ADVERTISEMENT

ಜನರನ್ನು ಕತ್ತಲಲ್ಲಿಡುವ ಪ್ರಯತ್ನ: ನಾಯ್ಕ

ಗೊಂದಲದ ಗೂಡಾದ ಚತುಷ್ಪಥ ಹೆದ್ದಾರಿ ನಿರ್ಮಾಣ ವಿಚಾರಣಾ ಸಭೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 7:23 IST
Last Updated 3 ಏಪ್ರಿಲ್ 2013, 7:23 IST

ಕುಮಟಾ: `ಚತುಷ್ಪಥ ಹೆದ್ದಾರಿಯಂಥ ಬೃಹತ್ ಯೋಜನೆಯಿಂದ ಪರಿಸರದ ಮೇಲೆ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಜನರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ವರದಿ ತಯಾರಿಸಲು  ಕಾನೂನಿನಲ್ಲಿ ಇರುವ ಅವಕಾಶವನ್ನು ಬಳಸಿಕೊಳ್ಳದೆ ಜನರನ್ನು ಕತ್ತಲೆಯಲ್ಲಿ ಇಡುವುದು ಸರಿಯಲ್ಲ' ಎಂದು ಭಟ್ಕಳ ಶಾಸಕ ಜೆ.ಡಿ.ನಾಯ್ಕ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಕರ್ನಾಟಕ- ಗೋವಾ ಗಡಿಯಿಂದ ಉಡುಪಿ ಜಿಲ್ಲೆ ಗಡಿಯ ವರೆಗೆ ನಿರ್ಮಾಣವಾಗಲಿರುವ 93.7 ಕಿ.ಮೀ. ನಿಂದ 241 ಕಿ.ಮೀ. ವರೆಗಿ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, `ಜನರಿಗಾಗಿ ಇರವ ಯೋಜನೆಯ ಬಗ್ಗೆ ಜನರು ತಿಳಿಯುವ ಹಕ್ಕು ಕಸಿಯುವುದು ಸರಿಯಲ್ಲ. ಇದು  ಪ್ರತಿಭಟನಾರ್ಹವಾಗಿದೆ' ಎಂದರು.

ಮಂಜುನಾಥ  ಚಂದಾವರ ಸೇರಿದಂತೆ ಸಾರ್ವಜನಿಕರ ಒಂದು ಗುಂಪು  ಬೈಪಾಸ್ ಮೂಲಕ ಚತುಷ್ಪಥ ಹೆದ್ದಾರಿ ಹಾದು ಹೋಗುವುದು ಬೇಡ ಎಂದು ಪ್ರತಿಭಟಿಸಿದರೆ, ಮಾಜಿ ಶಾಸಕ ಡಾ. ಎಂ.ಕಿ.ಕರ್ಕಿ, ಬೈಪಾಸ್ ಯೋಜನೆ ಜಾರಿಗೆ ಬರಲಿ ಎಂದರು. ವಕೀಲ ಶ್ರೀಧರ ಪ್ರಭು ಮಾತನಾಡಿ, ` ಕಾನೂನು ಪ್ರಕಾರ ಯಾವುದೂ ಸರಿಯಿಲ್ಲದ ಈ ವಿಚಾರಣೆಯಲ್ಲಿ ಸಾರ್ವಜನಿಕರ ನೋವು, ಭಾನವೆ ಮಾತ್ರ ತೋಡಿಕೊಳ್ಳುವುದು ಅನಿವಾರ್ಯವಾಗಿದೆ. ಪರಿಸರದ ಮೇಲೆ ಉಂಟಾಗಲಿರುವ ಪರಿಣಾಮಗಳ ಬಗ್ಗೆ  ವರದಿ ನೀಡಿದ ಕನ್ಸಲ್ಟನ್ಸಿ ಕಂಪೆನಿ  ಒಂದು ದಿನ ವಾಹನಗಳ ಓಡಾಟದ ಅಂಕಿ-ಅಂಶವನ್ನು ಲೆಕ್ಕಕ್ಕೆ ಮಾತ್ರ ಎಂಬಂತೆ ದಾಖಲಿಸಿರುವುದು ಅವೈಜ್ಞಾನಿಕ. ಅರಣ್ಯ ಇಲಾಖೆಯ ಜಾಗ ಬಳಕೆ ಮಾಡಿಕೊಳ್ಳುವ ಬಗ್ಗೆ ವರದಿಯಲ್ಲಿ ಸಾಕಷ್ಟು  ತಪ್ಪು ಮಾಹಿತಿಗಳಿದ್ದು, ಸಂಬಂಧಪಟ್ಟ ಇಲಾಖೆಯ ಒಬ್ಬ ಅಧಿಕಾರಿಯೂ ವಿಚಾರಣಾ ಸಭೆಗೆ ಹಾಜರಾಗದಿರುವುದು ನೋವಿನ  ಸಂಗತಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.