ADVERTISEMENT

ಗೇರುಹಣ್ಣಿನಿಂದ ಇಥೆನಾಲ್ ಉತ್ಪಾದನೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 9:35 IST
Last Updated 9 ಜೂನ್ 2011, 9:35 IST

ಕುಮಟಾ: ಗೇರು ಹಣ್ಣಿನಿಂದ `ಇಥೆನಾಲ್~ ತೆಗೆಯುವ ಉದ್ಯಮದ ಬಗ್ಗೆ ಗೇರು ಅಭಿವೃದ್ಧಿ ನಿಗಮ ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ವಿನೋದ ಪ್ರಭು ತಿಳಿಸಿದರು.

ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣದಲ್ಲಿ ಬಳಕೆ ಮಾಡುವ ಪರ್ಯಾಯ ಇಂಧವಾದ ಇಥೆನಾಲ್ ಉತ್ಪಾದಿಸುವ ಬಗ್ಗೆ ಕೆಲ ಉದ್ಯಮಿಗಳ ಜತೆ ಚರ್ಚೆ ಮಾಡಲಾಗಿದೆ. ಗೇರು ಅಭಿವೃದ್ಧಿ ನಿಗಮ ಒಡೆತನದಲ್ಲಿ ಒಟ್ಟು 25,658 ಹೆಕ್ಟೇರ್ ಗೇರು ತೋಪು ಇದ್ದು, 2010-11ಕ್ಕೆ ಸಾಲಿನಲ್ಲಿ ರೂ. 403.31 ಲಕ್ಷ ಲಾಭವಾಗಿದೆ. ಮುಂದಿನ ವರ್ಷ ಇದನ್ನು ರೂ. 600 ಲಕ್ಷಗೆ ಹೆಚ್ಚಿಸುವ ಗುರಿ ಇದೆ ಎಂದರು.

ಈ ವರ್ಷ ಉದ್ಯೋಗ ಖಾತರಿ ಯೋಜನೆಯಡಿ ಗೇರು ತೋಪು ನಿರ್ವಹಣೆ ಮಾಡಲಾಗಿದೆ. ರೈತರಿಗೆ ಉಚಿತವಾಗಿ ಗೇರು ಸಸಿಗಳನ್ನು ನೀಡಿ ಪ್ರೋತ್ಸಾಹಿಸುವ ಮೂಲಕ ರಾಜ್ಯದ ಒಟ್ಟಾರೆ ಗೇರು ಉತ್ಪನ್ನ ಹೆಚ್ಚಿಸುವ ಬಗ್ಗೆ ನಿಗಮ ಕ್ರಮ ಕೈಕೊಳ್ಳುತ್ತಿದೆ ಎಂದರು.

ಉದ್ಯಮಿ ಮುರಳೀಧರ ಪ್ರಭು, ರಾಜ್ಯದಲ್ಲಿ ಕೇವಲ 35 ಸಾವಿರ ಟನ್ ಗೇರು ಬೀಜ ಉತ್ಪಾದನೆ ಮಾಡಲಾಗುತ್ತದೆ. ಆದರೆ ಸಂಸ್ಕರಣೆಗೆ ಅಗತ್ಯವಿರುವ ಉಳಿದ 1.15 ಲಕ್ಷ ಟನ್ ಗೇರು ಬೀಜ ಆಮದು ಮಾಡಿಕೊಳ್ಳಲಾಗುತ್ತಿದೆ.  ಆದರೆ ಪ್ರತಿ ವರ್ಷ ಸಂಸ್ಕರಿಸಿದ ಗೇರು ಬೀಜದ ಬೇಡಿಕೆ ಮಾತ್ರ ಶೇ 18ರಷ್ಟು ಹೆಚ್ಚಾಗುತ್ತಿದೆ. ಆದ್ದರಿಂದ ಗೇರು ತೋಪುಗಳ ಅಭಿವೃದ್ಧಿ ಅಗತ್ಯ ಎಂದರು.

ಗೇರು ಅಭಿವೃದ್ಧಿ ನಿಗಮದ ಕುಮಟಾ ಡಿ.ಎಫ್.ಓ. ಕೆ.ವಿ. ನಾಯ್ಕ, ಕಳೆದ ವರ್ಷ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು ರೂ. 1.50 ಕೋಟಿಗಳಷ್ಟು ನಿಗಮದ ಗೇರು ತೋಪು ನಿರ್ವಹಣಾ ಕಾಮಗಾರಿ ನಡೆಸಲಾಗಿದೆ. ನಿಗಮ ಕನಿಷ್ಠ ಬೆಲೆಗೆ ರೈತರಿಗೆ ಕಸಿ ಕಟ್ಟಿದ ಉಳ್ಳಾಲ-1, ಉಳ್ಳಾಲ-2 ತಳಿಯ ಗೇರು ಗಿಡಗಳನ್ನು ವಿತರಿಸುತ್ತಿದೆ ಎಂದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್. ಆರ್. ನಾಯ್ಕ, ಗೇರನ್ನು ಬೆಳೆ ಎಂದು ರೈತರು ಪರಿಗಣಿ ಸದಿರುವುದೇ ಈ ಭಾಗದಲ್ಲಿ ಗೇರು ಅಭಿವೃದ್ಧಿಗೆ  ಹಿನ್ನಡೆ ಉಂಟಾಗಿದೆ. ಈಗ ರಾಷ್ಟ್ರೀಯ ತೋಟಗಾರಿಕಾ ಮಿಶನ್ ಅಡಿಯಲ್ಲಿ ಪ್ರತಿ  ಹೆಕ್ಟೇರ್ ಗೇರು ತೋಟ ನಿರ್ಮಾಣಕ್ಕೆ ಉಚಿತ ಗೇರು ಗಿಡ ಹಾಗೂ ಮೂರು ವರ್ಷಗಳವರೆಗೆ ಒಟ್ಟು ರೂ. 20 ಸಾವಿರ ನಿರ್ವಹಣಾ ವೆಚ್ಚ ನೀಡಿ ಪ್ರೋತ್ಸಾಹಿಸಲಾಗು ತ್ತಿದೆ.

ಕರಾವಳಿಯಲ್ಲಿ ಉಳ್ಳಾಲ-1, ಉಳ್ಳಾಲ-2 ಹಾಗೂ ಘಟ್ಟ ಪ್ರದೇಶದಲ್ಲಿ ವಿ-7  ಶಿಫಾರಸು ಮಾಡಿದ ತಳಿಗಳಾಗಿವೆ. ಈಗ ರೈತರಿಗೆ ಉಚಿತವಾಗಿ ಕೊಡಲು ಇಲಾಖೆಯಲ್ಲಿ ಗೇರು ಗಿಡಗಳು ತಯಾರಿವೆ ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗಂಗಾಧರಪ್ಪ, ಅಧಿಕಾರಿ ನಿತೀಶ್ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.