. ಫುಟ್‌ಬಾಲ್‌ ನೆಟ್‌ಗಾಗಿ ಅಳವಡಿಸಿದ್ದ ಕಂಬಿಗಳು ಮುರಿದು ಬಿದ್ದಿವೆ.

‘ಎರಡು ವರ್ಷಗಳ ಹಿಂದೆ ಈ ಮೈದಾನಕ್ಕೆ ನಗರಸಭೆ ವತಿಯಿಂದ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಮಾಸ್ಟ್‌ ದೀಪವನ್ನು ಅಳವಡಿಸಲಾಯಿತು. ಆದರೆ, ಈಗ ಕೆಟ್ಟು ನಿಂತಿದೆ. ಇದರ ದುರಸ್ತಿಗೆ ಟೆಂಡರ್‌ ಕರೆಯಲಾಗುವುದು. ಮೈದಾನದ ಬಳಿಯಲ್ಲಿಯೇ ದೊಡ್ಡ ಚರಂಡಿ ಇದೆ. ಇದರ ಮೇಲೆ ಸ್ಲ್ಯಾಬ್‌ಗಳನ್ನು ಹಾಕುವ ಯೋಜನೆಯು ಇದೆ. ಆದರೆ, ಕ್ರೀಡಾ ಇಲಾಖೆಯು ಯಾವುದೇ ಅಭಿವೃದ್ಧಿಕಾರ್ಯ ಕೈಗೊಂಡಿಲ್ಲ’ ಎನ್ನುತ್ತಾರೆ ನಗರಸಭೆ ಸದಸ್ಯ ರತ್ನಾಕರ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.