ADVERTISEMENT

ಜಿಲ್ಲೆಯ 83 ಶಾಲೆಗಳಲ್ಲಿ ದಾಖಲಾತಿ ಶೂನ್ಯ

ಪಿ.ಕೆ.ರವಿಕುಮಾರ
Published 7 ಜುಲೈ 2017, 9:51 IST
Last Updated 7 ಜುಲೈ 2017, 9:51 IST
ಜಿಲ್ಲೆಯ 83 ಶಾಲೆಗಳಲ್ಲಿ ದಾಖಲಾತಿ ಶೂನ್ಯ
ಜಿಲ್ಲೆಯ 83 ಶಾಲೆಗಳಲ್ಲಿ ದಾಖಲಾತಿ ಶೂನ್ಯ   

ಕಾರವಾರ: ಸರ್ಕಾರಿ ಶಾಲೆಗಳಲ್ಲಿ ವರ್ಷ ದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕುಸಿಯುತ್ತಿದೆ. 2017–18ನೇ ಸಾಲಿನಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ 80 ಪ್ರಾಥ ಮಿಕ ಶಾಲೆಗಳು ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ 3 ಶಾಲೆಗಳಲ್ಲಿ 1ನೇ ತರಗತಿಗೆ ಮಕ್ಕಳ ದಾಖಲಾತಿ ಶೂನ್ಯವಾಗಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆಯು 5 ತಾಲ್ಲೂಕುಗಳನ್ನು ಒಳಗೊಂಡಿದ್ದು, ಈ ಪೈಕಿ ಕಾರವಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 30 ಶಾಲೆಗಳಲ್ಲಿ ಈ ಬಾರಿ ಮಕ್ಕಳ ದಾಖಲಾತಿಯೇ ಆಗಿಲ್ಲ. ಇನ್ನು ಅಂಕೋಲಾ, ಹೊನ್ನಾವರ ಹಾಗೂ ಕುಮಟಾ ತಾಲ್ಲೂಕಿನಲ್ಲೂ ದಾಖಲಾತಿ ಇಲ್ಲದ ಶಾಲೆಗಳ ಸಂಖ್ಯೆ ಎರಡಂಕಿ ದಾಟಿದೆ. ಆದರೆ ಶೂನ್ಯ ದಾಖಲಾತಿ ಎಂಬ ಹಣೆಪಟ್ಟಿಯಿಂದ ಭಟ್ಕಳ ತಾಲ್ಲೂಕು ಮಾತ್ರ ಹೊರಗುಳಿದಿದೆ.

ಇಂಗ್ಲಿಷ್‌ ವ್ಯಾಮೋಹ: ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಹೆಚ್ಚು ಮಹತ್ವ ಪಡೆದುಕೊಂಡಿದೆ. ಉತ್ತಮ ನೌಕರಿ ಯನ್ನು ಗಿಟ್ಟಿಸಲು ಇಂಗ್ಲಿಷ್‌ ಅನಿವಾರ್ಯ ವಾಗಿದೆ. ಹೀಗಾಗಿ ಪಾಲಕರು ಇಂಗ್ಲಿಷ್‌ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ADVERTISEMENT

ಆ ಶಾಲೆಗಳು ಕೂಡ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಕ್ಕಳನ್ನು ಸೆಳೆಯು ತ್ತಿದೆ. ಈ ಎಲ್ಲ ಕಾರಣಗಳಿಂದ ಸರ್ಕಾರಿ ಶಾಲೆಗಳಲ್ಲಿ ಕ್ರಮೇಣ ಸಂಖ್ಯೆ ಕುಂಠಿತ ವಾಗುತ್ತಿದ್ದು, ಬಾಗಿಲು ಮುಚ್ಚುವ ಹಂತಕ್ಕೆ ತಲುಪಲಿದೆಯೇ ಎನ್ನುವ ಆತಂಕ ಶಿಕ್ಷಣ ಪ್ರೇಮಿಗಳನ್ನು ಕಾಡುತ್ತಿದೆ. 

ಆರ್‌ಟಿಇಯಿಂದಲೂ ಪೆಟ್ಟು:  ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟನ್ನು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಕಾಯ್ದಿರಿಸಲಾಗಿದೆ. ಈ ಮಕ್ಕಳ ಶುಲ್ಕ ವನ್ನು ಸರ್ಕಾರವೇ ಖಾಸಗಿ ಶಾಲೆಗಳಿಗೆ ಭರಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಲು ಈ ಕಾಯ್ದೆ ಪರೋಕ್ಷವಾಗಿ ದಾರಿ ಮಾಡಿಕೊಟ್ಟಿದೆ.

ವಯಸ್ಸಿನ ಗೊಂದಲ:  5 ವರ್ಷ ತುಂಬಿದ ಮಕ್ಕಳು ಈ ಹಿಂದೆ 1ನೇ ತರಗತಿಗೆ ಪ್ರವೇಶ ಪಡೆಯುತ್ತಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ 1ನೇ ತರಗತಿಗೆ ಪ್ರವೇಶ ಪಡೆ ಯಲು ಮಕ್ಕಳಿಗೆ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು ಎಂಬ ನಿಯಮ ವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿತ್ತು.

ವಿರೋಧ ವ್ಯಕ್ತವಾದ ನಿಮಿತ್ತ ಪ್ರಸಕ್ತ ವರ್ಷಕ್ಕೆ ನಿಯಮ ಸಡಿಲಿಸಿ ಮಕ್ಕಳ ದಾಖಲಾತಿ ವಯಸ್ಸನ್ನು ಇಲಾಖೆಯು 5 ವರ್ಷ 5 ತಿಂಗಳಿಗೆ ಇಳಿಸಿತು. ಅಷ್ಟರೊಳಗೆ ಹೆಚ್ಚಿನ ಮಕ್ಕಳು ಖಾಸಗಿ ಶಾಲೆಗೆ ಸೇರ್ಪಡೆಗೊಂಡಿದ್ದರು.

ಜನಾಭಿಪ್ರಾಯ ರೂಪಿಸಲು ಜಾಗೃತಿ ಜಾಥಾ
ಕನ್ನಡ ಶಾಲೆಗಳನ್ನು ಕನ್ನಡಿಗರೇ ಕೊಲ್ಲುತ್ತಿದ್ದಾರೆ. ಇಂದು ಕನ್ನಡ ಶಾಲೆಗಳನ್ನು ಸದೃಢ ಮಾಡಲು ಸರ್ಕಾರ ತುಂಬ ಪ್ರಯತ್ನ ಮಾಡುತ್ತಿದೆ. ಆದರೆ ಅದೇ ಸರ್ಕಾರ ಆರ್.ಟಿ.ಇ. ಕಾಯ್ದೆ ಜಾರಿಗೆ ತಂದು ಖಾಸಗಿ ಇಂಗ್ಲಿಷ್ ಶಾಲೆ ಪೋಷಿಸುವ ಹುನ್ನಾರವನ್ನೂ ಮಾಡುತ್ತಿದೆ.

ಇಂಥ ವೈರುಧ್ಯದ ನಿಲುವಿನ ವಿರುದ್ಧ ಜನ ಧ್ವನಿ ಎತ್ತಬೇಕಾಗಿದೆ. ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಕೆಲ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಶೂನ್ಯ ಪ್ರವೇಶದ ಆತಂಕದದ ಸನ್ನಿವೇಶದ ಬಗ್ಗೆ ಜನಾಭಿಪ್ರಾಯ ರೂಪಿಸಲು ಜಾಗೃತಿ ಜಾಥಾ ನಡೆಸಲಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು.

* * 

ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಲು ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ಪಾಲಕರು ಇಂಗ್ಲಿಷ್‌ ಶಾಲೆಯ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ
ಪಿ.ಕೆ.ಪ್ರಕಾಶ್‌
ಡಿಡಿಪಿಐ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.